ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರೂಪಾ, ತನ್ನ ವರದಿಯಲ್ಲಿರುವ ಸತ್ಯಾಸತ್ಯತೆ ಪರಿಶೀಲಿಸಲು ಸತ್ಯಶೋಧನಾ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆಯಾಗಲಿ. ಯಾರು ಸತ್ಯ ಹೇಳುತ್ತಿದ್ದಾರೋ ತಿಳಿದುಬರುತ್ತದೆ. ತಾನು ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ ಎಂದು ಸವಾಲೆಸೆದಿದ್ದಾರೆ.

ಬೆಂಗಳೂರು(ಜುಲೈ 13): ಕಾರಾಗೃಹ ಕಾನೂನುಗಳ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ ಎಂದು ಡಿಜಿಪಿ ಸತ್ಯನಾರಾಯಣರಾವ್ ಮಾಡಿರುವ ಆರೋಪವನ್ನು ಬಂಧೀಕಾನೆ ಡಿಐಜಿ ರೂಪಾ ತಳ್ಳಿಹಾಕಿದ್ದಾರೆ. "ಪೊಲೀಸ್ ಇಲಾಖೆ ಸೇರಿ 17 ವರ್ಷವಾಗಿದೆ. ಇಷ್ಟು ವರ್ಷ ಸರ್ವಿಸ್ ಇರುವ ತನಗೆ ಕಾರಾಗೃಹದ ಕಾನೂನು ಗೊತ್ತಿಲ್ಲವಾ? ಐಪಿಎಸ್ ಆಫೀಸರ್'ಗಳನ್ನ ಯಾಕೆ ಪೋಸ್ಟಿಂಗ್ ಮಾಡುತ್ತಾರೆ? ಎಂದು ರೂಪಾ ಪ್ರತಿಕ್ರಿಯಿಸಿದ್ದಾರೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ದುರವಸ್ಥೆಗಳ ಬಗ್ಗೆ ಬಂಧೀಕಾನೆ ಡಿಐಜಿ ರೂಪಾ ನೀಡಿರುವ 4 ಪುಟಗಳ ವರದಿಯು ಈಗ ಡಿಐಜಿ ವರ್ಸಸ್ ಡಿಜಿಪಿ ವಾರ್ ಆಗಿ ಪರಿಣಮಿಸಿದೆ. ಲಿಖಿತ ವರದಿಯನ್ನು ರೂಪಾ ಅವರು ಮಾಧ್ಯಮಗಳಿಗೆ ನೀಡಿದ್ದು ಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ಇರಿಸುಮುರಿಸು ತಂದಿದೆ. ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ರೂಪಾ, "ನಾನು ಮೌಖಿಕವಾಗಿಯೂ ತಿಳಿಸಿದ್ದೇನೆ. ವರದಿಯು ಲಿಖಿತವಾಗಿದ್ದರೆ ದಾಖಲೆಯಾಗಿ ಉಳಿಯುತ್ತದಾದ್ದರಿಂದ ಲಿಖಿತ ರೂಪದಲ್ಲಿ ವರದಿ ಸಲ್ಲಿಸಿದ್ದೇನೆ," ಎಂದು ಹೇಳಿದ್ದಾರೆ.

ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರೂಪಾ, ತನ್ನ ವರದಿಯಲ್ಲಿರುವ ಸತ್ಯಾಸತ್ಯತೆ ಪರಿಶೀಲಿಸಲು ಸತ್ಯಶೋಧನಾ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆಯಾಗಲಿ. ಯಾರು ಸತ್ಯ ಹೇಳುತ್ತಿದ್ದಾರೋ ತಿಳಿದುಬರುತ್ತದೆ. ತಾನು ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ ಎಂದು ಸವಾಲೆಸೆದಿದ್ದಾರೆ.

ಫೇಸ್ಬುಕ್'ನಲ್ಲಿ ಕಾರಾಗೃಹದ ಫೋಟೋಗಳನ್ನು ಪೋಸ್ಟ್ ಮಾಡಿ ಕಾನೂನು ಉಲ್ಲಂಘಿಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ರೂಪಾ, "ಫೇಸ್ಬುಕ್'ನಲ್ಲಿ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಇಲಾಖೆಯ ರಹಸ್ಯಗಳನ್ನು ಹಂಚಿಕೊಂಡಿಲ್ಲ. ಫೇಸ್ಬುಕ್'ನಲ್ಲಿ ಯಾವುದನ್ನು ಬರೆಯಬೇಕೆಂಬ ಕಾನೂನು ಅರಿವು ನನಗಿದೆ ಎಂದು ಡಿಐಜಿ ರೂಪಾ ತಿಳಿಸಿದ್ದಾರೆ.

ಸಾಕ್ಷ್ಯಾಧಾರವಿಲ್ಲದೇ ಆರೋಪ ಮಾಡಲಾಗಿದೆ ಎಂಬ ಆಪಾದನೆಯನ್ನು ನಿರಾಕರಿಸಿದ ಅವರು, "ವರದಿಯಲ್ಲಿ 9 ಅಂಶಗಳನ್ನು ಪ್ರಸ್ತಾಪಿಸಿದ್ದೇನೆ. ಅದರಲ್ಲಿ ಎಂಟರಲ್ಲಿ ಸಾಕ್ಷ್ಯಾಧಾರವನ್ನೂ ನೀಡಿದ್ದೇನೆ. ಇಲಾಖೆಯ ಬಗ್ಗೆ ಕೆಟ್ಟದಾಗಿ ಏನೂ ಹಾಕಿಲ್ಲ. ಆರ್'ಟಿಐ ಅರ್ಜಿ ಸಲ್ಲಿಸಿದಾಗ ಏನು ಕೊಡಬಹುದೋ ಆ ಮಾಹಿತಿಯನ್ನಷ್ಟೇ ವರದಿಯಲ್ಲಿ ಹಾಕಿದ್ದೀನಿ. ಯಾರು ಬೇಕಾದರೂ ಅದನ್ನು ನೋಡಬಹುದು," ಎಂದು ಸ್ಪಷ್ಪಪಡಿಸಿದ್ದಾರೆ.

ಡಿಐಜಿ ರೂಪಾ ಬರೆದ ಪತ್ರದಲ್ಲೇನಿದೆ?
‘ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಆಪ್ತೆಯಾಗಿರುವ ಶಶಿಕಲಾಗೆ ವಿಶೇಷ ಅಡುಗೆ ಮನೆ ಕಲ್ಪಿಸಲಾಗಿದೆ. ಇದು ಕಾರಾಗೃಹ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯಾಗುತ್ತದೆ. ಈ ವಿಷಯ ನಿಮ್ಮ (ಡಿಜಿಪಿ ಸತ್ಯನಾರಾಯಣರಾವ್) ಗಮನದಲ್ಲಿದ್ದರೂ ಅದನ್ನು ಮುಂದುವರಿಸಲಾಗಿದೆ ಎಂಬ ಊಹಾಪೋಹ ಇದೆ. ಈ ಕಾರ್ಯಕ್ಕೆ 2 ಕೋಟಿ ಲಂಚ ಕೊಡಲಾಗಿದೆ ಎಂಬ ಮಾತಿದ್ದು, ಈ ಆಪಾದನೆಗಳು ದುರದೃಷ್ಟಕರವಾಗಿ ನಿಮ್ಮ ಮೇಲೆಯೇ ಇರುವುದರಿಂದ ನೀವು (ಸತ್ಯನಾರಾಯಣರಾವ್) ಇದರ ಬಗ್ಗೆ ಗಮನಹರಿಸಿ ಕೂಡಲೇ ಜೈಲಿನ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ಮೇಲೆ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಬೇಕು.

ಛಾಪಾ ಕಾಗದ ಪ್ರಕರಣ ಮುಖ್ಯ ಆರೋಪಿ ಅಬ್ದುಲ್‌ಕರಿಂಲಾಲ್‌ ತೆಲಗಿ, ಆರು ತಿಂಗಳ ಹಿಂದೆ ವ್ಹೀಲ್‌ಚೇರ್‌ ಉಪಯೋಗಿಸುತ್ತಿದ್ದಾಗ ಸಹಾಯಕರನ್ನು ಕೊಡಬಹುದೆಂದು ಕೋರ್ಟ್‌ ಹೇಳಿತ್ತು. ಆದರೆ, ಈಗ ಆತ ಚೆನ್ನಾಗಿಯೇ ಓಡಾಡುತ್ತಿದ್ದಾನೆ. ಆದರೂ, ಆತನ ಕೋಣೆಯಲ್ಲಿ 3 ರಿಂದ 4 ಮಂದಿ ವಿಚಾರಣಾ ಕೈದಿಗಳಿದ್ದಾರೆ. ಆ ಕೈದಿಗಳು, ತೆಲಗಿಯ ಕಾಲು, ಕೈ, ಭುಜ ಒತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನೀವೂ (ಡಿಜಿಪಿ ಸತ್ಯನಾರಾಯಣ) ಕಚೇರಿಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ನೋಡಿರುತ್ತೀರೆಂದು ಭಾವಿಸಿರುತ್ತೇನೆ. ಇದು ನಿಯಮ ಉಲ್ಲಂಘನೆ ಎಂಬುದು ಗೊತ್ತಿದ್ದರೂ ನೀವು ಕ್ರಮ ಕೈಗೊಂಡಿಲ್ಲ.

ಜೂನ್‌ 29ರಂದು ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಹಾಗೂ ನಾಲ್ವರು ವೈದ್ಯರು ಸೇರಿದಂತೆ 10 ಮಂದಿಯ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ನನಗೆ ಹಾಗೂ ನಿಮಗೆ ಫ್ಯಾಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ. ನೀವು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ವರದಿ ನೀಡುವಂತೆ ಅಲ್ಲಿಯ ಮುಖ್ಯ ಅಧೀಕ್ಷಕರಿಗೆ ತಿಳಿಸಿದರೂ ವರದಿ ಬಂದಿಲ್ಲ. ಕಾರಾಗೃಹದಲ್ಲಿ ಗಾಂಜಾ ವ್ಯಾಪಕವಾಗಿ ಉಪಯೋಗವಾಗುತ್ತಿದೆ. ಇದನ್ನು ತಿಳಿಯಲು ಜುಲೈ 10ರಂದು ಡ್ರಗ್‌ ಟೆಸ್ಟ್‌ ಕಿಟ್‌ ಬಳಸಿ 25 ಕೈದಿಗಳ ರಕ್ತ ಹಾಗೂ ಮೂತ್ರದ ಪರೀಕ್ಷೆ ಮಾಡಿಸಿದ್ದೆ. ಅವರ ಪೈಕಿ 18 ಜನರಲ್ಲಿ ಗಾಂಜಾ ಅಂಶವಿರುವುದು ವೈದ್ಯಾಧಿಕಾರಿಗಳ ವರದಿಯಿಂದ ಸಾಬೀತಾಗಿದೆ.