ಡಿಕೆಶಿಗೆ ಕೆಪಿಸಿಸಿಯೋ , ಮಂತ್ರಿಗಿರಿಯೋ..?

First Published 5, Jun 2018, 8:16 AM IST
DK Shivakumar says he is ready to work as a KPCC President
Highlights

ಕಾಂಗ್ರೆಸ್‌ ಕಾವಲುಪಡೆಯ ನಾಯಕ ಎಂಬ ಹೆಗ್ಗಳಿಕೆ ಪಡೆದರೂ ಪ್ರಮುಖ ಸ್ಥಾನಗಳ ವಿಚಾರ ಬಂದಾಗ ಸದಾ ವಂಚಿತರಾಗುವ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ ಅವರ ಶ್ರಮಕ್ಕೆ ಹೈಕಮಾಂಡ್‌ ಯಾವ ಸ್ಥಾನ ದಯಪಾಲಿಸಲಿದೆ?  ಈ ಪ್ರಶ್ನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ರಾಜ್ಯ ನಾಯಕರು ನಡೆಸಲಿರುವ ಸಭೆಯಲ್ಲಿ ಸ್ಪಷ್ಟಉತ್ತರವೊಂದು ದೊರೆಯುವ ಸಾಧ್ಯತೆಯಿದೆ.

ಬೆಂಗಳೂರು :  ಕಾಂಗ್ರೆಸ್‌ ಕಾವಲುಪಡೆಯ ನಾಯಕ ಎಂಬ ಹೆಗ್ಗಳಿಕೆ ಪಡೆದರೂ ಪ್ರಮುಖ ಸ್ಥಾನಗಳ ವಿಚಾರ ಬಂದಾಗ ಸದಾ ವಂಚಿತರಾಗುವ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌ ಅವರ ಶ್ರಮಕ್ಕೆ ಹೈಕಮಾಂಡ್‌ ಯಾವ ಸ್ಥಾನ ದಯಪಾಲಿಸಲಿದೆ?

ಕೆಪಿಸಿಸಿ ಅಧ್ಯಕ್ಷ ಸ್ಥಾನವೋ, ಸಚಿವ ಸ್ಥಾನವೋ ಅಥವಾ ಎರಡೂ ಹುದ್ದೆಗಳೋ? ಈ ಪ್ರಶ್ನೆಗೆ ಮಂಗಳವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ರಾಜ್ಯ ನಾಯಕರು ನಡೆಸಲಿರುವ ಸಭೆಯಲ್ಲಿ ಸ್ಪಷ್ಟಉತ್ತರವೊಂದು ದೊರೆಯುವ ಸಾಧ್ಯತೆಯಿದೆ.

ಶಿವಕುಮಾರ್‌ ಅವರು ಕೆಪಿಸಿಸಿ ಹುದ್ದೆಯನ್ನು ಬಯಸುತ್ತಿದ್ದು, ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಹುದ್ದೆ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂಬ ವಾದ ಮಂಡಿಸಿದ್ದಾರೆ ಎನ್ನಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಶಿವಕುಮಾರ್‌ ಅವರಿಗೆ ನೀಡುವುದಕ್ಕೆ ಪಕ್ಷದ ಇತರೆ ರಾಜ್ಯ ನಾಯಕರ ವಿರೋಧವಿದೆ. ಇದಕ್ಕೆ ಶಿವಕುಮಾರ್‌ ಅವರ ಡೋಂಟ್‌ಕೇರ್‌ ಸ್ವಭಾವ ಕಾರಣ ಎನ್ನಲಾಗಿದೆ.

ಇಷ್ಟಾದರೂ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಶಿವಕುಮಾರ್‌ಗೆ ನೀಡಲು ಹೈಕಮಾಂಡ್‌ಗೆ ಮನಸ್ಸಿದೆ. ಆದರೆ, ಸಚಿವ ಸ್ಥಾನದ ಜತೆಗೆ ಈ ಹುದ್ದೆ ಬೇಕು ಎನ್ನುವ ಶಿವಕುಮಾರ್‌ ಬೇಡಿಕೆಯನ್ನು ಒಪ್ಪಲು ಹೈಕಮಾಂಡ್‌ ಹಿಂಜರಿಕೆ ಹೊಂದಿದೆ ಎನ್ನಲಾಗಿದೆ.

ಹೀಗಾಗಿ ಈ ವಿಚಾರ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಬರುವ ಸಾಧ್ಯತೆಯಿದೆ. ರಾಹುಲ್‌ ಒಪ್ಪಿದರೆ ಶಿವಕುಮಾರ್‌ಗೆ ಎರಡು ಸ್ಥಾನ ದೊರೆಯಬಹುದು. ಇಲ್ಲದಿದ್ದರೆ ಅವರ ಸಚಿವ ಸ್ಥಾನಕ್ಕೆ ತೃಪ್ತಿ ಪಡ ಬೇಕಾಗುತ್ತದೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ, ಶಿವಕುಮಾರ್‌ಗೆ ಸಚಿವ ಸ್ಥಾನ ನೀಡುವುದಕ್ಕೂ ಕಾಂಗ್ರೆಸ್‌ನ ಒಂದು ಗುಂಪು ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿಯ ಟಾರ್ಗೆಟ್‌ನಲ್ಲಿ ಇರುವ ಶಿವಕುಮಾರ್‌ ವಿರುದ್ಧ ಈಗಾಗಲೇ ಐ.ಟಿ., ಇ.ಡಿ. ದಾಳಿಗಳು ನಡೆದಿವೆ. ಶಿವಕುಮಾರ್‌ ಸಚಿವರಾದ ನಂತರ ಕಠಿಣ ಕ್ರಮಗಳೇನಾದರೂ ಜರುಗಿದರೆ ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ. ಹೀಗಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡಬಾರದು ಎಂಬುದು ಈ ಗುಂಪಿನ ವಾದವೆನ್ನಲಾಗಿದೆ.

ಆದಾಗ್ಯೂ ಶಿವಕುಮಾರ್‌ಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಶಿವಕುಮಾರ್‌ಗೆ ಸಚಿವ ಸ್ಥಾನ ಮಾತ್ರ ದೊರೆಯುವುದಾದರೆ ಕಾಂಗ್ರೆಸ್‌ ಪಾಲಿಗಿರುವ ಕಂದಾಯ, ನೀರಾವರಿ ಹಾಗೂ ಕೈಗಾರಿಕೆಯಂತಹ ಕೆಲವೇ ಪ್ರಮುಖ ಖಾತೆಗಳ ಪೈಕಿ ಒಂದು ನೀಡಬೇಕಾಗುತ್ತದೆ. ಹೈಕಮಾಂಡ್‌ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡಬೇಕು.

ಇನ್ನು ಕೆಪಿಸಿಸಿ ಅಧ್ಯಕ್ಷ ಗಾದಿ ಶಿವಕುಮಾರ್‌ಗೆ ತಪ್ಪಿದರೆ, ಆ ಹುದ್ದೆಗೆ ಲಿಂಗಾಯತ ಕೋಟಾದಲ್ಲಿ ಎಂ.ಬಿ. ಪಾಟೀಲ್‌, ಈಶ್ವರ್‌ ಖಂಡ್ರೆ ಅವರಂತಹ ಹೆಸರುಗಳಿವೆ. ಬ್ರಾಹ್ಮಣ ಕೋಟಾದಲ್ಲಿ ಆರ್‌.ವಿ. ದೇಶಪಾಂಡೆ ಹಾಗೂ ಹಿಂದುಳಿದ ವರ್ಗಗಳಲ್ಲಿ ಬಿ.ಕೆ. ಹರಿಪ್ರಸಾದ್‌ ಹಾಗೂ ಪರಿಶಿಷ್ಟರ ಕೋಟಾದಲ್ಲಿ ಸಂಸದ ಮುನಿಯಪ್ಪ ಅವರು ಕೂಡ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಹುದ್ದೆ ಕೊಟ್ಟರೆ ಯೋಚಿಸಿ ನಿರ್ಧಾರ: ಡಿಕೆಶಿ

ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯ ವಹಿಸಬೇಕೋ ಎನ್ನುವುದನ್ನು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಲಿದೆ. ಹೈಕಮಾಂಡ್‌ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಹೊಣೆ ವಹಿಸಿಕೊಳ್ಳಲು ಹೈಕಮಾಂಡ್‌ ಹೇಳಿದರೆ ಏನು ಮಾಡಬೇಕು ಎಂಬುದನ್ನು ಅನಂತರ ನಿರ್ಧರಿಸುವೆ ಎಂದರು. ಕಾಂಗ್ರೆಸ್‌ನಲ್ಲಿ ನಾನು ಏಕಾಂಗಿ ಎಂಬುದು ಸುಳ್ಳು. ಏಕಾಂಗಿಯಾಗಿರುವುದು ನನ್ನ ಜಾಯಮಾನವೂ ಅಲ್ಲ. ಪಕ್ಷದ ಎಲ್ಲರೂ ನನ್ನೊಂದಿಗೆ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಏಕೆ ಸರ್ಕಾರ ಹಾಗೂ ಪಕ್ಷದಲ್ಲಿ ಸಕ್ರಿಯವಾಗಿಲ್ಲ ಎಂಬ ಪ್ರಶ್ನೆಗೆ ಚುನಾವಣೆ ಮುಗಿದ ನಂತರ ದೇವಾಲಯಗಳಿಗೆ ಭೇಟಿ ನೀಡಲು ಪ್ರವಾಸ ಹೋಗಿದ್ದೆ. ಇಷ್ಟಕ್ಕೇ ನಾನು ಕಾಣಿಸುತ್ತಿಲ್ಲ, ಸಕ್ರಿಯವಾಗಿಲ್ಲ ಎಂದು ಬಿಂಬಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

loader