ಜಗತ್ತಿನ ಹಲವಾರು ಅಪರೂಪ ಹಾಗೂ ಅತ್ಯುತ್ತಮ ಪ್ರೇಮಕಥೆಗಳು, ಕೊನೆಯವರೆಗೂ ಪ್ರೀತಿ ಉಳಿಸಿಕೊಳ್ಳುವ ವಿಧಾನಗಳು ಹೀಗೆ ಹಲವಾರು ವಿಷಯಗಳ ಕುರಿತು ಉಪಯುಕ್ತ ಮಾಹಿತಿ ಪುಸ್ತಕದಲ್ಲಿದೆ. ಪ್ರೀತಿ ಕೇವಲ ಭಾವನಾತ್ಮಕವಾಗದೆ ಪ್ರೀತಿಯ ಹಿಂದೆ ವಿಜ್ಞಾನವೂ ಇದೆ ಎಂಬುದನ್ನು ಲೇಖಕರು ತಿಳಿಸಿದ್ದು, ಯುವಕರು ಪ್ರೀತಿಯನ್ನು ಹೇಗೆ ಸ್ವೀಕರಿಸಬೇಕು, ಪ್ರೀತಿಯ ಕುರಿತು ಹೊಂದಿರಬೇಕಾದ ನಿಷ್ಠೆ ಸೇರಿದಂತೆ ಹಲವಾರು ಅಂಶಗಳ ಕುರಿತು ಬೆಳಕು ಚೆಲ್ಲಿದ್ದಾರೆ

ಬೆಂಗಳೂರು(ಫೆ.12):ಸಿನಿಮಾ ಮೂಲಕ ಹೇಳಲು ಸಾಧ್ಯವಾಗದ ಹಲವಾರು ಸತ್ಯಗಳು ಮತ್ತು ಅಪರೂಪದ ಪ್ರೇಮಕಥೆಗಳನ್ನು ಸಾಹಿತಿ ರವಿ ಅಜ್ಜೀಪುರ ತಮ್ಮ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ.

ಅಜ್ಜೀಪುರ ಪ್ರಕಾಶನ ಸಂಸ್ಥೆ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ‘ಪ್ರೇಮಸೂತ್ರ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿಯ ಹೆಸರಿನಲ್ಲಿ ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಪುಸ್ತಕ ಮಾಡಲಿದೆ. ಕೇವಲ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಸಿನಿಮಾ ನಿರ್ಮಿಸುವುದರಿಂದ ಪ್ರೀತಿಗೆ ಸಂಬಂಸಿದ ಸುಳ್ಳುಗಳನ್ನು ಹೆಚ್ಚಾಗಿ ಹೇಳಬೇಕಾಗುತ್ತದೆ. ಆದರೆ, ಪುಸ್ತಕ ಬರೆಯುವಾಗ ಲೇಖಕರು ಎಲ್ಲ ಹಂಗುಗಳನ್ನು ತೊರೆದು ಸತ್ಯ ಹೇಳಿದ್ದಾರೆ ಎಂದರು.

ಜಗತ್ತಿನ ಹಲವಾರು ಅಪರೂಪ ಹಾಗೂ ಅತ್ಯುತ್ತಮ ಪ್ರೇಮಕಥೆಗಳು, ಕೊನೆಯವರೆಗೂ ಪ್ರೀತಿ ಉಳಿಸಿಕೊಳ್ಳುವ ವಿಧಾನಗಳು ಹೀಗೆ ಹಲವಾರು ವಿಷಯಗಳ ಕುರಿತು ಉಪಯುಕ್ತ ಮಾಹಿತಿ ಪುಸ್ತಕದಲ್ಲಿದೆ. ಪ್ರೀತಿ ಕೇವಲ ಭಾವನಾತ್ಮಕವಾಗದೆ ಪ್ರೀತಿಯ ಹಿಂದೆ ವಿಜ್ಞಾನವೂ ಇದೆ ಎಂಬುದನ್ನು ಲೇಖಕರು ತಿಳಿಸಿದ್ದು, ಯುವಕರು ಪ್ರೀತಿಯನ್ನು ಹೇಗೆ ಸ್ವೀಕರಿಸಬೇಕು, ಪ್ರೀತಿಯ ಕುರಿತು ಹೊಂದಿರಬೇಕಾದ ನಿಷ್ಠೆ ಸೇರಿದಂತೆ ಹಲವಾರು ಅಂಶಗಳ ಕುರಿತು ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಹ ಜೀವನ (ಲೀವಿಂಗ್ ಟು ಗೆದರ್) ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವು ಅಸಂಬದ್ಧವಾದ ಸಂಬಂಧಗಳು ಎಂಬುದನ್ನು ಪುಸ್ತಕದಲ್ಲಿ ವಿವರಿಸಲಾಗಿದ್ದು, ಅದು ಏಕೆ ಅಸಂಬದ್ಧ ಸಂಬಂಧ ಎಂಬುದಕ್ಕೂ ಉತ್ತರ ನೀಡಲಾಗಿದೆ. ಹೀಗಾಗಿ ಯುವಕರು ಪಠ್ಯ ಪುಸ್ತಕಗಳ ನಡುವೆ ಇರಿಸಿಕೊಳ್ಳುವಂತಹ ಪುಸ್ತಕ ಇದಾಗಿದೆ ಎಂದು ಶಶಾಂಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ರವಿ ಬೆಳಗೆರೆ ಮಾತನಾಡಿ, ಹಿಂದಿನ ಕಾಲದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ಪ್ರೇಮಪತ್ರದ ಮೂಲಕ ತಮ್ಮ ಗೆಳೆಯ ಅಥವಾ ಗೆಳತಿಗೆ ತಿಳಿಸುತ್ತಿದ್ದರು. ಪತ್ರ ನೀಡಿದ ನಂತರವೂ ಹಲವು ದಿನಗಳ ಕಾಲ ಉತ್ತರಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಆದರೆ ಇಂದು ಯುವಕರಲ್ಲಿ ತಾಳ್ಮೆಯ ಗುಣ ಇಲ್ಲವಾಗಿದ್ದು, ಸ್ವಂತಿಕೆಯ ಬದಲಿಗೆ ಾರ್ವರ್ಡ್ ಸಂದೇಶಗಳ ಮೇಲೆ ಹೆಚ್ಚು ಅವಲಂಬನೆಯಾಗುತ್ತಿದ್ದಾರೆ. ಇದರಿಂದಾಗಿ ಬೆಳಗ್ಗೆ ಪ್ರೀತಿ ತಿಳಿಸಿ ಸಂಜೆ ವೇಳೆಗೆ ಉತ್ತರ ಹೇಳುವಂತೆ ಹಠಕ್ಕೆ ಬೀಳುತ್ತಿದ್ದು, ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರೀತಿ ಮಾಡಲು ಇಂದು ಯಾರ ಬಳಿಯೂ ಸಮಯ ಇಲ್ಲದಾಗಿದೆ. ಮತ್ತೊಬ್ಬರನ್ನು ದ್ವೇಷಿಸಲು ನಾವು ಮುಂದಾಗುತ್ತೇವೆ. ಟ್ರಾಫಿಕ್‌ನಲ್ಲಿ ವಾಹನಕ್ಕೆ ಮತ್ತೊಂದು ವಾಹನ ತಾಗಿದರೆ ಜಗಳಕ್ಕೆ ನಿಲ್ಲುವ ಮನಸ್ಥಿತಿ ನಮ್ಮದು. ಪ್ರೀತಿ ಎಂಬುದು ಇಂದು ಜ್ಯೋತಿಷಿಗಳ ವ್ಯಾಪಾರದ ವಸ್ತುವಾಗಿದ್ದು, ವಶೀಕರಣದ ಹೆಸರಿನಲ್ಲಿ ಯುವಕರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

ಯಾವುದೇ ಸೂತ್ರವಿಲ್ಲದಿರುವುದು ಪ್ರೇಮ, ಯಾವುದೇ ಸೂತ್ರಕ್ಕೂ ಅದು ನಿಲುಕುವುದಿಲ್ಲ. ಪ್ರೇಮಪತ್ರಗಳನ್ನು ಬರೆಯಲು ಮನಸ್ಸು, ನೆಮ್ಮದಿ ಹಾಗೂ ಸ್ವಂತಿಕೆ ಇರಬೇಕು ಎಂದ ಅವರು, ಸನ್ಯಾಸಿಗಳ ಜತೆ ಇದ್ದರೆ ತಾವು ಪ್ರೀತಿ ಮಾಡುವುದಿಲ್ಲ. ಮಾಡುವವರಿಗೂ ಸನ್ಯಾಸಿಗಳು ಬಿಡುವುದಿಲ್ಲ ಎಂದು ವೇದಿಕೆಯಲ್ಲಿದ್ದ ಶ್ವಾಸಗುರು ವಚನಾನಂದ ಸ್ವಾಮೀಜಿ ಅವರನ್ನು ಕಿಚಾಯಿಸಿದರು.