ನವದೆಹಲಿ[ಅ.06]: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್‌ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಶನಿವಾರ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ವಿಚಾರಣೆ ನಡೆಸಿದರು.

ಡಿ.ಕೆ.ಸುರೇಶ್ ಗೆ 5 ತಾಸು ಇ.ಡಿ. ಡ್ರಿಲ್‌ : 28 ಆಸ್ತಿಗಳ ಕುರಿತೂ ತನಿಖೆ

ಸಿಬಿಐ ವಿಶೇಷ ನ್ಯಾಯಾಲಯವು ಡಿ.ಕೆ. ಶಿವಕುಮಾರ್‌ ಅವರನ್ನು ಎರಡು ದಿನಗಳ ಕಾಲ ವಿಚಾರಣೆಗೊಳಪಡಿಸಲು ಇ.ಡಿ.ಗೆ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಇ.ಡಿ.ಯ ಮೂವರು ಅಧಿಕಾರಿಗಳು ಶಿವಕುಮಾರ್‌ ಅವರನ್ನು ತಿಹಾರ್‌ ಜೈಲಿನಲ್ಲಿ ಬೆಳಗ್ಗೆ 10ರಿಂದ ಸಂಜೆ 3 ರ ತನಕ ವಿಚಾರಣೆ ನಡೆಸಿದರು. ಇದೇ ವೇಳೆ ಡಿ.ಕೆ. ಶಿವಕುಮಾರ್‌ ಆಪ್ತ ಸುನಿಲ್‌ ಶರ್ಮ ಅವರೂ ಇ.ಡಿ. ಶನಿವಾರ ವಿಚಾರಣೆ ನಡೆಸಿದೆ ಎನ್ನಲಾಗಿದ್ದು, ಆದರಿದು ಖಚಿತಪಟ್ಟಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಜಾಮೀನು ಅರ್ಜಿಯ ವಿಚಾರಣೆ ಅ.14ಕ್ಕೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿದ್ದು ಅ.15ಕ್ಕೆ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಳ್ಳಲಿದೆ.

ಗೆದ್ದು ಬರುತ್ತೇನೆ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ: ಡಿಕೆಶಿ ಗುಡುಗು

ಇ.ಡಿ. ಕಸ್ಟಡಿಯಲ್ಲಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಆಸ್ತಿಯ ಮೂಲ ಮತ್ತು ಹಣ ವರ್ಗಾವಣೆಯ ದಾರಿಗಳ ಬಗೆಗಿನ ವಿಚಾರಣೆ ಅಪೂರ್ಣವಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಶೇಷ ಅನುಮತಿ ಪಡೆದು ಇಡಿ ಡಿಕೆಶಿ ಅವರನ್ನು ತಿಹಾರ್‌ ಜೈಲಿನಲ್ಲಿ ವಿಚಾರಣೆ ನಡೆಸಿತ್ತು.

ಇ.ಡಿ.ಯು ಈಗಾಗಲೇ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್‌.ರಾಜಣ್ಣ ಅವರಿಗೆ ಸಮನ್ಸ್‌ ನೀಡಿದ್ದು ಅ.9ರಂದು ಅವರು ಇ.ಡಿ. ವಿಚಾರಣೆಗೆ ಹಾಜರಾಗಲಿದ್ದಾರೆ.