ನವದೆಹಲಿ[ಸೆ.13]: ಜಾರಿ ನಿರ್ದೇಶನಾಲಯ (ಇ.ಡಿ.)ದ ನೋಟಿಸ್‌ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಪುತ್ರಿ ಐಶ್ವರ್ಯ ಅವರು ಗುರುವಾರ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಅಕ್ರಮ ಹಣ ವರ್ಗಾವಣೆ ಸಂಬಂಧ ಈಗಾಗಲೇ ಇ.ಡಿ. ವಶದಲ್ಲಿರುವ ಡಿ.ಕೆ. ಶಿವಕುಮಾರ್‌ ಹಾಗೂ ಐಶ್ವರ್ಯ ಅವರನ್ನು ಮುಖಾಮುಖಿ ಕೂರಿಸಿ ಅಧಿಕಾರಿಗಳು ವಿಚಾರಣೆ ನಡೆಸಿದರು.

ಗುರುವಾರ ಪೂರ್ವಾಹ್ನ 11 ಗಂಟೆಗೆ ಇ.ಡಿ. ಕಚೇರಿಗೆ ಹಾಜರಾದ ಐಶ್ವರ್ಯ ಅವರನ್ನು ಮಧ್ಯಾಹ್ನ 2.30ರಿಂದ ಸಂಜೆ 7.20ರವರೆಗೆ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದು ಶುಕ್ರವಾರವೂ ವಿಚಾರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಆರೋಗ್ಯದಲ್ಲಿ ಏರುಪೇರು: ಡಿಕೆಶಿ ಆಸ್ಪತ್ರೆಗೆ ದಾಖಲು

ಡಿ.ಕೆ.ಶಿವಕುಮಾರ್‌ ಅವರ ಆರೋಗ್ಯದಲ್ಲಿ ಗುರುವಾರ ತುಸು ವ್ಯತ್ಯಯ ಕಂಡಿದ್ದರಿಂದ ದಿನದ ವಿಚಾರಣೆಯನ್ನು ಇ.ಡಿ. ಅಧಿಕಾರಿಗಳು ಸಂಜೆ 6ರ ಹೊತ್ತಿಗೆ ಮುಗಿಸಿದರು. ಬಳಿಕ ಅವರನ್ನು ದೆಹಲಿಯ ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಲು ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇ.ಡಿ. ಅಧಿಕಾರಿಗಳು ಭೇಟಿಗೆ ಅವಕಾಶ ನಿರಾಕರಿಸಿದರು.