ಬೀದರ್ :  ರಾಮನಗರ ಉಪಚುನಾವಣೆಯಲ್ಲಿ ವಾಮ ಮಾರ್ಗವನ್ನು ಅನುಸರಿಸುವ ಮೂಲಕ ಕಾಂಗ್ರೆಸ್‌ನವರೇ ರಾಜಕೀಯವನ್ನು ಬೆತ್ತಲೆ ಮಾಡಿ ತೋರಿಸಿದ್ದಾರೆ. ಈಗ ನಾವೇಕೆ ಸುಮ್ಮನಿರಬೇಕು. ನಾವು ಆಪರೇಷನ್‌ ಕಮಲ ಮಾಡಿಯೇ ಮಾಡುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಬಿಜೆಪಿ ಬರ ಅಧ್ಯಯನಾರ್ಥವಾಗಿ ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸೋಮವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಾಮ ಮಾರ್ಗಗಳನ್ನು ಅನುಸರಿಸುವುದನ್ನು ಕಾಂಗ್ರೆಸ್‌ನವರೇ ತೋರಿಸಿದ್ದಾರೆ. ಈಗ ನಾವೇಕೆ ಸುಮ್ಮನಿರಬೇಕು ಎಂದು ಪ್ರಶ್ನಿಸಿದರು. ನಾವಾಗಿಯೇ ಶಾಸಕರನ್ನು ಸೆಳೆಯುತ್ತಿಲ್ಲ, ಅವರಾಗಿಯೇ ಬರುವವರನ್ನು ಕರೆಯುತ್ತಿದ್ದೇವೆ. ಆಪರೇಷನ್‌ ಕಮಲ ಎಂದು ಆರೋಪಿಸುತ್ತಿರುವವರಿಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಾಕತ್ತಿಲ್ಲ ಎಂದರು.

ಸಿನಿಮಾದ ಹಾಗೆ ನೋಡೋಣ: ಕಾಂಗ್ರೆಸ್‌ ಪಕ್ಷದವರು ಬಹಳ ಚೆನ್ನಾಗಿ ಹೊಡೆದಾಡ್ತಿದ್ದಾರೆ. ಡ್ಯಾನ್ಸ್‌ ಮಾದರಿಯಲ್ಲಿ ಟಿವಿಯಲ್ಲಿ ನಿತ್ಯ ನೋಡ್ತಿದ್ದೇವೆ. ಅವರವರೇ ಬಡಿದಾಡುವುದನ್ನು ಒಂದು ಸಿನಿಮಾ ನೋಡಿದಂಗ ನೋಡೋಣ. ಹೀಗಾಗಿ ಯಾವಾಗ ಸರ್ಕಾರ ಬಿದ್ದೋಗುತ್ತೆ ಗೊತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ನಲ್ಲಿ ಭಾರಿ ಭಿನ್ನಮತವಿದೆ. ನಿತ್ಯವೂ ಆ ಪಕ್ಷ ಮುಖಂಡರು ಅವರದೇ ಪಕ್ಷದವರ ಕುರಿತು ಒಂದೊಂದು ವ್ಯತಿರಿಕ್ತ ಹೇಳಿಕೆ ಕೊಡ್ತಾರೆ. ಜಾರಕಿಹೊಳಿ ಏನ್‌ ಹೇಳ್ತಿದ್ದಾರೆ, ಡಿ.ಕೆ ಶಿವಕುಮಾರ ಏನ್‌ ಹೇಳ್ತಿದ್ದಾರೆ, ಬಿ.ಸಿ ಪಾಟೀಲ್‌ ಹಾಗೂ ಎಂ.ಬಿ. ಪಾಟೀಲ್‌ ಏನ್‌ ಅಂತಾರೆ ಅಂತ ನೋಡೋಣ ಎಂದರು.

ಮೂವರು ಸಿಎಂಗಳು: ಇಡೀ ಕರ್ನಾಟಕಕ್ಕೇ ಈಗ ಕುಮಾರಸ್ವಾಮಿ ಒಬ್ಬರೇ ಸಿಎಂ ಅಲ್ಲ. ಎಚ್‌.ಡಿ. ರೇವಣ್ಣ, ದೇವೇಗೌಡರು ಹಾಗೂ ಕುಮಾರಸ್ವಾಮಿ ಈ ಮೂವರೂ ಸಿಎಂ. ಈ ಮೂವರದ್ದೆ ಇಡೀ ರಾಜ್ಯದಲ್ಲಿ ನಡೆಯೋದು ಮತ್ಯಾರದ್ದೂ ನಡೆಯಲ್ಲ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಮೈತ್ರಿ ಪಕ್ಷ ಕಾಂಗ್ರೆಸ್‌ ಮೇಲೂ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ನ ಮಂತ್ರಿಗಳು ಗುಮಾಸ್ತರಂತೆ ಕೆಲಸ ಮಾಡುತ್ತಿದ್ದಾರೆ. ಯಾರ ಕೆಲಸವೂ ನಡೆಯುತ್ತಿಲ್ಲ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುತ್ತಾರೆ, ಈಗ ಅಧಿಕಾರದ ಚುಕ್ಕಾಣಿ ನಿಮ್ಮ ಕೈಯಲ್ಲಿದ್ದು, ರೈತರಿಗೆ ನೆರವಾಗುವ ಮೂಲಕ ನಿಜವಾದ ಮಣ್ಣಿನ ಮಕ್ಕಳಾಗಿ ಎಂದು ಕುಟುಕಿದರು.

ಹಂಪಿ ಉತ್ಸವಕ್ಕೆ ಯಾಕೆ ತಕರಾರು?:

ಟಿಪ್ಪು ಜಯಂತಿ ಮಾಡಿದವರು ಸರ್ವನಾಶವಾಗಿದ್ದಾರೆ. ಹೀಗಾಗಿ ವರ್ಷದಲ್ಲಿ ಒಂದು ಬಾರಿ ಅಲ್ಲ,ಪ್ರತಿ ತಿಂಗಳೂ ಮಾಡಲಿ. ಮುಸ್ಲಿಮರಾದಿಯಾಗಿ ಎಲ್ಲರೂ ವಿರೋಧಿಸಿದರೂ ಮುಸ್ಲಿಮರ ಅಷ್ಟೂಓಟಿಗಾಗಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದರು. ವೀರಶೈವ ಲಿಂಗಾಯತರ ಓಟು ಬಿಜೆಪಿಗೆ ಹೋಗ್ತಿವೆ ಎಂದು ಧರ್ಮ ಒಡೆದು ರಾಜಕೀಯ ಮಾಡಿ ನಿರ್ನಾಮ ಆದರು. ಮುಂದೆ ಭೂತ ಕನ್ನಡಿ ಹಿಡಿದು ಹುಡುಕಿದರೂ ಕಾಂಗ್ರೆಸ್‌ ಸಿಗಲ್ಲ ಎಂದರು. ಟಿಪ್ಪು ಜಯಂತಿ ಮಾಡ್ತಾರೆ, ಆದರೆ ಕನಕದಾಸ ಜಯಂತಿ ಮುಂದೆ ಹಾಕ್ತಾರೆ, ಹಂಪಿ ಉತ್ಸವವನ್ನೂ ರದ್ದು ಮಾಡ್ತಾರೆ, ಈಗ ಬೀದರ್‌ ಉತ್ಸವದ ಸರದಿ. ಹೀಗೆ ಈ ಉತ್ಸವಗಳನ್ನೇಕೆ ರದ್ದು ಮಾಡ್ತೀರಿ ಎಂದು ಈಶ್ವರಪ್ಪ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.