ಬೆಂಗಳೂರು[ಜು.06]: ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳಾಗುತ್ತಿದ್ದು, ಅಸಮಾಧಾನಗೊಂಡಿರುವ ಸುಮಾರು 13 ಮಂದಿ ಶಾಸಕರು ರಜೀನಾಮೆ ನೀಡಲು ಸಜ್ಜಾಗಿದ್ದಾರೆ ಎಂಬ ಮಾತುಗಳು ಜೋರಾಗಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಶಾಸಕರ ನಡೆಗೆ ಗರಂ ಆಗಿದ್ದಾರೆ. ಅಲ್ಲದೇ ಇದೆಲ್ಲಾ ಕೇವಲ ವದಂತಿ, ತಮ್ಮ ಬ್ಯುಸಿನೆಸ್ ಮಾಡಿಕೊಳ್ಳಲು ಇಂತಹ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಶಾಸಕರ ರಾಜೀನಾಮೆ ಕುರಿತಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ 'ಈ ಮಹಾನುಭಾವರ ಬರುತ್ತಾರೆಂದು ನಾನು ಕಾಯ್ತಾ ಕೂರ್ಬೇಕಾ? ಅವ್ರು ಪುಕಾರು ಹಬ್ಬಿಸಿ ಅವ್ರ ಬ್ಯುಸಿನೆಸ್ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ, ಅದನ್ನು ನೀವು ನಂಬುತ್ತಿದ್ದೀರಿ. ಎಲ್ಲಕ್ಕೂ ಒಂದು ನಿಯಮ ಇದೆ. ಮೂರಲ್ಲ ಮೂವತ್ತು ಮಂದಿ ಬರಲಿ ನಾನೇನು ಬೇಡ ಅಂದಿದ್ದೇನಾ.? ಇಲ್ಲಯವರೆಗೆ ಯಾರೂ ನನ್ನನ್ನ ಸಂಪರ್ಕ ಮಾಡಿಲ್ಲ. ಅವ್ರು ಬರ್ತಾರೆ ಅಂದ್ರೆ ಮಾತಾಡಿಸೋಕೆ ನಾನೇನು ಸಂತೆಯಲ್ಲಿ ಇರೋ ಕುರಿನಾ..?' ಎಂದು ಅತೃಪ್ತರ ವಿರುದ್ಧ ಸ್ಪೀಕರ್ ಸಿಟ್ಟು ಪ್ರದರ್ಶಿಸಿದ್ದಾರೆ.

ದೋಸ್ತಿ ಪತನ?: ರಾಜೀನಾಮೆ ನೀಡುತ್ತಿರುವವರು 13 ಅಲ್ಲ 14 ಶಾಸಕರು!

ರಾಜೀನಾಮೆ ಕೇವಲ ವದಂತಿ ಎಂದಿರುವ ಸ್ಪೀಕರ್ 'ಯಾರು‌ ನನ್ನನ್ನು ಇದುವರೆಗೂ ಸಂಪರ್ಕ ಮಾಡಿಲ್ಲ. ಅವರು ತಮ್ಮ ವ್ಯವಹಾರಗಳನ್ನು ಮಾಡಿಕೊಳ್ಳೋದಕ್ಕೆ ಹೀಗೆ ಮಾಡುತ್ತಿರಬಹುದು. ಇದು ಬ್ಲಾಕ್ ಮೇಲಿಂಗ್ ತಂತ್ರ ಅನಿಸುತ್ತೆ. ಬಿಸಿನೆಸ್ ಮಾಡೋಕ್ಕೆ ಬ್ಲಾಕ್ ಮೇಲ್ ಮಾಡ್ತಾ ಇದ್ದಾರೆ. ಅವರನೆಲ್ಲ ನಂಬಬೇಡಿ, ನನನ್ನು ನಂಬಿ' ಎಂದಿದ್ದಾರೆ.

13 ಶಾಸಕರ ರಾಜೀನಾಮೆ? ಹೀಗಾಗಲಿದೆ ಸರ್ಕಾರದ ನಂಬರ್ ಗೇಮ್

ಶಾಸಕರ ಈ ವರ್ತನೆ ಕುರಿತಾಗಿ ಕಳವಳ ವ್ಯಕ್ತಪಡಿಸಿದ ರಮೇಶ್ ಕುಮಾರ್ 'ಜನರು ಎಂದರೆ ಇವರಿಗೆ ಭಯವೇ ಇಲ್ವಲ್ರೀ..? ನಾವೆಲ್ಲ ಜನರಿಗೆ ಹೆದರಿ ಭಯದಿಂದ ಬದುಕಬೇಕು, ಆದರೆ ಇವರೆಲ್ಲಾ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ಅಲ್ಲ. ಶಾಸಕರ ಈ ರೀತಿಯ ನಡವಳಿಕೆ ಸರಿಯಲ್ಲ. 13 ಶಾಸಕರು ರಾಜೀನಾಮೆ ನೀಡುವಂತಿದ್ದರೆ ನಮ್ಮ ಕಚೇರಿಗೆ ಬರಬೇಕು. ನನಗೂ, ನನ್ನ ಸೆಕ್ರೆಟರಿಗೆ ಫೋನ್ ಮಾಡಿ ಸಮಯ ಕೇಳಿಲ್ಲ' ಎಂದಿದ್ದಾರೆ.