ಮಂಗಳೂರು[ಸೆ.30]: ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಟಿಕೆಟ್‌ಗೆ ಅನರ್ಹ ಶಾಸಕರು ಹಾಗೂ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಪೈಪೋಟಿಯ ಹೇಳಿಕೆ ನೀಡುತ್ತಿರುವ ಬೆನ್ನಿಗೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಮಂಗಳೂರಿನಲ್ಲಿ ಅನರ್ಹ ಶಾಸಕರು ಬಿಜೆಪಿಗರಲ್ಲ, ಟಿಕೆಟ್‌ ಯಾರಿಗೂ ಅಂತಿಮಗೊಂಡಿಲ್ಲ ಎಂದಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಯಡಿಯೂರಪ್ಪ ಅವರು ಬಿಜೆಪಿಯ ಪ್ರಶ್ನಾತೀತ ನಾಯಕ. 15 ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಜಯಗಳಿಸುತ್ತದೆ. ಶಾಸಕರ ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನಕ್ಕೆ ಬಾಕಿ ಇದೆ. ಅನರ್ಹ ಶಾಸಕರು ಬಿಜೆಪಿ ಸದಸ್ಯರಲ್ಲ. ಹಾಗಾಗಿ ಅನರ್ಹ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರ ಅಂತಿಮಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರ ವಿಚಾರ ಈಗ ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ತೀರ್ಮಾನಕ್ಕೆ ಬಾಕಿ ಇದೆ. ಉಪ ಚುನಾವಣೆಗೆ ಇನ್ನೂ ಸಮಯ ಇದೆ. ಹಾಗಿರುವಾಗ ಈಗಲೇ ಅಭ್ಯರ್ಥಿ ಆಯ್ಕೆಯ ತರಾತುರಿ ಬಿಜೆಪಿಗೆ ಇಲ್ಲ. ಅಲ್ಲದೆ ಅನರ್ಹ ಶಾಸಕರು ಬಿಜೆಪಿ ಸದಸ್ಯತ್ವ ಪಡೆದವರಲ್ಲ. ಹಾಗಿರುವಾಗ ಈಗಲೇ ಅವರಿಗೆ ಟಿಕೆಟ್‌ ನೀಡುವ ವಿಚಾರ ಯಾಕೆ? ಕೋರ್ಟಿನ ತೀರ್ಪು ಪ್ರಕಟವಾಗಲಿ. ಬಿಜೆಪಿಯಲ್ಲಿ ಟಿಕೆಟ್‌ ನೀಡಬೇಕಾದರೆ, ಪಕ್ಷದ್ದೇ ನಿಯಮ ಇದೆ. ಪಕ್ಷದ ಸದಸ್ಯರಾದವರ ಹೆಸರನ್ನು ಸ್ಥಳೀಯ ಸಮಿತಿಯಲ್ಲಿ ಚರ್ಚಿಸಿ, ಜಿಲ್ಲಾ ಹಂತದಲ್ಲಿ ಹಾಗೂ ರಾಜ್ಯ ಹಂತದಲ್ಲಿ ತೀರ್ಮಾನಿಸಿ, ಬಳಿಕ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್‌ ಎನ್ನುವುದನ್ನು ನಿರ್ಧರಿಸುತ್ತಾರೆ ಎಂದರು.

ಯಡಿಯೂರಪ್ಪ ಪ್ರಶ್ನಾತೀತ ನಾಯಕ:

ಸಿಎಂ ಯಡಿಯೂರಪ್ಪ ಅವರನ್ನು ಎಲ್ಲಿಯೂ ಬದಿಗೆ ಸರಿಸಿಲ್ಲ, ಅವರನ್ನು ಕಡೆಗಣಿಸಿಯೂ ಇಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಭಾನುಪ್ರಕಾಶ್‌ ಹಾಗೂ ಸುರಾನ ಅವರು ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ, ಅವರು ಕಾಂಗ್ರೆಸಿಗರಲ್ಲ. ಹಾಗಿರುವಾಗ ಅವರನ್ನು ನೇಮಕಗೊಳಿಸಿರುವುದರಲ್ಲಿ ಯಾವುದೇ ಅಸಮಾಧಾನ ಪಕ್ಷದಲ್ಲಿ ಇಲ್ಲ. ಈ ಕುರಿತ ಎಲ್ಲ ವರದಿಗಳೂ ಕೇವಲ ಊಹಪೋಹ. ಯಡಿಯೂರಪ್ಪ ಅವರು ದೊಡ್ಡ ನಾಯಕರು. ಅವರು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅದೇ ರೀತಿ ರಾಜ್ಯಾಧ್ಯಕ್ಷರಾಗಿ ನಳಿನ್‌ ಕುಮಾರ್‌ ಕಟೀಲ್‌ ಅವರು ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಎಂಬುದಿಲ್ಲ ಎಂದು ಮುರಳೀಧರ ರಾವ್‌ ಸ್ಪಷ್ಟಪಡಿಸಿದರು.

ನೆರೆ ಪರಿಹಾರ ವಿಳಂಬವಾಗಿದ್ದು ನಿಜ!

ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಎರಡು ತಿಂಗಳಿಂದ ವಿಳಂಬವಾಗಿರುವುದು ನಿಜ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್‌ ಒಪ್ಪಿಕೊಂಡಿದ್ದಾರೆ. ಎರಡು ತಿಂಗಳು ಕಳೆದಿರುವುದು ನಿಜ. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಹಾಗೂ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಮತ್ತೊಮ್ಮೆ ದೆಹಲಿಗೆ ತೆರಳಿ ಮಾತನಾಡಲಿದ್ದಾರೆ ಎಂದು ಹೇಳಿದರು.