ಮುಖ್ಯಮಂತ್ರಿ ಪಟ್ಟ ಏರಲು ತರಾತುರಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈಗ ಆಸ್ಪ್ರೇಲಿಯನ್‌ ಡಯಟ್‌ ತಜ್ಞರ ಅಡಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ದಿಲ್ಲಿ ಮಾತು: ಪ್ರಶಾಂತ್ ನಾತು, ಸುವರ್ಣನ್ಯೂಸ್

ಪತ್ರಕರ್ತರು ಈಶ್ವರಪ್ಪನವರ ಬಗ್ಗೆ ಎಷ್ಟೇ ಕೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿ­ಯೂರಪ್ಪ­ನವರು ಹಾಗೂ ಸಂಸದೆ ಶೋಭಾ ಕರಂದ್ಲಾಜೆ ತುಟಿ ಪಿಟಿಕ್‌ ಅನ್ನುವುದಿಲ್ಲ. ಬೇರೇ­ನಾದರೂ ಇದ್ದರೆ ಹೇಳಿ, ಈಶ್ವರಪ್ಪ­ನವರ ಬಗ್ಗೆ ಮತ್ತು ಸಂಗೊಳ್ಳಿ ರಾಯಣ್ಣನ ಬ್ರಿಗೇಡ್‌ ಬಗ್ಗೆ ಮಾತನಾಡುವುದಿಲ್ಲ ಎಂದು ಯಡಿಯೂರಪ್ಪ­ ಸಂಸತ್‌ ಭವನದಲ್ಲಿ ಪತ್ರಕರ್ತರು ಕೇಳಿದಾಗಲೆಲ್ಲ ರೆಡಿಮೇಡ್‌ ಉತ್ತರ ಕೊಡುತ್ತಿರುತ್ತಾರೆ. ಹಾಗೆಂದು ಯಡಿಯೂರಪ್ಪನವರು ಸುಮ್ಮನೆ ಏನೂ ಕುಳಿತಿಲ್ಲ. ಈಶ್ವರಪ್ಪನವರ ಬ್ರಿಗೇಡ್‌ ಕಾರ್ಯಕ್ರಮದ ಫೋಟೋ­ಗಳು ಮತ್ತು ಹೇಳಿಕೆಗಳನ್ನು ಫೈಲ… ಮಾಡಿ ಅಮಿತ್‌ ಶಾ, ಅರುಣ್‌ ಜೇಟ್ಲಿ, ರಾಮಲಾಲ್‌ರಿಗೆ ಕಳುಹಿಸಿರುವ ಯಡಿಯೂರಪ್ಪನವರು ಪರಮಾಪ್ತ ಲೆಹೆರ್‌ ಸಿಂಗ್‌ರನ್ನು ದೆಹಲಿಯಲ್ಲಿ ಸಕ್ರಿಯ ಮಾಡಿ­ದ್ದಾರೆ. ರಾಷ್ಟ್ರೀಯ ನಾಯಕರೇ ಈಶ್ವರಪ್ಪನವರ ಮೇಲೆ ಕ್ರಮ ತೆಗೆದು­ಕೊಳ್ಳಲಿ, ಇಲ್ಲವಾದಲ್ಲಿ ಸುಮ್ಮನೆ ಕೂರಿಸಲಿ ಎಂಬುದು ಯಡಿಯೂರಪ್ಪ ತಂಡದ ರಣತಂತ್ರ. ಅಂದ ಹಾಗೆ ರಾಜ್ಯ ಉಸ್ತುವಾರಿ ಮುರಳೀಧರ್‌ ರಾವ್‌ ಪೂರ್ತಿ­ಯಾಗಿ ಯಡಿ­ಯೂರಪ್ಪ­ನವರ ಪರ ವಾಲಿದ್ದಾರೆ, ಇದು ಸರಿಯಲ್ಲ ಎಂದು ಈಶ್ವರಪ್ಪನವರು ಕೂಡ ದೆಹಲಿಗೆ ದೂರು ಹೇಳುವವರನ್ನು ಕಳುಹಿಸಿಕೊಟ್ಟಿದ್ದಾರೆ. 

ಬಿಎಸ್‌ವೈ ಡಯಟಿಂಗ್‌:
2018ರ ಚುನಾವಣೆ ನಂತರ ಮುಖ್ಯಮಂತ್ರಿ­ಯಾಗುವ ಕನಸು ಕಾಣುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪನವರು ಡಯಟಿಂಗ್‌ ಮಾಡಿ ಕಳೆದ ಒಂದೆರಡು ತಿಂಗಳಲ್ಲಿ 9 ಕಿಲೋ ತೂಕ ಇಳಿಸಿಕೊಂಡಿ­ದ್ದಾರೆ. ಶಾಸಕ ಸುರೇಶ್‌ ಗೌಡ ಕಾಲೇಜು ಹುಡುಗನಂತೆ ಕಾಣಿಸುತ್ತಿರುವುದನ್ನು ನೋಡಿ ಆಸ್ಪ್ರೇಲಿಯಾ ಡಯಟಿಷಿ­ಯನ್‌ ಬಳಿ ಸಲಹೆ ಪಡೆದ ಯಡಿಯೂರಪ್ಪನವರು, ಕೇವಲ ವಾಕಿಂಗ್‌ ಮತ್ತು ಡಯಟ್‌ ಮಾಡಿ ತೂಕ ಇಳಿಸಿ ಫಿಟ್‌ ಆಗಿದ್ದಾರೆ. ಆದರೆ ಯಡಿಯೂರಪ್ಪ­ನವರನ್ನು ಭೇಟಿಯಾದ ಕಾರ್ಯಕರ್ತ­ರೆಲ್ಲ ಸಾಹೇ­ಬರು ಬಹಳ ವೀಕ್‌ ಆಗಿದ್ದಾರೆ ಎನ್ನುತ್ತಿದ್ದಾರೆ. ಪಾರ್ಲಿ­ಮೆಂಟ್‌ಲ್ಲೂ ಹಿಂದಿ- ಆಂಗ್ಲ ಮಾಧ್ಯಮದ ಪತ್ರಕರ್ತರು, ‘‘ಯಾಕೋ ಯಡಿಯೂರಪ್ಪನವರು ವೀಕ್‌ ಆಗಿದ್ದಾರಲ್ಲ'' ಎಂದು ಹೇಳತೊಡಗಿದ್ದಾರೆ. ಹೀಗಾಗಿ ಕಳೆದ ಹತ್ತು ದಿನಗಳಿಂದ ಯಡಿಯೂರಪ್ಪ­ನವರ ರಿಜನರೇಷನ್‌ ಎಂಬ ಬರೀ ಪ್ರೊಟೀನ್‌ ತಿನ್ನುವ ವಿಶಿಷ್ಟಡಯಟ್‌ ಪ್ಲಾನ್‌ ನಿಲ್ಲಿಸಲಾಗಿದೆ. 2018­ರಲ್ಲಿ ಮುಖ್ಯಮಂತ್ರಿಯಾಗಬೇಕಾ­ದರೆ ಎಲ್ಲಿ 75ನೇ ವಯಸ್ಸಿನ ಸಮಸ್ಯೆ ಶುರುವಾಗುತ್ತೋ ಎನ್ನುವ ಆತಂಕದಲ್ಲಿ ಮೊದಲೇ ಆಕ್ಟಿವ್‌ ಆಗಿರುವ ಯಡಿಯೂರಪ್ಪ ಸಾಹೇಬರು ಇನ್ನಷ್ಟುಯಂಗ್‌ ಆಗುವ ಪ್ರಯತ್ನದಲ್ಲಿದ್ದಾರೆ. 

ಶಾಸಕರಾಗುವ ತುಡಿತ:
ಕರ್ನಾಟಕದ ಮೂರು ಪಕ್ಷಗಳ ಬಹುತೇಕ ಸಂಸದರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ತಯಾರಿ ನಡೆಸುತ್ತಿದ್ದು, ವರಿಷ್ಠ ನಾಯಕರ ಹಸಿರು ನಿಶಾನೆಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಸಂಸದರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಪಿಸಿ ಗದ್ದಿಗೌಡರ್‌, ಜಿಎಂ ಸಿದ್ದೇಶ್ವರ್‌, ಪಿಸಿ ಮೋಹನ್‌, ಕರಡಿ ಸಂಗಣ್ಣ ಅವರಿಗೆ ದೆಹಲಿಗಿಂತ ರಾಜ್ಯಕ್ಕೆ ಹೋಗಿ ಶಾಸಕರಾಗುವುದೇ ವಾಸಿ ಎನ್ನಿಸಿ­ಬಿಟ್ಟಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ­ಯಾಗಿರುವ ಕಾರಣ ಯಡಿಯೂರಪ್ಪ ವಿಧಾನ ಸಭೆಗೆ ನಿಲ್ಲುವುದು ನಿಶ್ಚಿತ. ಆದರೆ ಉಳಿದವರಿಗೆ ಪ್ರಧಾನಿ ಮೋದಿ ಅನು­ಮತಿ ಕೊಡುತ್ತಾರೆಯೇ ಎನ್ನುವುದೇ ಚಿಂತೆ. ಒಲ್ಲದ ಮನಸ್ಸಿನಿಂದ ಸಂಸದರಾಗಿರುವ ಪ್ರಕಾಶ ಹುಕ್ಕೇರಿ ಮುಂದಿನ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಮಂಡ್ಯದ ಜೆಡಿಎಸ್‌ ಸಂಸದ ಪುಟ್ಟರಾಜು ಅವರಿಗೆ ವಿಧಾನಸಭೆಗೆ ನಿಲ್ಲು­ವಂತೆ ಸ್ವಯಂ ದೇವೇಗೌಡರೇ ಹೇಳಿ ಬಿಟ್ಟಿದ್ದಾರಂತೆ. ದೆಹಲಿಯ ಬಿಸಿಲು, ಚಳಿ, ಭಾಷೆಯ ಸಮಸ್ಯೆ, ಪ್ರಚಾ­ರದ ಕೊರತೆಯ ಕಾರಣದಿಂದ ನಮ್ಮ ಬಹು­ತೇಕ ಸಂಸದರು ‘‘ಇಲ್ಲಿರುವುದು ಸುಮ್ಮನೆ, ವಿಧಾನ ಸಭೆಯೇ ನಮ್ಮ ಮನೆ'' ಎಂದು ಬಡಬಡಿಸುತ್ತಿ­ರುತ್ತಾರೆ. 

ಖಮರುಲ್‌ ರಗಳೆ:
ಕೆಲ ತಿಂಗಳುಗಳ ಹಿಂದಷ್ಟೇ ಮಂತ್ರಿಸ್ಥಾನ ಕಳೆದು­ಕೊಂಡು ಮಲ್ಲಿಕಾರ್ಜುನ್‌ ಖರ್ಗೆ ಮೇಲೆ ಎರ್ರಾಬಿರ್ರಿ ಕೋಪ­ಗೊಂಡಿದ್ದ ಖಮರುಲ್‌ ಇಸ್ಲಾಂ ಕಳೆದ ವಾರ ದೆಹಲಿಗೆ ಬಂದಾಗ ಕರ್ನಾಟಕ ಭವನದ ಸಿಬ್ಬಂದಿ ಮೇಲೆ ಭರಪೂರ ರೇಗಿದ್ದಾರೆ. ‘‘ಮಂತ್ರಿ­ಯಾಗಿದ್ದಾಗ ಕೇಳಿದ ರೂಂ ಕೊಡುತ್ತಿದ್ದಿರಿ, ಕೇಳಿದ ಕಾರು ಡ್ರೈವರ್‌ ಸಿಗುತ್ತಿ­ದ್ದರು, ಅಧಿಕಾರ ಹೋದ ಮೇಲೆ ಕೆಟ್ಟದ್ದಾಗಿ ನಡೆಸಿಕೊಳ್ಳು­ತ್ತಿದ್ದೀರಿ'' ಎಂದು ಖಮರುಲ್‌ ಅಧಿಕಾರಿಗಳಿಗೆ ಒದರಾ­ಡಿದ್ದಾರೆ. ಕೇಳುವಷ್ಟುಕೇಳಿಸಿಕೊಂಡ ಭವನದ ಸಿಬ್ಬಂದಿಯೊಬ್ಬ, ‘‘ನೋಡಿ ಸಾರ್‌ ಮಂತ್ರಿಯಾಗಿ­ದ್ದಾಗ ಕೊಡುವ ರೂಂ, ಕಾರು ಡ್ರೈವರ್‌ನ್ನು ಈಗಲೂ ಕೊಡು ಎಂದರೆ ಕಷ್ಟ. ಬೇಕಿದ್ದರೆ ಇಲ್ಲಿಯೇ ಇರಿ, ಇಲ್ಲವಾದಲ್ಲಿ ಹೊರಗಡೆ ರೂಂ ಮಾಡಿ'' ಎಂದು ತಣ್ಣಗೆ ಹೇಳಿದನಂತೆ. 

ಬರಗಾಲದ ಸಂಭ್ರಮ:
ಕೆಲ ಬೇಜವಾಬ್ದಾರಿ ಅಧಿಕಾರಿಗಳಿಗೆ ಬರಗಾಲ ಇರಲಿ, ಪ್ರವಾಹ ಇರಲಿ, ದೆಹಲಿಯಲ್ಲಿ ಸಭೆ ನಡೆದರೆ ಖರ್ಚು ಮಾಡಬಹುದು ಎನ್ನುವುದೇ ಸಂಭ್ರಮ. ಕಳೆದ ವಾರ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಬರಗಾಲ ಕುರಿತ ರಾಜ್ಯದ ಸಂಸದರ ಸಭೆಗಾಗಿ ಸಂಭ್ರಮ ಆಚರಣೆಯೇನೋ ಎಂಬಂತೆ ಕರ್ನಾಟಕ ಭವನಕ್ಕೆ ಭರ್ಜರಿ ಲೈಟಿಂಗ್‌ ಮಾಡಿಸಲಾಗಿತ್ತು. ಅಷ್ಟೇ ಅಲ್ಲ, ಭವನದಲ್ಲಿ ಅಡುಗೆ ಭಟ್ಟರು ಇದ್ದರೂ ಪಂಚತಾರಾ ಹೋಟೆಲಿನಿಂದ 200 ಜನರಿಗೆ ಅಡುಗೆ ಮಾಡಿಸ­ಲಾಗಿತ್ತು. ಬಡಿಸುವವರು ಬಂದಿದ್ದು ಅಲ್ಲಿಂದಲೇ. 4 ಸಿಹಿ ಖಾದ್ಯ ಸೇರಿದಂತೆ 48 ತರಹದ ಭಕ್ಷ್ಯಗಳು ಬೇರೆ. ಇಷ್ಟಾಗಿಯೂ ಭಾಗವಹಿಸಿದ್ದ 37 ಸಂಸದರಲ್ಲಿ ಅಲ್ಲಿ ಊಟ ಮಾಡಿದ್ದು 9ರಿಂದ ಹತ್ತು ಸಂಸದರು ಮಾತ್ರ. ಮುಖ್ಯವಾಗಿ ಮೇಡಂ ಸೋನಿಯಾ ಗಾಂಧಿ ಅವರಿಗೆ ಬತ್‌ರ್‍ಡೇ ಶುಭಾಶಯ ಹೇಳಲು ದೆಹಲಿಗೆ ಬಂದಿದ್ದ ಮುಖ್ಯಮಂತ್ರಿಗಳು, ಲೆಕ್ಕಕ್ಕೆ ಇರಲಿ ಎನ್ನುವ ಹಾಗೆ ಸಂಸದರ ಸಭೆ ನಡೆಸಿದರೆ ಅಧಿಕಾರಿಗಳಿಗೆ ಖರ್ಚು ಮಾಡುವ ಸಂಭ್ರಮ. ಬರಗಾಲದಿಂದ ರೈತರಿಗೆ ಪ್ರಾಣ ಸಂಕಟ ಅಧಿಕಾರಿಗಳಿಗೆ ಮಾತ್ರ ಚೆಲ್ಲಾಟ. 

ಅಮ್ಮ ಎಂಬ ಗುಮ್ಮ:
ಇತ್ತೀಚೆಗೆ ನಿಧನರಾದ ಜಯಲಲಿತಾ ರಾಜಕೀಯದಲ್ಲಿ ಸಕ್ರಿಯರಾಗಿರುವವರೆಗೂ ಅವರ ಪಕ್ಷದ ಸಂಸದರು ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್‌ ಸಂಸದರ ಜೊತೆಗೆ ಮಾತನಾಡಲು ಹೆದರುತ್ತಿದ್ದರು. ಕುಳಿತು ಹರಟೆ ಹೊಡೆಯುವುದು ಬಿಡಿ, ಎಐಎಡಿಎಂಕೆಯ ತಂಬಿದೊರೈ, ಮೈತ್ರೇಯನ್‌'ರಂತಹ ಹಿರಿಯ ನಾಯಕರೂ ತಮಿಳುನಾಡಿನ ಬೇರೆ ಪಕ್ಷದ ಸಂಸದರಿಗೆ ಹಲೋ ಎನ್ನಲೂ ಹಿಂಜರಿಯು­ತ್ತಿದ್ದರು. ಎಲ್ಲಿ ಅಮ್ಮಾ ಸಿಟ್ಟಾಗುತ್ತಾರೋ ಎನ್ನುವ ಭಯ ಅವರಿಗೆ. ಆಶ್ಚರ್ಯ ಎಂದರೆ, ಕೆಲ ತಿಂಗಳು­ಗಳ ಹಿಂದೆ ತಂಬಿದೊರೈ ಪುತ್ರಿ ತಮಿಳುನಾಡಿನ ಕಾಂಗ್ರೆಸ್‌ ಶಾಸಕನ ಪುತ್ರನನ್ನು ಪ್ರೀತಿಸಿ ಮದುವೆ­ಯಾದಾಗ ತಂಬಿದೊರೈ ಅಮ್ಮನ ಕಾರಣದಿಂದ ಮದುವೆಗೂ ಹೋಗಲಿಲ್ಲ. ತನ್ನ ಪಕ್ಷದ ಮಂತ್ರಿಗಳು, ಶಾಸಕರು ಮತ್ತು ಸಂಸದರು ಡಿಎಂಕೆ ಮತ್ತು ಕಾಂಗ್ರೆಸ್‌ ನಾಯಕರ ಜೊತೆಗೆ ಆತ್ಮೀಯತೆಯಿಂದ ನಡೆದು­ಕೊಂಡರೆ ಅಮ್ಮಾ ಸಹಿಸುತ್ತಿರಲಿಲ್ಲವಂತೆ. ಆದರೆ ಇನ್ನು ಮುಂದೆ ಪರಿಸ್ಥಿತಿ ಬದಲಾಗಬಹುದು ಎನ್ನುತ್ತಾರೆ ತಮಿಳುನಾಡಿನ ಪತ್ರಕರ್ತರು. 

ಸದಾ ಮುಜುಗರ:
ಕೇಂದ್ರ ಯೋಜನಾ ಖಾತೆಯ ಮಂತ್ರಿಯಾದ ಡಿವಿ ಸದಾನಂದ ಗೌಡರು ಪ್ರಯಾಣಿಸಿದ 17 ಅಧಿಕೃತ ವೈಮಾನಿಕ ಪ್ರಯಾಣದ ಬಿಲ್‌ ಅನ್ನು ಮಂಜೂರು ಮಾಡಲು ಯೋಜನಾ ಖಾತೆಯ ಹೆಚ್ಚುವರಿ ಕಾರ್ಯ­ದರ್ಶಿ ತಗಾದೆ ತೆಗೆದಿದ್ದಾರೆ. ಮಂತ್ರಿಗಳು, ಅಧಿಕಾರಿಗಳು ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ­ದಲ್ಲಿ ಓಡಾಡಬೇಕು ಎಂದು ಸುತ್ತೋಲೆ ಇರುವಾಗ ಮಂತ್ರಿ ಸದಾನಂದ ಗೌಡರು ಬೇರೆ ವಿಮಾನದಲ್ಲಿ ಪ್ರವಾಸ ಮಾಡಿದ ಬಗ್ಗೆ ಅಧಿಕಾರಿ ಆಕ್ಷೇಪ ಎತ್ತಿದ್ದಾರೆ. ಬಹುತೇಕ ದೆಹಲಿ- ಬೆಂಗಳೂರು- ಮಂಗಳೂರು ನಡುವೆ ಓಡಾಡಿದ ಬಿಲ್‌ಗಳು ಅಂಗೀಕಾರವಾಗದೆ ಮಂತ್ರಿ ಸದಾನಂದಗೌಡರು ಮುಜುಗರ ಎದುರಿಸುವಂತಾಗಿದೆ. 

ಮೋದಿ ಮ್ಯಾನೇಜ್ಮೆಂಟ್‌:
ಪಂಡಿತ್‌ ನೆಹರುರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ಪ್ರಧಾನಿ ಅವರ ಮಾಧ್ಯಮ ಸಲಹೆಗಾ­ರರು ಆಗಿಂದಾಗ್ಗೆ ದೆಹಲಿಯ ಹಿರಿಯ ಪತ್ರಕರ್ತರನ್ನು ಭೇಟಿ­ಯಾಗಿ ಹಂಚಿಕೊಳ್ಳಬಹುದಾದ ಮಾಹಿತಿಗಳನ್ನು ಖಾಸಗಿ­ಯಾಗಿ ಹೇಳುತ್ತಿದ್ದರು. ಆದರೆ ಮಾಧ್ಯಮ ಮತ್ತು ಪತ್ರಿಕೆ­ಗಳಲ್ಲಿ ಅರ್ಧಕರ್ಧ ತುಂಬಿಕೊಂಡಿರುವ ಪ್ರಧಾನಿ ಮೋದಿಗೆ ಮಾಧ್ಯಮ ಸಲಹೆಗಾರರು ಇಲ್ಲವೇ ಇಲ್ಲ ಎಂದರೆ ನಂಬಲೇಬೇಕು. ಪತ್ರಿಕಾ ಕಾರ್ಯದರ್ಶಿ ಎಂದು ಗುಜರಾತ್‌ನ ಅಧಿಕಾರಿ ಠಕ್ಕರ್‌ ಇದ್ದು, ಅವರನ್ನು ದೆಹಲಿಯ ಪತ್ರಕರ್ತರು ನೋಡೇ ಇಲ್ಲ. ಪ್ರಧಾನಿ ಕಾರ್ಯಾಲಯದ ನೃಪೇಂದ್ರ ಮಿಶ್ರಾ, ಪಿ ಕೆ ಮಿಶ್ರಾ, ಅಜಿತ್‌ ದೋವಲ್‌ನಂಥ ಅಧಿಕಾರಿಗಳು ಎಂದಿಗೂ ತಾವಾಗಿ ಪತ್ರಕರ್ತರ ಜೊತೆ ಹರಟೆ ಹೊಡೆ­ಯುವುದಿಲ್ಲ. ರಾಷ್ಟ್ರೀಯ ಮೀಡಿಯಾ ಸೆಂಟರ್‌ನಲ್ಲಿರುವ ಪ್ರಧಾನಿ ಕಾರ್ಯಾ­ಲಯದ ಮಾಧ್ಯಮ ಜವಾಬ್ದಾರಿ ಹೊತ್ತಿರುವ ಅಧಿಕಾರಿಗೆ ಪ್ರಧಾನಿ ಕಾರ್ಯಕ್ರಮದ ಆಮಂತ್ರಣ­ಗಳನ್ನು ಹಂಚುವುದಷ್ಟೇ ಕೆಲಸ. 

ದಿಗ್ವಿಜಯ ಬೇಡ:
ಹತ್ತು ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷನ ಆಯ್ಕೆ ನಡೆಯಲಿದೆ. ಮಂತ್ರಿಗಳಾದ ಡಿ ಕೆ ಶಿವ­ಕುಮಾರ್‌, ಜಿ ಪರಮೇಶ್ವರ್‌, ಎಂ ಬಿ ಪಾಟೀಲ್‌ ಮತ್ತು ಎಚ್‌ ಕೆ ಪಾಟೀಲರ ಪೈಕಿ ಒಬ್ಬರು ಕಾಂಗ್ರೆಸ್‌ ಅಧ್ಯಕ್ಷ­ರಾಗಬಹುದು ಎನ್ನುತ್ತವೆ ಮೂಲ­ಗಳು. ಆದರೆ ರಾಹುಲ್‌ ಗಾಂಧಿ ಪಟ್ಟು ಹಿಡಿದರೆ ಯುವ ಮುಖಕ್ಕೆ ಆದ್ಯತೆ ಸಿಗಬಹುದು. ಆದರೆ ಒಳಗಿನ ಸುದ್ದಿ ಏನಪ್ಪಾ ಅಂದರೆ ಮಲ್ಲಿಕಾರ್ಜುನ ಖರ್ಗೆ, ಜಿ ಪರಮೇಶ್ವರ್‌, ಎಸ್‌ ಎಂ ಕೃಷ್ಣ, ಕೆ ಎಚ್‌ ಮುನಿಯಪ್ಪ, ಎಚ್‌ ಕೆ ಪಾಟೀಲ್‌, ಡಿ ಕೆ ಶಿವಕುಮಾರ್‌ ಎಲ್ಲರೂ ದಿಗ್ವಿಜಯ್‌ ಸಿಂಗ್‌ ಅವರನ್ನು ರಾಜ್ಯ ಉಸ್ತುವಾರಿ ಜವಾಬ್ದಾರಿಯಿಂದ ಬದಲಿಸಿ ಎಂದು ಮೇಡಂ ಮತ್ತು ರಾಹುಲ್‌ರಿಗೆ ಕೇಳಿಕೊಂಡಿದ್ದಾರೆ. ದಿಗ್ವಿಜಯ್‌ ಸಿಂಗ್‌ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರ ರಬ್ಬರ್‌ ಸ್ಟಾಂಪ್‌, ಮುಖ್ಯಮಂತ್ರಿ ಹೇಳಿದ್ದನ್ನು ಮಾತ್ರ ಕೇಳು­ತ್ತಾರೆ ಎನ್ನು­ವುದು ಉಳಿದ ಕಾಂಗ್ರೆಸ್‌ ನಾಯಕರ ಅಳಲಿಗೆ ಕಾರಣ. 

ಕೊಂಕಣಿ ಮತ್ತು ಮೀನು:
ರಕ್ಷಣಾ ಸಚಿವರಾದ ಬಳಿಕ ಸದಾ ವಿವಾದದಲ್ಲೇ ಇರುವ ಮನೋಹರ್‌ ಪಾರಿಕ್ಕರ್‌ ತಮ್ಮ ಮಾತೃಭಾಷೆ ಕೊಂಕಣಿ­ಯಾಗಿರುವ ಕಾರಣ ಸರಿ­ಯಾಗಿ ಹಿಂದಿ ಬರುವುದಿಲ್ಲ, ಪಂಜಾಬಿಗಳೇ ತುಂಬಿರುವ ದೆಹಲಿ ಪತ್ರಕರ್ತರು ನನ್ನ ಕೊಂಕಣಿ ಮಿಶ್ರಿತ ಹಿಂದಿಯನ್ನೇ ತಪ್ಪಾಗಿ ಅರ್ಥೈಸಿ­ಕೊಂಡು ಏನೇನೋ ಬರೆದು ವಿವಾದ ಸೃಷ್ಟಿಸುತ್ತಾರೆ ಎನ್ನು­ತ್ತಾರೆ. ಅಂದ ಹಾಗೆ ಪಾರಿಕ್ಕರ್‌ ಸಾಹೇಬರು ಶುಕ್ರವಾರ ಬಂತೆಂದರೆ ಪಣಜಿಗೆ ದೌಡಾಯಿಸುತ್ತಾರೆ. ಸಮುದ್ರದ ತಾಜಾ ಮೀನು­ಗಳನ್ನೂ ಬಿಟ್ಟಿರುವುದೆಂದರೆ ಪಾರಿಕ್ಕರ್‌ ಅವರಿಗೆ ಕಷ್ಟ. 

ಸಂಘ ಸಮನ್ವಯ:
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ­ದ್ದಾಗ ತನ್ನ ವೈಚಾರಿಕ ಗುರು ಆರ್‌ಎಸ್‌ಎಸ್‌ ಅನ್ನು ಸಮಾಧಾನಪಡಿಸುವಲ್ಲಿ ಸುಸ್ತಾಗುತ್ತಿದ್ದರು. ಆದರೆ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಸಂಘದ ವಿಶ್ವಾಸ ಕಳೆದುಕೊಂಡಿಲ್ಲ. ಸಂಘ ಪ್ರಮುಖರಾದ ಭಯ್ಯಾಜಿ ಜೋಶಿ, ದತ್ತಾತ್ರೇಯ ಹೊಸಬಾಳೆ ಮತ್ತು ಸುರೇಶ ಸೋನಿ ಜೊತೆಗೆ ಪ್ರತಿ ತಿಂಗಳು ಡಿನ್ನರ್‌ ಮೀಟಿಂಗ್‌ ನಡೆಸುವ ಮೋದಿ ಮತ್ತು ಅಮಿತ್‌ ಶಾ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದೆ ಹೆಜ್ಜೆ ಇಡುತ್ತಾರಂತೆ. ಆದರೆ ಗುಜರಾತ್‌ ಮುಖ್ಯಮಂತ್ರಿ­ಯಾಗಿ­ದ್ದಾಗ ಮಾತ್ರ ಮೋದಿ ಸ್ಥಳೀಯ ಸಂಘದ ಜೊತೆ ಸಂಬಂಧ ಕೆಡಿಸಿಕೊಂಡಿದ್ದರು.

(epaper.kannadaprabha.in)