ಡಿಕೆ ರವಿ ಸಾವಿನ ತನಿಖೆ ಮುಕ್ತಾಯಗೊಳಿಸಿರುವ ಸಿಬಿಐ ಅಧಿಕಾರಿಗಳು ಕೋರಮಂಗಲದ ಫ್ಲಾಟ್​ನ ಕೀ ವಾಪಸ್​ ನೀಡಲು ಬಂದಿದ್ದರು. ಆದ್ರೆ ತಮ್ಮ ಮಗನ ತನಿಖೆಯನ್ನ ಮಾವ ಹುನುಮಂತರಾಯಪ್ಪ, ಸೊಸೆ ಕುಸುಮಾ ಇಬ್ಬರೂ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ ತಾಯಿ ಗೌರಮ್ಮ ಕೀ ಪಡೆಯಲು ನಿರಾಕರಿಸಿದ್ದಾರೆ.

ಬೆಂಗಳೂರು (ಏ.04):  ಡಿಕೆ ರವಿ ಸಾವಿನ ತನಿಖೆ ಮುಕ್ತಾಯಗೊಳಿಸಿರುವ ಸಿಬಿಐ ಅಧಿಕಾರಿಗಳು ಕೋರಮಂಗಲದ ಫ್ಲಾಟ್​ನ ಕೀ ವಾಪಸ್​ ನೀಡಲು ಬಂದಿದ್ದರು. ಆದ್ರೆ ತಮ್ಮ ಮಗನ ತನಿಖೆಯನ್ನ ಮಾವ ಹುನುಮಂತರಾಯಪ್ಪ, ಸೊಸೆ ಕುಸುಮಾ ಇಬ್ಬರೂ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ ತಾಯಿ ಗೌರಮ್ಮ ಕೀ ಪಡೆಯಲು ನಿರಾಕರಿಸಿದ್ದಾರೆ.

ಡಿಕೆ ರವಿ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ಮುಕ್ತಾಯಗೊಳಿಸಿರುವ ಸಿಬಿಐ ಇದು ವೈಯಕ್ತಿಕ ಕಾರಣದಿಂದ ಮಾಡಿಕೊಂಡ ಆತ್ಮಹತ್ಯೆ ಎಂದು ವರದಿ ಸಲ್ಲಿಸಿದ್ದರು. ತನಿಖೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಲಾಟ್​ನ ಬೀಗದ ಕೈ ಅನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸುವ ಉದ್ದೇಶದಿಂದ ಸಿಬಿಐ ಅಧಿಕಾರಿಗಳು ನಗರಕ್ಕೆ ಬಂದಿದ್ದರು. ಆದ್ರೆ ಕೀ ಪಡೆಯಲು ನಿರಾಕರಿಸಿರುವ ರವಿ ತಾಯಿ ಗೌರಮ್ಮ ತಮ್ಮ ಮಗನ ಸಾವಿನ ತನಿಖೆಯನ್ನು ಸರಿಯಾಗಿ ಮಾಡಿಲ್ಲ, ಹಾಗಾಗಿ ಮರು ತನಿಖೆ ಮಾಡುವಂತೆ ಮನವಿ ಸಲ್ಲಿಸಲು ಮುಂದಾದ್ರು. ಆದ್ರೆ ಮನವಿ ಸ್ವಿಕರಿಸಲು ನಿರಾಕರಿಸಿದ ಸಿಬಿಐ ಅಧಿಕಾರಿಗಳು ತೆರಳಿದ್ದಾರೆ. ತಮ್ಮ ಮಗನ ಸಾವಿನ ತನಿಖೆ ದಾರಿ ತಪ್ಪಲು ಮಾವ ಹನುಮಂತರಾಯಪ್ಪ ಮತ್ತು ಸೊಸೆ ಕುಸುಮಾ ಕಾರಣ ಎಂದು ಡಿಕೆ ರವಿ ತಾಯಿ ಗೌರಮ್ಮ ಆರೋಪಿಸಿದ್ದಾರೆ.

ಡಿಕೆ ರವಿ ಸಾವು ಆತ್ಮಹತ್ಯೆ ಎಂದು ವರದಿ ನೀಡಿರುವ ಸಿಬಿಐ ಅದಕ್ಕೆ ಪೂರಕವಾದ ದಾಖಲೆಗಳನ್ನು ಕುಟುಂಬಕ್ಕೆ ನೀಡಿಲ್ಲ. ಆರ್​ಟಿಐ ಮೂಲಕ ಮನವಿ ಸಲ್ಲಿಸಿದರೂ ಸಿಬಿಐ ಸಂಗ್ರಹಿಸಿರುವ ಸಾಕ್ಷ್ಯಾಧಾರ, ದಾಖಲೆಗಳು, ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾಖಲೆ ನೀಡುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ನಿರ್ಧಾರಕ್ಕೆ ಡಿಕೆ ರವಿ ಕುಟುಂಬ ಬಂದಿದೆ. ಜೊತೆಗೆ ಪ್ರಕರಣದ ಮರುತನಿಖೆಗೆ ಕೋರಿ ಕೋರ್ಟ್​ ಮೊರೆ ಹೋಗಲು ಮುಂದಾಗಿದೆ.