Asianet Suvarna News Asianet Suvarna News

ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ: ದ.ಕ.ಕ್ಕೆ 29ನೇ ಸ್ಥಾನ!

  • ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿ,ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ  29ನೇ ಸ್ಥಾನ
  • ಹೆಚ್ಚುತ್ತಿರುವ ಜನಸಂಖ್ಯೆಯಿಂದ ದೇಶಕ್ಕೆ ಗಂಭೀರ ಸಮಸ್ಯೆ  
DK District 29th Place at Male Vasectomy Surgery
Author
Bengaluru, First Published Jul 13, 2018, 2:46 PM IST

ಮಂಗಳೂರು(ಜು.13): ನಿರಂತರ ಜನಸಂಖ್ಯೆ ಏರಿಕೆಯಾಗುತ್ತಿದ್ದರೂ ಬುದ್ಧಿವಂತರ ಜಿಲ್ಲೆಯೆಂದು ಬಿಂಬಿಸಲಾಗಿರುವ ದಕ್ಷಿಣ ಕನ್ನಡದ ಪುರುಷರು ಮಾತ್ರ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಮುಂದಾಗುತ್ತಿಲ್ಲ. ಕೇವಲ ಬೆರಳೆಣಿಕೆ ಪುರುಷರು ಮಾತ್ರ ಈ  ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯಲ್ಲಿ  29ನೇ ಸ್ಥಾನಕ್ಕೆ ಕುಸಿದಿದೆ!

ನಗರದ ಪುರಭವನದಲ್ಲಿ ಸೋಮವಾರ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಮಾಹಿತಿ ನೀಡಿದ ಜಿ.ಪಂ. ಸಿಇಒ ಡಾ.ಎಂ.ಆರ್. ರವಿ, ಪುರುಷರ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಕುರಿತು ದಕ್ಷಿಣ ಕನ್ನಡದಲ್ಲಿ ಜಾಗೃತಿ ನೀರಸವಾಗಿದೆ. ರಾಜ್ಯದಲ್ಲೇ 29ನೇ ಸ್ಥಾನದಲ್ಲಿದೆ. ತಪ್ಪು ಕಲ್ಪನೆಗಳಿಂದ, ಭ್ರಮೆಗಳಿಂದ ಜನರು ಹೊರಬಾರದಿರುವುದೇ ಇದಕ್ಕೆ ಕಾರಣ. ಪುರುಷ ಸಂತಾನಹರಣ ವಿಧಾನಗಳ ಕುರಿತು ಇನ್ನಷ್ಟು ಜಾಗೃತಿ ಮೂಡಿಸಬೇಕಾಗಿದೆ. ಅಭಿಯಾನದ ಮಾದರಿಯಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜನಸಂಖ್ಯೆ ಏರಿಕೆ ಎನ್ನುವುದು ಧರ್ಮದ ಸಮಸ್ಯೆಯಲ್ಲ. ಬದಲಾಗಿ ಮನಸ್ಥಿತಿಯ ಸಮಸ್ಯೆ. ಮುಹೂರ್ತ ಫಿಕ್ಸ್ ಮಾಡಿ ಮಕ್ಕಳನ್ನು ಹೆರುವ ಕಾಲವೂ ಈಗ ಬಂದಿದೆ. ಹೀಗೇ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ ಎಂದರು.

ಪುರುಷರೂ ಮುಂದಾಗಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಪ್ರತಿವರ್ಷ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡುವ ಗಂಡಸರ ಸಂಖ್ಯೆ 20 ರಿಂದ 30 ಮಾತ್ರ. ಆದರೆ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ದೊಡ್ಡ ಸಂಖ್ಯೆಯಲ್ಲಿ ಮಾಡಿಸಿಕೊಳ್ಳುತ್ತಿರುವವರು ಮಹಿಳೆಯರೇ ಆಗಿದ್ದಾರೆ. ಪುರುಷರು ಕೂಡ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಜನಸಂಖ್ಯೆ ಹೀಗೇ ಮುಂದುವರಿದರೆ ಮುಂದಿನ 50-60 ವರ್ಷಗಳಲ್ಲಿ ದೇಶದ ಜನಸಂಖ್ಯೆ ಸಾವಿರ ಕೋಟಿ ಮೀರಿದರೂ ಆಶ್ಚರ್ಯವಿಲ್ಲ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನಸಂಖ್ಯೆ ಸ್ಥಿರತೆಯಲ್ಲಿದೆ. ಒಂದು ಕುಟುಂಬದ ಮಕ್ಕಳ ಅನುಪಾತ 1.5ರಷ್ಟಿದೆ. ರಾಜ್ಯ, ದೇಶದಲ್ಲೂ ಜನಸಂಖ್ಯೆ ನಿಯಂತ್ರಣಕ್ಕೆ ಬರಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜನಸಂಖ್ಯೆ ಏರುತ್ತಿದ್ದರೂ ಭೌಗೋಳಿಕ ವ್ಯಾಪ್ತಿ ಮೊದಲಿದ್ದಷ್ಟೇ ಇದೆ. ಏರುತ್ತಿರುವ ಜನಸಂಖ್ಯೆಯಿಂದ ಬಡತನ, ನಿರುದ್ಯೋಗದ ಸಮಸ್ಯೆ ಉಲ್ಭಣಗೊಂಡು ದೇಶಕ್ಕೆ ಮಾರಕವಾದ ಪರಿಸ್ಥಿತಿ ಕಂಡುಬಂದಿದೆ. ಆದ್ದರಿಂದ ಇದರ ನಿಯಂತ್ರಣಕ್ಕೆ ಪಣ ತೊಡಲೇಬೇಕು ಎಂದು ಹೇಳಿದರು.

ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್‌ಸ್ಟ್ರೀಟ್ ಕಾಲೇಜು ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಉಪನ್ಯಾಸ ನೀಡಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿಕಂದರ್ ಪಾಷಾ, ಜಿಲ್ಲಾ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಜಂಟಿ ನಿರ್ದೇಶಕಿ ಡಾ.ದಮಯಂತಿ ಕೃಷ್ಣಮೋಹನ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ.ಸವಿತಾ ಮತ್ತಿತರರು ಇದ್ದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

Follow Us:
Download App:
  • android
  • ios