ಬೆಂಗಳೂರು[ಸೆ.19]: ನಿಮ್ಮ ಈ ಭಿಕ್ಷಾ ವರ್ತನೆಯಿಂದ ನಾವು ಹೊರಬಂದು ಇವತ್ತು ರಾಜರಂತಿದ್ದೇವೆ. ಆದರೆ, ನಿಮ್ಮ ನಾಯಕತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಿದ ಕಾಂಗ್ರೆಸ್‌ ಕೇವಲ ಒಂದು ಸ್ಥಾನ ಗಳಿಸಿದೆ. ‘ಮೂರು’ ಇದ್ದವರು ಆ ಸ್ಥಾನದಲ್ಲಿ ಒಂದೇ ಒಂದು ಕ್ಷಣವೂ ಕೂರಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಆದ ಅನರ್ಹ ಡಾ| ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ರಾಜರಂತಿದ್ದ ಶಾಸಕರು ಇದೀಗ ಬಿಜೆಪಿ ನಾಯಕರ ಬಳಿ ಕೈಕಟ್ಟಿಭಿಕ್ಷೆ ಬೇಡುವ ಸ್ಥಿತಿ ಬಂದಿದೆ ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ಸುಧಾಕರ್‌ ಈ ಮೇಲಿನಂತೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

ದಿನೇಶ್‌ ಗುಂಡೂರಾವ್‌ ಅವರೇ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಾವು ಭಿಕ್ಷುಕರಲ್ಲ. ನಿಮ್ಮ ವೈಯಕ್ತಿಕ ಆಸೆ, ಲಾಲಸೆ ಮತ್ತು ಕೆಟ್ಟನಿರ್ಧಾರಗಳಿಂದ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಕಾಂಗ್ರೆಸ್‌ ಪಕ್ಷಕ್ಕೆ ಬಂದಿತು. ನಾವು ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆದ್ದಿದ್ದೆವು. ಆದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಒಂದೇ ಒಂದು ಸ್ಥಾನ ಗೆದ್ದಿತ್ತು. ಇತಿಹಾಸದಲ್ಲೇ ಇಂತಹ ಮುಖಭಂಗ ಕಾಂಗ್ರೆಸ್‌ ಪಕ್ಷಕ್ಕೆ ಎಂದೂ ಆಗಿರಲಿಲ್ಲ. ನಿಮ್ಮ ಕೆಟ್ಟನಿರ್ಧಾರ ಹಾಗೂ ಬಲಹೀನತೆಯನ್ನು ಪರಾಮರ್ಶಿಸಿಕೊಳ್ಳಿ. ನಿಮ್ಮ ಈ ವರ್ತನೆಯಿಂದ ಕಾಂಗ್ರೆಸ್‌ ಪಕ್ಷ ಭಿಕ್ಷಾಪಾತ್ರೆ ಹಿಡಿದು ಹೋಗುವಂತಾಯಿತು ಎಂದು ಛೇಡಿಸಿದ್ದಾರೆ.

ಮೋಸ ಮಾಡಿದವರಿದೆ ತಕ್ಕ ಶಾಸ್ತಿ: ದಿನೇಶ್‌

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ದಿನೇಶ್‌ ಗುಂಡೂರಾವ್‌ ಅವರು, ಕಾಂಗ್ರೆಸ್‌ ಪಕ್ಷದಿಂದ ಎಲ್ಲವನ್ನೂ ಪಡೆದ ಆ ವ್ಯಕ್ತಿ ಕಡೆಗೆ ಪಕ್ಷಕ್ಕೆ ಮೋಸ ಮಾಡಿ ಓಡಿ ಹೋಗಿದ್ದಾರೆ. ಅಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದ್ದಾರೆ