ಡಿಕೆ ಶಿವಕುಮಾರ್'ಗೆ ಶುರುವಾಯ್ತಾ ಶುಕ್ರದೆಸೆ?

ರಾಜಕೀಯ ಜಿದ್ದಾಜಿದ್ದಿಯಲ್ಲಿ ಕೊನೆಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್​ ಪಟೇಲ್ ಗೆಲುವು ಸಾಧಿಸಿದ್ದಾರೆ. ಮ್ಯಾಜಿಕ್​ ಸಂಖ್ಯೆ 44 ಮತಗಳನ್ನು ಪಡೆಯುವ ಮೂಲಕ ಅಹಮದ್​ ಪಟೇಲ್ ರಾಜ್ಯಸಭೆ ಪ್ರವೇಶಿಸಿದ್ದಾರೆ. ಅಹಮದ್​ ಪಟೇಲ್ ಗೆಲುವಿಗೆ ಗುಜರಾತ್​ ಕೈ ಶಾಸಕರ ಪರಿಶ್ರಮ ಎಷ್ಟು ಮುಖ್ಯವೋ ಅಷ್ಟೇ ಮಹತ್ತರ  ಪಾತ್ರವನ್ನು  ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್​ ವಹಿಸಿದ್ದಾರೆ.

dk shivakumar gains after ahmed patel win

ಬೆಂಗಳೂರು(ಆ. 9): ತಮ್ಮ ಮೇಲಿನ ಐಟಿ ದಾಳಿಯನ್ನು ಲೆಕ್ಕಿಸದೆ ಗುಜರಾತ್ ಕಾಂಗ್ರೆಸ್​ ಶಾಸಕರ ಕುದುರೆ ವ್ಯಾಪಾರವನ್ನು ತಪ್ಪಿಸಿ ಅವರಿಗೆ ರಕ್ಷಣೆ ನೀಡಿದವರು ಡಿ.ಕೆ.ಶಿವಕುಮಾರ್.  ಎಲ್ಲಾ  44 ಶಾಸಕರನ್ನು ಬೆಂಗಳೂರಿನ ಬಿಡದಿ ಬಳಿಯ ಈಗಲ್​'ಟನ್​ ರೆಸಾರ್ಟ್'​ನಲ್ಲಿ  ಇರಿಸಿದ್ದರು. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಡಿಕೆಶಿಗೆ ಏನು ಲಾಭ?
ಅಹಮದ್​ ಪಟೇಲ್ ಗೆಲುವಿನ  ಹಿಂದೆ ಡಿ.ಕೆ.ಶಿವಕುಮಾರ್'ಗೆ ಲಾಭವೂ ಇದೆ. ಈ ಗೆಲುವು ಡಿ.ಕೆ.ಶಿವಕುಮಾರ್​ಗೆ ಹೈಕಮಾಂಡ್​ ಮಟ್ಟದಲ್ಲಿ ಪ್ರಭಾವ ಹೆಚ್ಚಿಸುತ್ತೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಮೇಲೆ ಐಟಿ ದಾಳಿ ನಡೆದರೂ ಕಷ್ಟಕಾಲದಲ್ಲಿ ಜೊತೆಗೆ ನಿಂತ ಎಂಬ ಹೆಗ್ಗಳಿಗೆ  ಪಾತ್ರವಾಗಬಹುದು. ಇದಲ್ಲದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರವನ್ನು ನಿರ್ವಹಿಸಬಹುದು.

ಜೊತೆಗೆ ರಾಜ್ಯಮಟ್ಟದಲ್ಲೂ ಡಿ.ಕೆ.ಶಿವಕುಮಾರ್​ ಪ್ರಬಲ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಏಕೆಂದ್ರೆ ಇತ್ತೀಚಿಗೆ ನಡೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಡಿ.ಕೆ. ಶಿವಕುಮಾರ್​ ಪ್ರಮುಖ ಪಾತ್ರವಹಿಸಿದ್ದರು.  ಇದೀಗ ಅಹಮದ್​ ಪಟೇಲ್​ ಗೆಲುವಿನ ಹಿಂದೆಯೂ ಡಿ.ಕೆ. ಶಿವಕುಮಾರ್​ ಕೈ ಕೆಲಸ ಮಾಡಿರುವುದು ರಾಜ್ಯನಾಯಕರಲ್ಲಿ ಡಿ.ಕೆ.ಶಿವಕುಮಾರ್​ ಮೇಲೆ ಮತ್ತಷ್ಟು ವಿಶ್ವಾಸ ಹೆಚ್ಚಿಸಿದೆ. ಇದಲ್ಲದೆ, ಐಟಿ ದಾಳಿಯಿಂದ ಕಳಂಕ ಹೊತ್ತು ಪಕ್ಷದಲ್ಲೇ ಟೀಕೆಗೆ ಗುರಿಯಾಗಿದ್ದ ಡಿ.ಕೆ. ಶಿವಕುಮಾರ್ ತಮ್ಮನ್ನು ಸಮರ್ಥಿಸಿಕೊಳ್ಳಲು ಈ ಗೆಲುವು ಒಂದು ಅಸ್ತ್ರವಾಗಿದೆ.

ಒಟ್ಟಿನಲ್ಲಿ ಅಹಮದ್​ ಪಟೇಲ್ ಗೆಲುವು ಇಂಧನ  ಸಚಿವ  ಡಿ.ಕೆ.ಶಿವಕುಮಾರ್'​ಗೆ ದೊಡ್ಡ ಜಯ ಎಂದೇ ಹೇಳಬಹುದು. ಅಷ್ಟೇ ಅಲ್ಲ ತಮ್ಮ ರಾಜಕೀಯ ಎದುರಾಳಿ ಬಿಜೆಪಿಗೆ ಈ ಮೂಲಕ ತಿರುಗೇಟನ್ನು ಡಿ.ಕೆ.ಶಿವಕುಮಾರ್​ ನೀಡಿದ್ದಾರೆ.  ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಡಿಕೆಶಿ ಪ್ರಾಬಲ್ಯ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

- ಬ್ಯೂರೋ ರಿಪೋರ್ಟ್,​ ಸುವರ್ಣನ್ಯೂಸ್

Latest Videos
Follow Us:
Download App:
  • android
  • ios