ಬೆಂಗಳೂರು(ಜು.06): ರಾಜ್ಯ ರಾಜಕಾರಣದಲ್ಲಿ ಬಿರುಗಾಗಳಿ ಎದ್ದಿರುವ ಬೆನ್ನಲ್ಲೇ, ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಆಗಮಿಸಿದ್ದ ಕಾಂಗ್ರೆಸ್ ಶಾಸಕರ ರಾಜೀನಾಮೆ ಪತ್ರವನ್ನು ಸಚಿವ ಡಿಕೆ ಶಿವಕುಮಾರ್ ಹರಿದು ಸುದ್ದಿಯಾಗಿದ್ದಾರೆ.

ರಾಜೀನಾಮೆಗೆ ಮುಂದಾಗಿದ್ದ ಶಾಸಕ ಆರ್.ಆರ್. ನಗರ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಡಿಕೆಶಿ ಹರಿದು ಹಾಕಿದ್ದಾರೆ. ಇದರಿಂದ ಗೊಂದಲಕ್ಕೀಡಾದ ಶಾಸಕರು ಏನು ಮಾಡಬೇಕೆಂದು ತೋಚದೆ ಸುಮ್ಮನಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ತಾವು ಪತ್ರ ಹರಿದು ಹಾಕಿರುವುದು ನಿಜ ಎಂದು ಬಹಿರಂಗವಾಗಿ ಹೇಳಿದ್ದಾರೆ. ನಾನು ಪಕ್ಷ ಮತ್ತು ನನ್ನ ಮಿತ್ರರನ್ನು ರಕ್ಷಿಸಲು ಈ ರೀತಿ ಮಾಡಿದ್ದಾಗಿಯೂ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

ನನ್ನ ಗೆಳೆಯರ ತಪ್ಪು ನಿರ್ಧಾರವನ್ನು ಪ್ರಶ್ನಿಸುವ ಮತ್ತು ತಡೆಯುವ ಹಕ್ಕು ನನಗಿದ್ದು, ಅದರಂತೆ ಭಾವನೆಗಳ ಸೆಳೆತಕ್ಕೆ ಸಿಕ್ಕು ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾಗಿ ಡಿಕೆಶಿ ತಿಳಿಸಿದ್ದಾರೆ.

ನಾನು ಪತ್ರ ಹರಿದು ಹಾಕಿರುವುದು ನಿಜ, ಇದಕ್ಕೆ ಕಾನೂನು ಕ್ರಮ ಕೈಗೊಳ್ಳಲು ನನ್ನ ಸ್ನೇಹಿತರು ಮುಂದಾದರೆ ಅದನ್ನು ಸ್ವಾಗತಿಸುವೆ ಎಂದು ಡಿಕೆಶಿ ನುಡಿದರು. 

ಇದಕ್ಕೂ ಮೊದಲು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ರಾಜೀನಾಮೆ ನೀಡುವ ಶಾಸಕರ ಹಕ್ಕಿಗೆ ಚ್ಯುತಿ ತಂದಿರುವ ಡಿಕೆಶಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.