ಬೆಂಗಳೂರು [ಜು.29]:  ಸಿದ್ದರಾಮಯ್ಯ ಅವರು ರಾಜಕೀಯವಾಗಿ ಸುಳ್ಳು ಹೇಳುತ್ತಿದ್ದಾರೆ. ಅವರು ಎಲ್ಲಾ ಶಾಸಕರಿಗೆ ಕೊಟ್ಟಿರುವ ರೀತಿಯಲ್ಲೇ ನಮಗೂ ಅನುದಾನ ಕೊಟ್ಟಿದ್ದಾರೆ. ವಿಶೇಷವಾಗಿ ನನಗೇನೂ ಕೊಟ್ಟಿಲ್ಲ. ಇನ್ನು ನನ್ನಿಂದಲೇ ಕೆಲವೊಂದು ಸಹಾಯ ಪಡೆದುಕೊಂಡಿದ್ದಾರೆ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್‌ ಹೇಳಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದೆ ಎಂದು ಅವರು ಸುಳ್ಳು ಹೇಳಿಕೆ ನೀಡಿದ್ದಾರೆ. ಹಿರಿಯ ನಾಯಕರಾದ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿರುವುದು ಶೋಭೆ ತರುವುದಿಲ್ಲ. ನನ್ನ ಬಳಿ ಎರಡು ಮೊಬೈಲ್‌ ಸಂಖ್ಯೆ ಇದೆ. ಆ ಎರಡು ನಂಬರ್‌ನಿಂದ ಅವರಿಗೆ ಕರೆ ಬಂದಿದ್ದರೆ ತೋರಿಸಲಿ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.

ತಮ್ಮ ಬಳಿ ಎಲ್ಲ ಸಹಾಯ ಪಡೆದುಕೊಂಡವರೇ ಮೋಸ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ತಾವು ಅಂತಹ ಸಹಾಯ ಏನೂ ಪಡೆದುಕೊಂಡಿಲ್ಲ. ತಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನುದಾನ ನೀಡಿದ್ದಾರೆ. ಇಲ್ಲ ಎಂದು ಹೇಳುವುದಿಲ್ಲ. ಆದರೆ, ಎಲ್ಲಾ ಕ್ಷೇತ್ರಗಳಿಗೂ ಅವರು ಅನುದಾನ ನೀಡಿದ್ದಾರೆ. ಅದರಂತೆ ನನ್ನ ಕ್ಷೇತ್ರಕ್ಕೂ ಅನುದಾನ ನೀಡಿದ್ದಾರೆ. ಹೆಚ್ಚುವರಿ ಅನುದಾನವನ್ನೇನೂ ನೀಡಿಲ್ಲ. ಇನ್ನು ನನ್ನಿಂದಲೇ ಕೆಲವೊಂದು ಸಹಾಯ ಪಡೆದುಕೊಂಡಿದ್ದಾರೆ. ಬೆಂಗಳೂರಿಗೆ ವಾಪಸ್ಸಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.

ಡಿಕೆಶಿ ನನ್ನ ನಾಯಕರಲ್ಲ:

ಚುನಾವಣಾ ರಂಗದಲ್ಲೇ ಎಂ.ಟಿ.ಬಿ. ನಾಗರಾಜ್‌ ಮತ್ತು ನನ್ನ ಭೇಟಿ ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್‌ ನಮಗೆ ನಾಯಕರಲ್ಲ. ಅವರಿಂದ ನಾನೇನೂ ಬೆಳೆದಿಲ್ಲ. ನನಗಾಗಿ ಚುನಾವಣೆಗೆ ಹಲವು ಬಾರಿ ಕೆಲಸ ಮಾಡಿರುವುದಾಗಿ ಅವರು ಹೇಳಿರುವುದು ಸುಳ್ಳು. ಪಕ್ಷದ ಸೂಚನೆ ಮೇರೆಗೆ ಒಂದು ಬಾರಿ ಮಾತ್ರ ನನ್ನ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ ಅಷ್ಟೆ. ನನ್ನನ್ನು ಬೆಳೆಸಿದ್ದಾರೆ ಎಂಬುದು ಸುಳ್ಳು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ನನಗೆ ಮೊದಲು ಟಿಕೆಟ್‌ ಕೊಟ್ಟರು. ಆಗ ಗೆಲ್ಲುವ ಅಭ್ಯರ್ಥಿ ಎಂದು ನನಗೆ ಟಿಕೆಟ್‌ ಕೊಡುವಂತೆ ಡಿ.ಕೆ.ಶಿವಕುಮಾರ್‌ ಕೂಡ ಹೇಳಿದ್ದರು. ಅದನ್ನು ನಾನು ಅಲ್ಲಗಳೆಯುವುದಿಲ್ಲ. ನಾನು ಕೂಡ ಅವರಷ್ಟೇ ರಾಜಕೀಯ ಹೋರಾಟ ಮಾಡಿಕೊಂಡು ಇಲ್ಲಿಯವರೆಗೂ ಬೆಳೆದು ಬಂದವನು ಎಂದು ತಿಳಿಸಿದರು.