ಬೆಂಗಳೂರು[ಆ.04]: ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ದಿನಗಳು ಕೊನೆಯಾಗುತ್ತಿವೆ. ರಾಜಕೀಯವಾಗಿ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಈ ಬಗ್ಗೆ ಅವರೇ ಮರುಕಪಟ್ಟುಕೊಳ್ಳುವಂತ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ಸು ಕಾಣದೇ ರಾಜಕೀಯ ಅಂತ್ಯ ಕಾಣುವ ರಾಜಕಾರಣಿಗಳಲ್ಲಿ ಡಿ.ಕೆ.ಶಿವಕುಮಾರ್‌ ಕೂಡ ಒಬ್ಬರಾಗಬಹುದು. ಡಿ.ಕೆ.ಶಿವಕುಮಾರ್‌ ಪ್ರಬುದ್ಧ ರಾಜಕಾರಣಿಯಂತೆ ನಡೆದುಕೊಳ್ಳುತ್ತಿಲ್ಲ. ಅವರ ದರ್ಪ, ಅಹಂಕಾರ ಎಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದೆ. ಇದಕ್ಕೆ ಇತ್ತೀಚಿನ ಹಲವು ಘಟನೆಗಳಲ್ಲಿ ಅವರಿಗೆ ಹಿನ್ನಡೆಯಾಗಿರುವುದೇ ಸಾಕ್ಷಿ. ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟೊಂದು ಹಾನಿ ಆಗಲು ಡಿ.ಕೆ.ಶಿವಕುಮಾರ್‌ ಅವರೇ ಕಾರಣ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ಗೆ ಶಿವಕುಮಾರ್‌ ಟ್ರಬಲ್‌ ಶೂಟರ್‌ ಅಲ್ಲ. ರಾಜಕಾರಣಕ್ಕೆ ಅವರೇ ಟ್ರಬಲ್‌ ಆದವರು. ಅವರಿಂದ ಕಾಂಗ್ರೆಸ್‌ ಪಕ್ಷಕ್ಕೆ ಯಾವುದೇ ಲಾಭವಾಗಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಸವಾಲುಗಳಿಗೆ ಅವರ ಸ್ನೇಹಿತರೇ ಪ್ರತಿಸವಾಲ್‌ ಹಾಕಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ರಾಜಕೀಯವಾಗಿ ಹೆಚ್ಚು ದಿನ ಇರಲು ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.