ಶನಿವಾರ ತಡರಾತ್ರಿ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೂ ಡಿಕೆಶಿ ಭೇಟಿ ಕೊಟ್ಟಿರುವ ಸುದ್ದಿ ಇದೆ. ಪಕ್ಷ ವಹಿಸಿದ ಎಲ್ಲ ಚುನಾವಣಾ ಉಸ್ತುವಾರಿ ಕಾರ್ಯಗಳನ್ನು ನಿಭಾಯಿಸಿ ಯಶಸ್ವಿಯಾಗಿದ್ದು, ತನಗೆ ಅಧ್ಯಕ್ಷ ಸ್ಥಾನದ ಅವಕಾಶ ಕೊಡಿಸಬೇಕೆಂದು ಡಿಕೆಶಿ ಕೇಳಿಕೊಂಡರೆನ್ನಲಾಗಿದೆ. ಅಷ್ಟೇ ಅಲ್ಲ, ತಾನು ಕೆಪಿಸಿಸಿ ಅಧ್ಯಕ್ಷನಾದರೆ ತಮ್ಮ ಸ್ಥಾನಕ್ಕೆ ಕಂಟಕ ತರುವುದಿಲ್ಲ ಎಂದೂ ಸಿದ್ದರಾಮಯ್ಯನವರಿಗೆ ಡಿಕೆಶಿ ಆಶ್ವಾಸನೆ ಕೂಡ ಕೊಟ್ಟಿದ್ದಾರಂತೆ.
ಬೆಂಗಳೂರು(ಮೇ 28): ಕೆಪಿಸಿಸಿ ಅಧ್ಯಕ್ಷ ಗಾದಿ ಯಾರಿಗೆ ಹೋಗುತ್ತೆ ಎಂಬುದು ಸೋಮವಾರ ನಿರ್ಧಾರವಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಪಟ್ಟ ಕೊಡುತ್ತೆ ಎಂಬುದು ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಆಗಿಯೇ ಉಳಿಯಲಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರು ಹೆಚ್ಚೂಕಡಿಮೆ ಕೆಪಿಸಿಸಿ ವಿಚಾರದಲ್ಲಿ ಕಿಂಗ್'ಮೇಕರ್'ಗಳಾಗಲಿದ್ದಾರೆ. ಹೇಗಾದರೂ ಮಾಡಿ ಕೆಪಿಸಿಸಿ ಗಾದಿ ಹಿಡಿಬೇಕೆಂದು ಪಣ ತೊಟ್ಟಂತಿರುವ ಡಿಕೆ ಶಿವಕುಮಾರ್ ಕೊನೆಯ ಕ್ಷಣದವರೆಗೂ ಅತೀವ ಪ್ರಯತ್ನ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರನ್ನೂ ಡಿಕೆಶಿ ಭೇಟಿಯಾಗಿ ಲಾಬಿ ನಡೆಸುತ್ತಿರುವ ಬಗ್ಗೆ ಸುದ್ದಿಗಳು ಜೋರಾಗಿ ಹಬ್ಬುತ್ತಿವೆ.
ಖರ್ಗೆ-ಡಿಕೆಶಿ ಭೇಟಿ:
ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಇಂದು ಭೇಟಿ ಕೊಟ್ಟ ಡಿಕೆ ಶಿವಕುಮಾರ್ ತಮ್ಮ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿದರೆನ್ನಲಾಗಿದೆ. ಆದರೆ, ಮಾಧ್ಯಮಗಳು ಈ ಬಗ್ಗೆ ಮಾಹಿತಿ ಕೇಳಿದಾದ ಇಂಧನ ಸಚಿವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಿಎಂ ಜೊತೆ ಒಳ ಒಪ್ಪಂದ:
ಶನಿವಾರ ತಡರಾತ್ರಿ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೂ ಡಿಕೆಶಿ ಭೇಟಿ ಕೊಟ್ಟಿರುವ ಸುದ್ದಿ ಇದೆ. ಪಕ್ಷ ವಹಿಸಿದ ಎಲ್ಲ ಚುನಾವಣಾ ಉಸ್ತುವಾರಿ ಕಾರ್ಯಗಳನ್ನು ನಿಭಾಯಿಸಿ ಯಶಸ್ವಿಯಾಗಿದ್ದು, ತನಗೆ ಅಧ್ಯಕ್ಷ ಸ್ಥಾನದ ಅವಕಾಶ ಕೊಡಿಸಬೇಕೆಂದು ಡಿಕೆಶಿ ಕೇಳಿಕೊಂಡರೆನ್ನಲಾಗಿದೆ. ಅಷ್ಟೇ ಅಲ್ಲ, ತಾನು ಕೆಪಿಸಿಸಿ ಅಧ್ಯಕ್ಷನಾದರೆ ತಮ್ಮ ಸ್ಥಾನಕ್ಕೆ ಕಂಟಕ ತರುವುದಿಲ್ಲ ಎಂದೂ ಸಿದ್ದರಾಮಯ್ಯನವರಿಗೆ ಡಿಕೆಶಿ ಆಶ್ವಾಸನೆ ಕೂಡ ಕೊಟ್ಟಿದ್ದಾರಂತೆ.
ಎಸ್.ಆರ್.ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದು ಸಿದ್ದರಾಮಯ್ಯನವರ ಇಚ್ಛೆಯಾಗಿತ್ತು. ಆದರೆ, ಎಸ್ಸಾರ್ ಪಾಟೀಲ್ ಅವರ ಹೆಸರನ್ನು ಹೈಕಮಾಂಡ್ ತಳ್ಳಿಹಾಕಿದ್ದರಿಂದ ಸಿದ್ದರಾಮಯ್ಯನವರು ಬೇರೊಬ್ಬರನ್ನು ಬೆಂಬಲಿಸಬೇಕಿದೆ. ಅವರ ಮನಸ್ಸಿನಲ್ಲಿ ಸದ್ಯ ಬೇರಾರ ಹೆಸರೂ ಇಲ್ಲದ್ದರಿಂದ ಡಿಕೆಶಿ ಲಾಬಿ ವರ್ಕೌಟ್ ಆಗುವ ಸಾಧ್ಯತೆ ಇಲ್ಲದಿಲ್ಲ.
ಒಂದೇ ಕಾರಿನಲ್ಲಿ ಸಿಎಂ ಮತ್ತು ಡಿಕೆಶಿ:
ಸೋಮವಾರ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಪ್ರಮುಖ ಮುಖಂಡರು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ, ಹಾಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ರೋಷನ್ ಬೇಗ್, ರಮೇಶ್ ಕುಮಾರ್ ಮೊದಲಾದವರು ಪ್ರಯಾಣ ಬೆಳೆಸಿದ್ದಾರೆ. ಮೊದಲಿಗೆ ಎರಡು ಪ್ರತ್ಯೇಕ ವಿಮಾನಗಳಲ್ಲಿ ಹೋಗಲು ಯೋಜಿಸಿದ್ದರಾದರೂ ರಾಜ್ಯ ಕಾಂಗ್ರೆಸ್'ನಲ್ಲಿ ಒಗ್ಗಟ್ಟಿರುವುದನ್ನು ತೋರಿಸಲು ಎಲ್ಲರೂ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಎಚ್'ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಇಂದು ಎಲ್ಲರೂ ತೆರಳಿದ್ದಾರೆ.
ಆದರೆ, ಕುತೂಹಲದ ವಿಚಾರವೆಂದರೆ ಏರ್'ಪೋರ್ಟ್'ಗೆ ಹೋಗುವಾಗ ಸಿಎಂ ಸಿದ್ದರಾಮಯ್ಯನವರ ಜೊತೆ ಒಂದೇ ಕಾರಿನಲ್ಲಿ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಪ್ರಯಾಣಿಸಿದ್ದು. ಡಿಕೆಶಿ ಕೊನೆಯ ಕ್ಷಣದವರೆಗೂ ಕೆಪಿಸಿಸಿ ಗಾದಿಗೆ ಕಸರತ್ತು ನಡೆಸುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯೇ?
