ಮಾಜಿ ಸಿಎಂ ಯಡಿಯೂರಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅಮಿತ್ ಶಾ ಅವರು ಭ್ರಷ್ಟಾಚಾರದ ಕುರಿತು ಮಾತನಾಡುವುದು ಹಾಸ್ಯಾಸ್ಪದ ಎಂದವರು ಟೀಕಿಸಿದ್ದಾರೆ. "...ಇಲ್ಲಿ ಯಡಿಯೂರಪ್ಪನವರನ್ನು ಕೂರಿಸಿಕೊಂಡು ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು... ಬುಡಸಮೇತ ಸರಕಾರವನ್ನು ಕಿತ್ತೊಗೆಯಬೇಕೆಂಬ ಮಾತನ್ನ ಆಡ್ತೀರಲ್ಲ ನಿವು... ನಿಮಗೇನಾದರೂ ನೈತಿಕತೆ ಇದೆಯಾ?" ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಬೆಂಗಳೂರು(ಆ. 13): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಂಡೂರಾವ್, ತಮ್ಮ ಸರ್ಕಾರ, ತಮ್ಮ ಪಕ್ಷ, ಹಾಗೂ ಸಿಎಂ ಬಗ್ಗೆ ಅಮಿತ್ ಆಡಿದ ಮಾತು ಸರಿಯಲ್ಲ ಎಂದು ಖಂಡಿಸಿದ್ದಾರೆ.
"ನಮ್ಮ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದಿದ್ದಾರೆ. ಆದರೆ, ಯಾವುದೇ ದಾಖಲೆ, ಮಾಹಿತಿ ಇಲ್ಲದೇ ಆರೋಪ ಮಾಡಿದ್ದಾರೆ. ಸುಮ್ಮನೆ ಪ್ರಚೋದನೆ ಮಾಡಿಬಿಟ್ಟು ಭ್ರಷ್ಟ ಸರಕಾರ ಅಂತ ಹೇಳಿಬಿಟ್ಟು ಹೋದರೆ ಜನರು ನಂಬಿಬಿಡ್ತಾರಾ..? ಬೇಕಾದ್ರೆ ಚಾರ್ಜ್'ಶೀಟ್ ಮಾಡಿ," ಎಂದು ಅಮಿತ್ ಶಾಗೆ ದಿನೇಶ್ ಗುಂಡೂರಾವ್ ಸವಾಲು ಎಸೆದಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅಮಿತ್ ಶಾ ಅವರು ಭ್ರಷ್ಟಾಚಾರದ ಕುರಿತು ಮಾತನಾಡುವುದು ಹಾಸ್ಯಾಸ್ಪದ ಎಂದವರು ಟೀಕಿಸಿದ್ದಾರೆ. "...ಇಲ್ಲಿ ಯಡಿಯೂರಪ್ಪನವರನ್ನು ಕೂರಿಸಿಕೊಂಡು ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು... ಬುಡಸಮೇತ ಸರಕಾರವನ್ನು ಕಿತ್ತೊಗೆಯಬೇಕೆಂಬ ಮಾತನ್ನ ಆಡ್ತೀರಲ್ಲ ನಿವು... ನಿಮಗೇನಾದರೂ ನೈತಿಕತೆ ಇದೆಯಾ?" ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಇದೇ ವೇಳೆ, ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆಯನ್ನೂ ಗುಂಡೂರಾವ್ ಪ್ರಶ್ನಿಸಿದ್ದಾರೆ. "ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕೆಂಬ ತಂತ್ರಗಾರಿಕೆ ಗೊತ್ತಿದೆ ಅಂತ ಹೇಳಿದ್ರಲ್ಲ.. ಈಗ ಗೊತ್ತಾಗ್ತಿದೆ ನಮಗೆ.. ಬಿಹಾರದಲ್ಲಿ ಚುನಾವಣೆಯಲ್ಲಿ ಗೆದ್ದು ಬಿಟ್ರಾ ನೀವು..? ದೆಹಲಿ ಎಲೆಕ್ಷನ್ ಗೆದ್ರಾ? ...ಎಲ್ಲವನ್ನೂ ಮ್ಯಾನೇಜ್ ಮಾಡಿ, ನಿಮ್ಮ ಏಜೆನ್ಸಿಗಳನ್ನ ಉಪಯೋಗಿಸಿಕೊಂಡು ಬ್ಲ್ಯಾಕ್'ಮೇಲ್ ಮಾಡಿದ್ರಿ..." ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು ಆಕ್ಷೇಪಿಸಿದ್ದಾರೆ.
ವಲಸೆ ಬಂದವರು ಏನಾದರು?
"ಪಾಪ ಕೆಲವರನ್ನೆಲ್ಲಾ ನೀವು ಪಕ್ಷಕ್ಕೆ ಕರೆದುಕೊಂಡು ಬಿಟ್ರಿ.. ಎಸ್ಸೆಮ್ ಕೃಷ್ಣ, ಶ್ರೀನಿವಾಸಪ್ರಸಾದ್ ಅವರನ್ನ ಬೇರೆ ಬೇರೆ ಕಾರಣಗಳಿಂದ ಕರೆದುಕೊಂಡ್ರಿ... ಈಗ ಅವರೆಲ್ಲಾ ಎಲ್ಲಿದ್ದಾರೆ... ಎಲ್ಲೂ ಕೂಡ ಕಾಣ್ತಾ ಇಲ್ಲ. ಯಾವ್ಯಾವ ರೀತಿ ಕರೆದುಕೊಂಡ್ರೀ, ಮಾಡಿದ್ರಿ ಅಂತ ಗೊತ್ತಿದೆ ನಮಗೆ..." ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ವಿಸ್ತಾರಕರ ಸುಳ್ಳು ನಿಲ್ಲಿಸಿ:
"ಸರಕಾರವನ್ನ ಅಸ್ಥಿರಗೊಳಿಸಲು, ಷಡ್ಯಂತ್ರ ರೂಪಿಸಲು ಮತ್ತು ಸುಳ್ಳು ಹೇಳಲು ಬಂದಿದ್ದೀರಿ ಎಂಬುದು ಗೊತ್ತು ಅಮಿತ್ ಶಾ ಅವರೇ ಎಂದು ಹೇಳಿದ ದಿನೇಶ್ ಗುಂಡೂರಾವ್, ಸರಕಾರದ ಬಗ್ಗೆ ಬಿಜೆಪಿ ವಿಸ್ತಾರಕರು ಹೇಳುತ್ತಿರುವ ಸುಳ್ಳನ್ನು ನಿಲ್ಲಿಸಿಸುವಂತೆ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ. "ಕರ್ನಾಟಕದಲ್ಲಿ ಬಿಜೆಪಿ ಅಧೋಗತಿ ತಲುಪಿದೆ. ಬಿಜೆಪಿ ಮೇಲಕ್ಕೆತ್ತಲು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಮೊದಲು ಇವರು ಬಿಜೆಪಿ ವಿಸ್ತಾರಕರು ಹೇಳುತ್ತಿರುವ ಸುಳ್ಳನ್ನು ನಿಲ್ಲಿಸುವಂತೆ ಹೇಳಲಿ. ಬಿಜೆಪಿ ವಿಸ್ತಾರಕರು ಮನೆ ಮನೆ ಭೇಟಿ ವೇಳೆ ಸುಳ್ಳು ಹೇಳಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಇವರನ್ನು ಸುಳ್ಳು ಹೇಳದಂತೆ ತಡೆದರೆ ಆಗ ಅಮಿತ್ ಶಾ ಅವರನ್ನ ಒಪ್ಕೋತೀನಿ," ಎಂದು ಗುಂಡೂರಾವ್ ಕಿಡಿಕಾರಿದ್ದಾರೆ.
