ಭಿಂಡ್(ಸೆ.01): ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನಿಂದ ಬಿಜೆಪಿ ಹಾಗೂ ಬಜರಂಗ ದಳ ಹಣ ಪಡೆಯುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಮಧ್ಯಪ್ರದೇಶದ ಭಿಂಡ್’ನಲ್ಲಿ ಮಹಾರಾಣ ಪ್ರತಾಪ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ದಿಗ್ವಿಜಯ್, ಭಾರತದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಲು ಬಿಜೆಪಿ ಹಾಗೂ ಬಜರಂಗ ದಳಕ್ಕೆ ಐಎಸ್ಐ ಹಣಕಾಸಿನ ನೆರವು ನೀಡುತ್ತಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮುಸ್ಲಿಮರಿಗಿಂತ ಮುಸ್ಲಿಮೇತರರು ಪಾಕಿಸ್ತಾನದ ಐಎಸ್ಐಗೆ ಸಹಾಯ ಮಾಡುತ್ತಿದ್ದಾರೆ. ಬಿಜೆಪಿ ಪಾಕಿಸ್ತಾನದ ಸಂಸ್ಥೆ ಐಎಸ್ಐನಿಂದ ಹಣ ಪಡೆಯುತ್ತಿದೆ. ಇದನ್ನೂ ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ದಿಗ್ವಿಜಯ್ ಹೇಳಿದ್ದಾರೆ. 

ದಿಗ್ವಿಜಯ್ ಸಿಂಗ್ ಅವರು ನೀಡಿರುವ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಇನ್ನು ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೇ ಉಲ್ಟಾ ಹೊಡೆದಿರುವ ದಿಗ್ಗಿ, ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಹರಿಹಾಯಿದ್ದಾರೆ.