ಪಲ್ಲಕ್ಕಿ ಹೊತ್ತಿದ್ದೆವು, ಈಗ ಹೆಣ ಹೊರುವ ಸ್ಥಿತಿ!| ಮುಂಬೈನಲ್ಲಿರುವ ಯಾರೂ ಮಂತ್ರಿಯಾಗಲ್ಲ, ಬೀದಿಗೆ ಬರ್ತಾರೆ| ಅತೃಪ್ತ ಶಾಸಕರ ಬಗ್ಗೆ ಸದನದಲ್ಲಿ ಡಿಕೆಶಿ ಮಾರ್ಮಿಕ ಮಾತು
ಬೆಂಗಳೂರು[ಜು.24]: ‘‘ಮುಂಬೈನಲ್ಲಿ ಇರುವ ನಮ್ಮ ಸ್ನೇಹಿತ ಶಾಸಕರನ್ನು ನಾವು ಪಲ್ಲಕ್ಕಿ ಮೇಲೆ ಹೊತ್ತಿದ್ದೇವೆ. ಈಗ ಹೆಣ ಹೊರುವ ಸ್ಥಿತಿ ಬಂದಿರುವುದಕ್ಕೆ ನಮಗೆ ನೋವಾಗಿದೆ. ಹೂವಿನ ಹಾರ ತೆಗೆದುಕೊಂಡು ಹೋಗಬೇಕಿದ್ದವರು ಮಲ್ಲಿಗೆ, ಸೇವಂತಿಗೆ ತೆಗೆದುಕೊಂಡು ಹೋಗಬೇಕಲ್ಲಾ ಎಂದು ನಮಗೆ ಹೊಟ್ಟೆಉರಿಯುತ್ತಿದೆ. ಮುಂಬೈನಲ್ಲಿ ಇರುವ ಯಾವುದೇ ಶಾಸಕರನ್ನು ಬಿಜೆಪಿಯವರು ಮಂತ್ರಿ ಮಾಡುವುದಿಲ್ಲ. ಅವರೆಲ್ಲ ಬೀದಿಗೆ ಬರುತ್ತಾರಲ್ಲ ಎಂಬ ನೋವು ನಮಗೆ ಕಾಡುತ್ತಿದೆ’’
ಹೀಗೆಂದು ಬೇಸರ ವ್ಯಕ್ತಪಡಿಸಿದವರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್.
ಮುಖ್ಯಮಂತ್ರಿಗಳು ಮಂಡಿಸಿದ ವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಎಂಟಿಬಿ ನಾಗರಾಜ್, ಎಸ್.ಟಿ. ಸೋಮಶೇಖರ್ 30-40 ವರ್ಷಗಳ ಸ್ನೇಹಿತರಾಗಿದ್ದಾರೆ. ಅವರಿಗಾಗಿ ನಾನು ಅಳಿಲು ಸೇವೆ ಮಾಡಿದ್ದೇನೆ. ಈಗ ಅವರು ನನ್ನ ಬೆನ್ನಿಗೆ ಚೂರಿ ಹಾಕಿರುವುದು ನೋವು ತಂದಿದೆ ಎಂದರು.
ಮುಂಬೈನಲ್ಲಿ ಇರುವ ಶಾಸಕರೊಬ್ಬರ ಜತೆ ನಿನ್ನೆ ಮಾತನಾಡಿದೆ. ಆಗ ಅವರು ‘ಅಣ್ಣಾ ನಾನು ಮಂತ್ರಿ ಆಗ್ತೇನೆ, ನಮಗೆ ಡಿಸಿಎಂ, ಬೃಹತ್ ನೀರಾವರಿ, ಇಂಧನ ಖಾತೆ ಸಿಗುತ್ತದೆ ಎಂದೆಲ್ಲ ಹೇಳಿದರು. ಅದಕ್ಕೆ ನಾನು ನಿಮಗೆ ಬಿಜೆಪಿಯವರು ಟೋಪಿ ಹಾಕುತ್ತಾರೆ, ರಾಜಕೀಯ ಸಮಾಧಿ ಮಾಡುತ್ತಾರೆ, ಅವರ ಬಲೆಗೆ ಬೀಳಬೇಡಿ’ ಎಂದು ಹೇಳಿದೆ ಎಂದರು.
ರೌಡಿನಾ, ಡಕಾಯಿತಿ ಮಾಡಿದ್ದೀನಾ:
ನಮ್ಮ ಸ್ನೇಹಿತರನ್ನು ಕರೆತರಲು ಅಧಿಕೃತ ಪ್ರವಾಸದ ಮೇಲೆ ಮುಂಬೈಗೆ ಹೋದರೆ ಹೊಟೇಲ್ ಸುತ್ತ 144 ಸೆಕ್ಷನ್ ಜಾರಿ ಮಾಡುತ್ತಾರೆ. ಈ ಸ್ನೇಹಿತರು ನಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿ, ಹೋಟೆಲ್ ಒಳಗೆ ಬಿಡಬಾರದು ಎಂದು ಮನವಿ ಮಾಡುತ್ತಾರೆ. ನೂರಾರು ಪೊಲೀಸರನ್ನು ನಿಯೋಜಿಸುತ್ತಾರೆ, ನಾನೇನು ರೌಡಿ ಶೀಟರಾ, ಡಕಾಯತಿ ಮಾಡಿದ್ದೆನಾ? ಹೊಟೇಲ್‌ನಲ್ಲಿ ರೂಂ ಬುಕ್ ಮಾಡಿದ್ದಾಗ್ಯೂ ಆಡಳಿತ ಮಂಡಳಿ ರೂಂ ರದ್ದು ಮಾಡಿರುವುದಾಗಿ ಹೇಳುತ್ತಾರೆ. ಇಷ್ಟೇ ಅಲ್ಲ ತಮ್ಮನ್ನು ಅರೆಸ್ಟ್ ಮಾಡಿ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಕಳಿಸಿದರು. ಸಚಿವನಾಗಿರುವ ತಮಗೆ ಈ ರೀತಿಯಾದರೆ ಹೇಗೆ, ಸಭಾಧ್ಯಕ್ಷರು ತಮಗೆ ರಕ್ಷಣೆ ನೀಡಬೇಕು ಎಂದು ಶಿವಕುಮಾರ್ ಮನವಿ ಮಾಡಿದರು.
ನಮಗೂ ಕೂಡಿ ಹಾಕಲು ಬರುತ್ತಿತ್ತು:
ನಮ್ಮ ಸ್ನೇಹಿತರು ರಾಜೀನಾಮೆ ನೀಡಲು ಬಂದಾಗ ಅವರನ್ನು ಕೂಡಿ ಹಾಕಲು ನಮಗೂ ಬರುತ್ತಿತ್ತು. ಆದರೆ ಅಂತಹ ಕೆಲಸ ತಾವು ಮಾಡಲಿಲ್ಲ. ಮುನಿರತ್ನ, ಎಂಟಿಬಿ ನಾಗರಾಜ, ಬೈರತಿ ಬಸವರಾಜ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಿ ಮನವೊಲಿಸುವ ಸಂದರ್ಭದಲ್ಲಿ ಮನೆಯಲ್ಲಿ ಕೂಡಿ ಹಾಕಲು ಬರುತ್ತಿತ್ತು. ಆದರೆ ನಾವು ಅಂತಹ ಕೆಲಸ ಮಾಡಲಿಲ್ಲ. ಯಾಕೆಂದರೆ ಅವರ ಮೇಲೆ ನಮಗೆ ತುಂಬಾ ವಿಶ್ವಾಸ, ನಂಬಿಕೆ ಇತ್ತು. ಅದರೆ ಅವರು ನನ್ನ ಬೆನ್ನಿಗೆ ಚೂರಿ ಹಾಕಿದರಲ್ಲ ಎಂಬ ನೋವು ಕಾಡುತ್ತಿದೆ ಎಂದರು.
ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?
ಜೈಲಿಗೆ ಹೋಗಲು ಸಿದ್ಧ: ತಮ್ಮ ವಿರುದ್ಧ ಇರುವ ಐಟಿ, ಇಡಿ ಇತ್ಯಾದಿ ಪ್ರಕರಣಗಳ ವಿರುದ್ಧ ಹೋರಾಡುವ ಶಕ್ತಿ ಇದೆ, ಎಲ್ಲರನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಜೈಲಿಗೆ ಹೋಗಲು ಸಹ ನಾನು ಸಿದ್ದ, ಎಂತೆಂತವರೋ ಜೈಲಿಗೆ ಹೋಗಿದ್ದಾರೆ, ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ ಎಂದು ಹೇಳಿದರು.
ಯತ್ನಾಳ ವಿರುದ್ಧ ಮಾನನಷ್ಟ ಕೇಸು
ರಾಜಕೀಯ ಯುದ್ಧದಲ್ಲಿ ನಾನು ಕುಮಾರಸ್ವಾಮಿ, ದೇವೇಗೌಡ ಅವರ ವಿರುದ್ಧ ಹೋರಾಡಿದ್ದೇನೆ. ಯಡಿಯೂರಪ್ಪ, ಶ್ರೀರಾಮುಲು ಅವರ ವಿರುದ್ಧ ಮಾತನಾಡಿದ್ದೇನೆ. ಅವರು ಕೂಡಾ ನನ್ನನ್ನು ಶಕುನಿ, ಜೈಲಿಗೆ ಹೋಗುತ್ತಾರೆ ಎಂದೆಲ್ಲ ಟೀಕೆ ಮಾಡಿದ್ದಾರೆ. ಆದರೆ ರಾಜಕೀಯವಾಗಿ ಯಾವುದೇ ರೀತಿಯ ಭಿನ್ನಮತ ಇಲ್ಲದಿದ್ದರೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ವಿರುದ್ಧ ಇರುವ ಐಟಿ, ಇಡಿ ಮುಂತಾದ ಕೇಸ್‌ಗಳಿಂದ ಮುಕ್ತರಾಗಲು ಬಿಜೆಪಿಯ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಆರೋಪಿಸಿದರು. ಈ ರೀತಿ ಆರೋಪದಿಂದ ಪ್ರಕರಣದ ವಿಚಾರಣೆ ನಡೆಯುತ್ತಿರುವ ಕೋರ್ಟ್ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಹೇಳಬೇಕು. ಹಾಗಾಗಿ ಇಂತಹ ಹೇಳಿಕೆ ನೀಡಿರುವ ಯತ್ನಾಳ ವಿರುದ್ಧ ನಾನು 2.4 ಕೋಟಿ ರು.ಗಳ ಮಾನನಷ್ಟಮೊಕದ್ದಮೆ ಹಾಕಿ ತಾರ್ಕಿಕ ಅಂತ್ಯ ಕಾಣಿಸಲು ಉದ್ದೇಶಿಸಿದ್ದೇನೆ. ನನಗೆ ಬೆಳಗಾವಿ ಕುಸ್ತಿಯೂ ಗೊತ್ತು, ಮೈಸೂರು ಭಾಗದ ಕುಸ್ತಿಯೂ ಸಹ ಗೊತ್ತು ಎಂದು ಏರಿದ ದನಿಯಲ್ಲಿ ಹೇಳಿದರು.
