ನವದೆಹಲಿ[ಸೆ.20]: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಘೋಷಿಸಿರಬಹುದು. ಆದರೆ ಆ ಆಸ್ತಿ ಮೂಲ ಯಾವುದು ಎಂದು ತಿಳಿಸಿಲ್ಲ, ನಾವು ಈ ಬಗ್ಗೆ ಪ್ರಶ್ನೆಗಳ ಮೂಲಕ ಕೆದಕಿದರೂ ಉತ್ತರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ(ಇ.ಡಿ.)ವು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಕೃಷಿ ಆದಾಯದಲ್ಲಿ ಭಾರೀ ಏರಿಕೆಯನ್ನು ಇದೇ ವೇಳೆ ಪ್ರಸ್ತಾಪಿಸಿದ ಇ.ಡಿ. ಶಿವಕುಮಾರ್‌ ಅವರು ತಮ್ಮ ಜಮೀನಿನಲ್ಲಿ ಭತ್ತ ಬೆಳೆದಿದ್ದಾರೆಯೇ ಹೊರತು ಬಂಗಾರವಲ್ಲ ಎಂದು ತಿಳಿಸಿದೆ.

ಬೇನಾಮಿ ಆಸ್ತಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಜಾಮೀನು ಆರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಗುರುವಾರ ಸುಮಾರು ಒಂದು ಮುಕ್ಕಾಲು ಘಂಟೆ ಪ್ರಬಲ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್‌ ಜನರಲ್ ಕೆ.ಎಂ.ನಟರಾಜ್, ಇ.ಡಿ.ಯು ಡಿ.ಕೆ.ಶಿವಕುಮಾರ್‌ ಆಸ್ತಿ ಮತ್ತು ಹಣಕಾಸು ಮೂಲ ಪತ್ತೆ ಹಚ್ಚುತ್ತಿದ್ದು, ಜಾಮೀನು ಅರ್ಜಿ ವಿಚಾರಣಾ ಹಂತದಲ್ಲಿ ನಾವು ಹೇಳುತ್ತಿರುವ ವಿಚಾರಗಳು ಸಮುದ್ರದಲ್ಲಿ ಮುಳುಗಿರುವ ದೊಡ್ಡ ಹಿಮಗಡ್ಡೆಯ ಕಣ್ಣಿಗೆ ಕಾಣುತ್ತಿರುವ ಭಾಗವನ್ನಷ್ಟೇ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆ ಮೂಲಕ ಇ.ಡಿ.ಯು ಡಿ.ಕೆ. ಶಿವಕುಮಾರ್‌ ಸಾಮ್ರಾಜ್ಯದ ಆಳಕ್ಕಿಳಿದು ಇನ್ನಷ್ಟುಸ್ಫೋಟಕ ಮಾಹಿತಿ ಬಗೆದಿದ್ದೇವೆ, ಬಗೆಯುತ್ತಿದ್ದೇವೆ ಎಂಬ ಸುಳಿವು ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ ವಾದ ಮಂಡನೆ ಪ್ರಾರಂಭಿಸಿದ ಕೆ.ಎಂ.ನಟರಾಜ್, 1991-2018ರ ಮಧ್ಯೆ ಶಿವಕುಮಾರ್‌ ಅವರ ತಾಯಿ ಗೌರಮ್ಮ 38 ಆಸ್ತಿಗಳನ್ನು ನಗದು ವ್ಯವಹಾರದ ಮೂಲಕ ಸಂಪಾದಿಸಿದ್ದಾರೆ. ಹಿಂದೂ ಅವಿಭಕ್ತ ಕುಟುಂಬವು ಶಿವಕುಮಾರ್‌ ತಾಯಿ ಅವರಿಗೆ ಈ ಆಸ್ತಿಕೊಳ್ಳಲು ಸಾಲ ನೀಡಿದ್ದು, ಈ ಬಗೆಗಿನ ಬ್ಯಾಂಕ್‌ ಮಾಹಿತಿ, ಆದಾಯ ತೆರಿಗೆ ಪಾವತಿ, ಪಾನ್‌ ಮಾಹಿತಿಯನ್ನೇ ನೀಡಲಾಗಿಲ್ಲ. ಒಟ್ಟು ಶಿವಕುಮಾರ್‌ ಮತ್ತವರ ಕುಟುಂಬ ಈ ಅವಧಿಯಲ್ಲಿ ಸುಮಾರು ಶೇ.75 ರಷ್ಟುಆಸ್ತಿ ಸಂಪಾದನೆ, ವರ್ಗಾವಣೆ ನಡೆಸಿದೆ.

ಶಿವಕುಮಾರ್‌ ಕುಟುಂಬ ಕೃಷಿ ಮೂಲಕ ಹತ್ತು ವರ್ಷಗಳಲ್ಲಿ 1.38 ಕೋಟಿ ರು. ಸಂಪಾದನೆ ಮಾತ್ರ ಮಾಡಿದೆ. ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳ ಆದಾಯದ ಅರ್ಧದಷ್ಟುವೆಚ್ಚವಾಗುತ್ತದೆ. ಆದರೆ ಶಿವಕುಮಾರ್‌ ಅವರ ಕೃಷಿ ಆದಾಯವನ್ನು ತೋರಿಸುವ 2 ಬ್ಯಾಂಕ್‌ ಖಾತೆಗಳಲ್ಲಿ 161 ಕೋಟಿ ರು. ವ್ಯವಹಾರ ಆಗಿದೆ. ಇನ್ನೂ 4 ಖಾತೆಗಳಿದ್ದು ಅವುಗಳ ಬಗ್ಗೆ ತನಿಖಾ ಸಂಸ್ಥೆ ಇನ್ನಷ್ಟೆಗಮನ ಹರಿಸಬೇಕಿದೆ. ಶಿವಕುಮಾರ್‌ ತಮ್ಮ ಜಮೀನಿನಲ್ಲಿ ಭತ್ತ ಬೆಳೆದಿದ್ದಾರೆಯೇ ಹೊರತು ಬಂಗಾರ ಬೆಳೆದಿಲ್ಲ. 2014ರವರೆಗೆ ಶಿವಕುಮಾರ್‌ ಅವರ ಕೃಷಿ ಆದಾಯ ವರ್ಷಕ್ಕೆ ಸರಾಸರಿ .3 ಲಕ್ಷ ಇತ್ತು. ಆದರೆ, 2014 ರಿಂದ 9 ಲಕ್ಷಕ್ಕೆ ಏರಿದೆ ಎಂದು ಇ.ಡಿ. ತನ್ನ ವಾದದಲ್ಲಿ ಆರೋಪಿಸಿದೆ.

ಶಿವಕುಮಾರ್‌ ಮಗಳು ಐಶ್ವರ್ಯಾ ಅವರಿಗೆ ಅವರಿಗೆ ಪರಿಚಯವೇ ಇಲ್ಲದವರು, ಯಾವುದೇ ಬಡ್ಡಿ, ಒಪ್ಪಂದ, ಭದ್ರತೆಯಿಲ್ಲದೆ 80 ಕೋಟಿ ರು. ನಷ್ಟುಸಾಲ ನೀಡಿದ್ದಾರೆ. ಶಿವಕುಮಾರ್‌ ತಮ್ಮ ಮತ್ತು ತಮ್ಮನ್ನು ಅವಲಂಬಿಸಿದವರ ಆಸ್ತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಚ್‌ನಲ್ಲಿ ಘೋಷಿಸಿದ್ದಾರೆ, ಆಸ್ತಿಗೆ ತೆರಿಗೆ ನೀಡಿದ್ದಾರೆ ಎಂದಾಕ್ಷಣ ಅಕ್ರಮ ಆಸ್ತಿ ಸಕ್ರಮವಾಗುವುದಿಲ್ಲ. ಕಳಂಕಿತ ಆಸ್ತಿ, ಹಣದ ಮೂಲವನ್ನು ಪತ್ತೆ ಹಚ್ಚಬೇಕಿದೆ ಎಂದು ವಾದಿಸಿದರು. ಇ.ಡಿ.ಪರ ವಾದ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನ್ಯಾಯಾಲಯ ಶನಿವಾರ ಬೆಳಗ್ಗೆ 11 ಗಂಟೆಗೆ ಮುಂಡೂಡಿತು.