ಬೆಳಗಾವಿಯ ಬಂಡಾಯದ ಬೆಂಕಿ ಶಮನವಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯಲ್ಲೂ ಅಸಮಾಧಾನದ ಬೆಂಕಿ ಕಾಣಿಸಿಕೊಂಡಿದೆ. ಸಚಿವ ಸ್ಥಾನದ ಸಂಬಂಧ ಬೆಳಗಾವಿ ಗಾಳಿ ಗಣಿನಾಡು ಬಳ್ಳಾರಿಗೂ ಬೀಸಲಾರಂಭಿಸಿದೆ.

ಬಳ್ಳಾರಿ,(ಸೆ.19): ಬೆಳಗಾವಿಯ ಬಂಡಾಯದ ಬೆಂಕಿ ಶಮನವಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯಲ್ಲೂ ಅಸಮಾಧಾನದ ಬೆಂಕಿ ಕಾಣಿಸಿಕೊಂಡಿದೆ. ಸಚಿವ ಸ್ಥಾನದ ಸಂಬಂಧ ಬೆಳಗಾವಿ ಗಾಳಿ ಗಣಿನಾಡಿಗೂ ಬೀಸಲಾರಂಭಿಸಿದೆ.

ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡುವಂತೆ ರಮೇಶ್​ ಜಾರಕಿಹೊಳಿ ಹೇಳಿದ್ದು, ಇದು ಕೆಲವು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸದಾಗಿ ಬಂದವರಿಗೆ ಸಚಿವ ಸ್ಥಾನ ಹೇಗೆ ಕೊಡುತ್ತೀರಿ? ಅಂತ ಕೆಲ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಳೆದ ಕೆಲ ದಿನಗಳಿಂದ ಜಾರಕಿಹೊಳಿ ಬ್ರದರ್ಸ್ ನಡೆ ಕಾಂಗ್ರೆಸ್​ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಮೈತ್ರಿ ಸರ್ಕಾರ ಉರುಳುವ ಮಟ್ಟಕ್ಕೆ ಬಂದು ನಿಂತಿತ್ತು. ಆದರೆ, ಖುದ್ದು ಸಿಎಂ ಕುಮಾರಸ್ವಾಮಿ ಅವರೇ ಅಖಾಡಕ್ಕೆ ಇಳಿದು ಜಾರಕಿಹೊಳಿ ಸಹೋದರರ ಸಿಟ್ಟು ತಣ್ಣಗಾಗಿಸಿದ್ದಾರೆ. 

ಆದರೆ, ಸಿಎಂ ಮುಂದೆ ರಮೇಶ ಜಾರಕಿಹೊಳಿ ಕೆಲ ಷರತ್ತುಗಳನ್ನ ಹಾಕಿದ್ದು, ಅದರಲ್ಲಿ ಬಳ್ಳಾರಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕು, ಅದರಲ್ಲಿ ತಮ್ಮ ಸಮುದಾಯದ ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ನೀಡುವಂತೆ ರಮೇಶ್ ಜಾರಕಿಹೊಳಿ ಲಾಬಿ ನಡೆಸಿದ್ದರು. ಇದು ಬಳ್ಳಾರಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ಹೇಗೆ ಕೊಡ್ತೀರಿ? ಇತರೆ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ತುಕಾರಾಂ, ಭೀಮಾನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ ಗರಂ ಅಗಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿಯ ಜಾರಕಿಹೊಳಿ ಸಹೋದರರನ್ನು ಸಮಾಧಾನಗೊಳಿಸಿರುವುದರ ಬೆನ್ನಲ್ಲೇ ಬಳ್ಳಾರಿ ನಾಯಕರು ಸಿಡಿದೆದ್ದಿರುವುದು ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಕ್ಕೆ ಮತ್ತೊಂದು ತಲೆ ನೋವಾಗಲಿದೆ.