ತುಮಕೂರು[ಸೆ.15]:  ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನು ಕಾಂಗ್ರೆಸ್‌ ಹೈಕಮಾಂಡ್‌ ಶೀಘ್ರದಲ್ಲೇ ಆಯ್ಕೆ ಮಾಡಲಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತುಮಕೂರು ಸಮೀಪದ ಹೆಗ್ಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವರ ಹೆಸರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೇಳಿ ಬಂದಿವೆ. ಯಾರೇ ವಿರೋಧ ಪಕ್ಷದ ನಾಯಕರಾದರೂ ಅವರು ನಮ್ಮ ನಾಯಕರು. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಗಾದಿ ಬದಲಾವಣೆ ಕುರಿತು ಗೊತ್ತಿಲ್ಲ ಎಂದು ಹೇಳಿದರು.

ಕೂಡಲೇ ಮನೆ ಖಾಲಿ ಮಾಡಿ: ಮಾಜಿ ಡಿಸಿಎಂ ಪರಮೇಶ್ವರ್‌ಗೆ ಬಿಡಿಎ ನೋಟಿಸ್‌

ಮಧ್ಯಂತರ ಚುನಾವಣೆ ಬರುತ್ತೋ ಬಿಡುತ್ತೊ ಗೊತ್ತಿಲ್ಲ. ಕಾಂಗ್ರೆಸ್‌ ಚುನಾವಣೆಗೆ ತಯಾರಾಗುತ್ತಿದೆ. ಹೆಚ್ಚು ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯುವುದಿಲ್ಲ. ಅನರ್ಹ ಶಾಸಕರಿಗೆ ತಪ್ಪಿನ ಅರಿವು ಆಗಿದೆ. ಅನರ್ಹರನ್ನು ಮತ್ತೆ ಪಕ್ಷಕ್ಕೆ ಕರೆತರುವ ಸನ್ನಿವೇಶ ಬರುವುದಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ನಾಯಕರ ನಡುವಿನ ಕಿತ್ತಾಟ ಕಾರಣ ಎಂದು ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ ವರದಿ ನೀಡಿದೆ. ಈ ಬಗ್ಗೆ ಸೆ.18ರ ಸಿಎಲ್‌ಪಿ ಸಭೆಯಲ್ಲಿ ಚರ್ಚಿಸುತ್ತೇವೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದು ಎಂದರು.