Asianet Suvarna News Asianet Suvarna News

ರೂಪಾ ಮೇಡಂ ಹೇಳ್ತಿರೋದೆಲ್ಲಾ ಸತ್ಯ; ಥೂ ಅವ್ರೆಲ್ಲಾ ಮನುಷ್ಯರಾ? ಕೈದಿಯ ಕ್ರೋಧದ ನುಡಿ

ಕೈದಿಗಳ ಮನಃಪರಿವರ್ತನೆ ಮಾಡಿ ಸನ್ನಡತೆ ತರಲು ಸರಕಾರವು "ರೂಪಾಂತರ" ಎಂಬ ವಿನೂತನ ಯೋಜನೆಯನ್ನು ಮಾಡಿದೆ. ಅದಕ್ಕೆ 10 ಕೋಟಿ ರೂ ವಿನಿಯೋಗವನ್ನೂ ಮಾಡಿದೆ. ಆದರೆ, ಕೈದಿಗಳು ಆರೋಪಿಸುವ ಪ್ರಕಾರ ಈ ಯೋಜನೆಯಲ್ಲಿ ಪೊಲೀಸ್ ಅಧಿಕಾರಿಗಳು ಗೋಲ್ಮಾಲ್ ಮಾಡುತ್ತಿದ್ದಾರೆ.

dig roopa is correct say jailmates
  • Facebook
  • Twitter
  • Whatsapp

ಬೆಂಗಳೂರು(ಜುಲೈ 13): ಪರಪ್ಪನ ಅಗ್ರಹಾರ ಜೈಲಿನ ದುರವಸ್ಥೆ ಬಗ್ಗೆ ಡಿಐಜಿ ರೂಪಾ ನೀಡಿರುವ ವರದಿಯಿಂದ ಪೊಲೀಸ್ ಅಧಿಕಾರಿಗಳಿಬ್ಬರ ಮಧ್ಯೆ ದೊಡ್ಡ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ವಿಚಾರಣಾಧೀನ ಕೈದಿಗಳು ಮತ್ತು ಮಾಜಿ ಕೈದಿಗಳು ರೂಪಾ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಕೆಲ ಕೈದಿಗಳು, ಡಿಐಜಿ ರೂಪಾ ಮಾಡಿರುವ ಆರೋಪಗಳು ಸತ್ಯ ಎಂದು ಹೇಳಿದ್ದಾರೆ.

ಜೈಲಿನಲ್ಲಿ ನಡೆಯಬಾರದವೆಲ್ಲಾ ನಡೆಯುತ್ತವೆ. ಇಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸುವ ಮನಸು ಯಾರಿಗೂ ಇಲ್ಲ. ರೂಪಾ ಮೇಡಂ ಇಲ್ಲಿ ದೇವರು ಬಂದಂತೆ ಬಂದು ಎಲ್ಲ ಕೈದಿಗಳ ಕುಂದುಕೊರತೆಗಳನ್ನು ಆಲಿಸಿದರು. ಅವರು ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯದಿಂದಲೇ ಕೂಡಿವೆ ಎಂದು ವಿಚಾರಣಾಧೀನ ಕೈದಿಯೊಬ್ಬ ಸುವರ್ಣನ್ಯೂಸ್'ಗೆ ತಿಳಿಸಿದ್ದಾನೆ.

ಡಿಜಿಪಿ ಸತ್ಯನಾರಾಯಣ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭ್ರಷ್ಟಾಚಾರಿಗಳು ಎಂದು ನೇರವಾಗಿ ದೂರಿದ ಈ ಕೈದಿ, ಲಂಚ ಪಡೆದು ಶಶಿಕಲಾಗೆ ವಿಶೇಷ ಸೌಲಭ್ಯ ಒದಗಿಸುತ್ತಿರುವುದು ನಿಜ ಎಂದು ಹೇಳಿದ್ದಾನೆ.

"ಶಶಿಕಲಾ, ತೆಲಗಿ ಇವರಿಗೆಲ್ಲಾ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಾರೆ. ಮೀಡಿಯಾದಲ್ಲಿ ವರದಿ ಬಂದ ಕೂಡಲೇ ಅಡುಗೆ ಮನೆಯಿಂದ ಎಲ್ಲವನ್ನೂ ಇವರು ಸಾಗಿಸಿಬಿಟ್ಟಿದ್ದಾರೆ," ಎಂದು ಈ ಕೈದಿ ತಿಳಿಸಿದ್ದಾನೆ.

ಗಾಂಜಾ ಮಾರಾಟದ ಬಗ್ಗೆ ಮಾತನಾಡಿದ ಈತ, "ದಿನಾ ರಾತ್ರಿ ಇವು ಜೈಲಿಗೆ ಸಪ್ಲೈ ಆಗುತ್ತವೆ. ಬೇಕಿದ್ದರೆ ಸಿಸಿಟಿವಿ ಚೆಕ್ ಮಾಡಿ. ಜೈಲಿನಲ್ಲಿ 97 ಸಿಸಿಟಿವಿ ಇವೆ. ಇವನ್ನು ನೋಡಿದರೆ ಎಲ್ಲವೂ ಗೊತ್ತಾಗಿಬಿಡುತ್ತದೆ. ಸಿಸಿಟಿವಿಯಲ್ಲಿ ರಾತ್ರಿಯ ದೃಶ್ಯಗಳು ಮಿಸ್ ಆಗಿದ್ದರೆ ಅವನ್ನು ಬೇಕಂತಲೇ ಡಿಲೀಟ್ ಮಾಡುವ ಸಾಧ್ಯತೆಯೂ ಇದೆ," ಎಂದು ಆರೋಪಿಸುತ್ತಾನೆ.

ಮನಪರಿವರ್ತನೆ ಎಲ್ಲಿ ಸ್ವಾಮಿ?
ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿಗೆ ಮನಃಪರಿವರ್ತನೆ ಮಾಡಬೇಕೆಂಬ ನಿಯಮವಿದೆ. ಆದರೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯ ಮನಪರಿವರ್ತಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಪೊಲೀಸರ ಹೀನ ನಡವಳಿಕೆ ಕಂಡು, ಇಂಥ ಕೆಟ್ಟವರೂ ಇರುತ್ತಾರೆಂಬುದನ್ನು ತಿಳಿದು ಕೈದಿಯೇ ಸ್ವಯಂ ಮನಃಪರಿವರ್ತಿಸಿಕೊಳ್ಳಬೇಕಷ್ಟೇ ಎಂದು ಸುವರ್ಣನ್ಯೂಸ್'ಗೆ ವಿಚಾರಣಾಧೀನ ಕೈದಿ ಹೇಳುತ್ತಾರೆ.

ರೂಪಾಂತರ ಗೋಲ್'ಮಾಲ್:
ಕೈದಿಗಳ ಮನಃಪರಿವರ್ತನೆ ಮಾಡಿ ಸನ್ನಡತೆ ತರಲು ಸರಕಾರವು "ರೂಪಾಂತರ" ಎಂಬ ವಿನೂತನ ಯೋಜನೆಯನ್ನು ಮಾಡಿದೆ. ಅದಕ್ಕೆ 10 ಕೋಟಿ ರೂ ವಿನಿಯೋಗವನ್ನೂ ಮಾಡಿದೆ. ಆದರೆ, ಕೈದಿಗಳು ಆರೋಪಿಸುವ ಪ್ರಕಾರ ಈ ಯೋಜನೆಯಲ್ಲಿ ಪೊಲೀಸ್ ಅಧಿಕಾರಿಗಳು ಗೋಲ್ಮಾಲ್ ಮಾಡುತ್ತಿದ್ದಾರೆ. ಯೋಜನೆಯ ಹಣವು ವಿವಿಧ ಅಧಿಕಾರಿಗಳ ಪಾಲಾಗಿದೆಯಂತೆ.

ಸನ್ನಡತೆಯಲ್ಲ, ಹಣ ಕೊಡಬೇಕು:
ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ಕೈದಿಯೊಬ್ಬರು ಹೇಳುವ ಪ್ರಕಾರ, ಜೈಲಿನಲ್ಲಿ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದು ಸುಳ್ಳು. ದುಡ್ಡು ಕೊಟ್ಟವರನ್ನು ರಿಲೀಸ್ ಮಾಡುತ್ತಾರೆ. ಇದು ಜೈಲಧಿಕಾರಿಗಳ ಗೋಲ್ಮಾಲ್ ಎಂದು ಹೇಳುತ್ತಾರೆ.

Follow Us:
Download App:
  • android
  • ios