ಕೋಲಾರ(ಸೆ.10): ಕೋಲಾರ ಜಿಲ್ಲೆಯಲ್ಲಿ ಕಳೆದ ಬಾರಿ ಭಾರೀ ಆತಂಕ ಹುಟ್ಟಿಸಿದ್ದ ಡಿಫ್ತೀರಿಯಾ ಮಾರಕ ಕಾಯಿಲೆ ಮತ್ತೆ ಕಾಣಿಸಿಕೊಂಡಿದೆ. ಮುಳುಬಾಗಿಲು ಪಟ್ಟಣದಲ್ಲಿ ಮೊದಲ ಬಲಿ ಪಡೆದುಕೊಂಡಿದೆ. ಪಟ್ಟಣದ ಕುರುಬರಪೇಟೆಯ 11 ವರ್ಷದ ಬಾಲಕ ಸಾಹಿಲ್ ಪಾಷ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಸೆಫ್ಟೆಂಬರ್ 3ರಿಂದ ಡಿಫ್ತೀರಿಯ ರೋಗಕ್ಕೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸೆ ನೀಡಿದರು ವಾಸಿ ಆಗಲಿಲ್ಲ. ನಂತರ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ನೆನ್ನೆ ನಿಧನನಾಗಿದ್ದಾನೆ.

ಡಿಫ್ತೀರಿಯ ಗಂಟಲು ಮಾರಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಇದೇ ಮುಳಬಾಗಿಲು ಪಟ್ಟಣದ ನೂಗಲ ಬಂಡೆ ಬಡವಾಣೆಯಲ್ಲಿ ನಾಲ್ಕು ಮಕ್ಕಳ ಬಲಿ ಪಡೆದಿತ್ತು.. ಶಂಕಿತ ಮಾರಕ ರೋಗ 60 ಮಕ್ಕಳಲ್ಲಿ ಕಾಣಿಸಿಕೊಂಡಿತ್ತು.. ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚತ್ತು ಕೊಂಡ ವೈದ್ಯರ ತಂಡ ಭೇಟಿ ನೀಡಿ ಕ್ಯಾಂಪ್ ಹಾಕಿಕೊಂಡು ಚಿಕಿತ್ಸೆ ನೀಡಿದ್ದರು.

ಅಂದು ಡಿಫ್ತೀರಿಯಾ ತಡೆಯುವಲ್ಲಿ ಯಶಸ್ವಿಯಾಗಿದ್ದ ಆರೋಗ್ಯ ಇಲಾಖೆ ಮತ್ತೆ ಎಚ್ಚೆತ್ತುಕೊಳ್ಳಬೇಕಿದೆ.