ಬೆಂಗಳೂರು :  ಕೆಲ ಬಿಜೆಪಿ ನಾಯಕರು ತಮ್ಮ ಮಾರ್ಕೆಟ್‌ ಜಾಸ್ತಿ ಮಾಡಿಕೊಳ್ಳಲು ಎಲ್ಲ ವಿಚಾರಗಳಲ್ಲೂ ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಬಿಜೆಪಿ ವಕ್ತಾರ ಸಿ.ಟಿ. ರವಿಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ, ಆಪರೇಷನ್‌ ಕಮಲ ಸಂಬಂಧ ಶ್ರೀರಾಮುಲು ಉದ್ಯಮಿಯೊಬ್ಬರೊಂದಿಗೆ ಮಾತನಾಡುತ್ತಿರುವ ಆಡಿಯೋ ಬಹಿರಂಗದಲ್ಲಿ ತಮ್ಮ ಪಾತ್ರ ಇದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಿ.ಟಿ.ರವಿ ಆಗಲಿ, ಯಾರೇ ಆಗಲಿ ಇಂತಹ ವಿಚಾರಗಳಲ್ಲಿ ತಮ್ಮ ಮಾರ್ಕೆಟ್‌ ಜಾಸ್ತಿ ಮಾಡಿಕೊಳ್ಳಲು ನನ್ನ ಹೆಸರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ನಾನೇನು ಮಾಡಲಾಗುತ್ತೆ, ಉಪಯೋಗಿಸಿಕೊಳ್ಳಲಿ ಬಿಡಿ. ನನಗೇಕೆ ಬೇಕು ಆಡಿಯೋ ಬಹಿರಂಗಪಡಿಸುವುದು ಅದೆಲ್ಲಾ? ಅಣ್ಣನವರು ಏನೇನು ಮಾಡ್ತಾರೋ ಮಾಡಲಿ ಎಂದು ಸಂಸದ ಶ್ರೀರಾಮಲು ಅವರಿಗೂ ಟಾಂಗ್‌ ನೀಡಿದರು.

ಬಳ್ಳಾರಿ ಶಾಸಕರಿಗೆ 25 ಕೋಟಿ ರು. ಆಫರ್‌ ಮಾಡಲಾಗಿದೆಯಂತಲ್ಲಾ ಎಂಬ ಪ್ರಶ್ನೆಗೆ, ಏನು ಆಡಿಯೋ? ಏನಿದೆ ಅದರಲ್ಲಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಅವರು, ಬಿಜೆಪಿಯವರಿಗೆ ನನ್ನ ಮೇಲೆ ಅನುಮಾನ ಇದ್ದರೆ, ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗೆ ನೀಡಿ ತನಿಖೆ ನಡೆಸಲಿ. ಶಾಸಕರಾದ ನಾಗೇಂದ್ರ, ಆನಂದ್‌ ಸಿಂಗ್‌, ಭೀಮಾನಾಯಕ್‌ ಇವರೆಲ್ಲಾ ಬೆಳಗ್ಗೆ ಸಂಜೆ ತಮ್ಮ ಕ್ಷೇತ್ರದಲ್ಲಿ ಹೋರಾಡಿ ಕಾಂಗ್ರೆಸ್‌ಗೆ 25ರಿಂದ 30 ಸಾವಿರ ಮತ ಕೊಡಿಸಿರುವ ಜನ. ಅವರ ಹೆಸರಿಗೆ ಮಸಿ ಬಳಿಯಲು ತಂತ್ರ ನಡೆಯುತ್ತಿದೆ ಅಷ್ಟೆಎಂದರು.

ಏಳೆಂಟು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು ನಿಜ ಎಂದು ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅದು ನನಗೆ ಹೊತ್ತಿಲ್ಲ. ಆ ಬಗ್ಗೆ ನಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕರು ಹಾಗೂ ಪಕ್ಷದ ನಾಯಕರು ಉತ್ತರ ಕೊಡುತ್ತಾರೆ. ಅವರನ್ನು ಕೇಳಿ. ನಾನೊಬ್ಬ ಕಾರ್ಯಕರ್ತ ಅಷ್ಟೆ, ಪಕ್ಷ ಹೇಳಿದ ಕೆಲಸವನ್ನು ಮಾಡಿಕೊಂಡು ಇರುತ್ತೇನೆ ಎಂದರು.