ಬೆಂಗಳೂರು(ಸೆ. 08): ನಾಳೆ ಕರೆ ಕೊಡಲಾಗಿರುವ ಕರ್ನಾಟಕ ಬಂದ್'ನ್ನು ವಾಪಸ್ ಪಡೆದುಕೊಳ್ಳಬೇಕೆಂದು ಇಂಧನ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆಶಿ, ಬಂದ್'ನಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಸರಕಾರ ರೈತರ ಪರವಾಗಿ ನಿಂತಿದೆ. ಬಂದ್ ಆಚರಿಸಿದರೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಈಗಾಗಲೇ ಎರಡು ದಿನ ಶಾಲೆಗೆ ರಜೆ ಕೊಟ್ಟಿದ್ದೆವು. ಮುಂದೆ ದಸರಾ ರಜೆ ಇರುವುದರಿಂದ ಇನ್ನಷ್ಟು ರಜೆಗಳು ಕೊಟ್ಟರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ" ಎಂದು ಡಿಕೆಶಿ ಹೇಳಿದ್ದಾರೆ.

ಅಲ್ಲದೇ, ರೈತರು ತಮ್ಮ ಪ್ರತಿಭಟನೆಯನ್ನು ಶಾಂತ ರೀತಿಯಿಂದ ಮಾಡಬೇಕೆಂದು ಮನವಿ ಮಾಡಿಕೊಂಡ ಡಿಕೆಶಿ, ಸರ್ಕಾರೀ ಆಸ್ತಿಪಾಸ್ತಿ ನಾಶ ಮಾಡುವವರು, ಸರ್ಕಾರಿ ಕಚೇರಿಗೆ ನುಗ್ಗಿ ಕಾನೂನು ಕೈಗೆ ತೆಗೆದುಕೊಳ್ಳುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಈ ವೇಳೆ ಎಚ್ಚರಿಕೆ ನೀಡಿದ್ದಾರೆ.

ನಮ್ಮಲ್ಲಿ ನೀರಿಲ್ಲ ಎಂಬುದು ಗೊತ್ತಿದೆ. ಕೋರ್ಟ್ ಅಣತಿಯಂತೆ ನೀರು ಬಿಡುವುದು ಅನಿವಾರ್ಯವಾಗಿದೆ. ಆದರೆ, ರಾಜ್ಯದ ರೈತರ ಹಿತವನ್ನು ಕಾಪಾಡುವ ತನ್ನ ಜವಾಬ್ದಾರಿಗೆ ಸರಕಾರ ಬದ್ಧವಾಗಿದೆ. 10ನೇ ತಾರೀಖಿನಂದು ರೈತರ ಬೆಳೆಗೆ ನೀರು ಬಿಡಲು ನಿರ್ಧರಿಸಲಾಗಿದ್ದರೂ ಇಂದಿನಿಂದಲೇ ನೀರು ಹರಿಸುತ್ತಿದ್ದೇವೆ. ರಾಜ್ಯ ಹಾಗೂ ರೈತರ ಹಿತ ಕಾಪಾಡಲು ಸರಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ.

ವರದಿ: ಶಂಕರ್ ಪಾಗೋಜಿ, ಸುವರ್ಣನ್ಯೂಸ್