ಬೆಂಗಳೂರು (ಮೇ. 31):  ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಬೇಡ ಎಂಬ ಪಟ್ಟು ಮುಂದುವರೆಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪಕ್ಷಕ್ಕಾಗಿ ಖಾತೆ ತ್ಯಜಿಸಲು ಸಿದ್ಧ, ಆದರೆ, ತಮ್ಮ ಖಾತೆಗಳಿಗೆ ಸಂಬಂಧಿಸಿದ ಕೆಲಸ ಕಾರ್ಯ ಅರೆಬರೆಯಾಗಿದ್ದು, ಅವುಗಳನ್ನು ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಕಾಂಗ್ರೆಸ್‌ ಸಚಿವರು ಹೊಸ ಕ್ಯಾತೆ ತೆಗೆದ ಪರಿಣಾಮ ಮೈತ್ರಿ ಕೂಟದ ಸಂಪುಟ ವಿಸ್ತರಣೆ-ಪುನಾರಚನೆ ನರಳಾಟ ದೈನಿಕ ಧಾರವಾಹಿಯಾಗಿ ಶುಕ್ರವಾರಕ್ಕೆ ಮುಂದೂಡಿಕೆ ಕಂಡಿದೆ!

ಕಳೆದ ಎರಡು ದಿನಗಳಿಂದ ನಗರದಲ್ಲೇ ಬೀಡುಬಿಟ್ಟು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸತತ ಪ್ರಯತ್ನ ನಡೆಸಿದರೂ ವಿಸ್ತರಣೆ-ಪುನಾರಚನೆ ವಿಚಾರದಲ್ಲಿ ಒಮ್ಮತ ಮೂಡಿಸಲು ಸಾಧ್ಯವಾಗಿಲ್ಲ.

ಕಾಂಗ್ರೆಸ್‌ ಸಚಿವರು, ಅತೃಪ್ತ ಶಾಸಕರು ಹಾಗೂ ಹಿರಿಯ ನಾಯಕರ ಸರಣಿ ಸಭೆಗಳನ್ನು ನಡೆಸಿದ ವೇಣುಗೋಪಾಲ್‌ ಅವರು ವಿಸ್ತರಣೆ-ಪುನಾರಚನೆ ಬಗ್ಗೆ ಕಾಂಗ್ರೆಸ್‌ನಲ್ಲಿ ಭಿನ್ನ ನಿಲುವು ಕಂಡುಬಂದ ಕಾರಣ ಸ್ಪಷ್ಟನಿಲುವು ಕೈಗೊಳ್ಳಲು ಆಗಿಲ್ಲ. ಹೀಗಾಗಿ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ವೇಣುಗೋಪಾಲ್‌ ಸಭೆ ನಡೆಸಲಿದ್ದು, ಈ ವೇಳೆ ಕಾಂಗ್ರೆಸ್‌ ನಾಯಕರ ನಿಲುವು ತಿಳಿಸಲಿದ್ದಾರೆ. ಈ ಸಭೆಯಲ್ಲಿ ಜೆಡಿಎಸ್‌ನ ಅಂತಿಮ ನಿಲುವೇನು ಎಂಬುದನ್ನು ತಿಳಿದುಕೊಂಡು, ಅನಂತರ ಹೈಕಮಾಂಡ್‌ಗೆ ಮಾಹಿತಿ ನೀಡುವರು ಎಂದು ಮೂಲಗಳು ಹೇಳಿವೆ.

ಒಂದು ವೇಳೆ ಜೆಡಿಎಸ್‌ ಪುನಾರಚನೆಗೆ ಪಟ್ಟು ಹಿಡಿದರೆ, ಆಗ ಕಾಂಗ್ರೆಸ್‌ ಹೈಕಮಾಂಡ್‌ಗೆ ಈ ವಿಚಾರ ತಿಳಿಸಿ ಹೈಕಮಾಂಡ್‌ನಿಂದಲೇ ರಾಜ್ಯ ನಾಯಕರಿಗೆ ನಿರ್ದೇಶನ ಕೊಡಿಸುವ ಸಾಧ್ಯತೆಯಿದೆ. ಒಂದು ವೇಳೆ ಜೆಡಿಎಸ್‌ ಕೂಡ ಕಾಂಗ್ರೆಸ್‌ ನಾಯಕರ ಅಭಿಪ್ರಾಯಗಳಿಗೆ ತಲೆದೂಗಿದರೆ ಆಗ ಕೆಲ ಕಾಲ ಸಂಪುಟ ವಿಸ್ತರಣೆ-ಪುನಾರಚನೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

ಸಮಯಾವಕಾಶ ಕೇಳಿದ ಸಚಿವರು:

ಪಕ್ಷದ ಹಿತಕ್ಕಾಗಿ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಘೋಷಿಸಿದ್ದ ಕಾಂಗ್ರೆಸ್‌ ಸಚಿವರೊಂದಿಗೆ ಕೆ.ಸಿ. ವೇಣುಗೋಪಾಲ್‌ ಅವರು ಗುರುವಾರ ಸಭೆ ನಡೆಸಿದರು.ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಸರ್ಕಾರಿ ನಿವಾಸದಲ್ಲಿ ನಡೆದ ಉಪಾಹಾರ ಕೂಟದ ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಚಿವ ಸ್ಥಾನಕ್ಕಾಗಿ ಅತೃಪ್ತರ ಸಂಖ್ಯೆ ಹೆಚ್ಚತೊಡಗಿದ್ದು, ಅವರಾರ‍ಯರೂ ಪಕ್ಷ ತೊರೆಯದಂತೆ ನೋಡಿಕೊಳ್ಳಲು ಸಚಿವ ಸ್ಥಾನ ನೀಡುವುದು ಅನಿವಾರ್ಯವಾಗಲಿದೆ. ಇದಕ್ಕಾಗಿ ಕೆಲವು ಹಾಲಿ ಸಚಿವರು ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಮೈತ್ರಿ ಸರ್ಕಾರದ ಉಳಿವಿಗೆ ಬೇರೆ ದಾರಿ ಇಲ್ಲ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಇದನ್ನು ಒಪ್ಪಿದ ಬಹುತೇಕ ಸಚಿವರು ಪಕ್ಷಕ್ಕಾಗಿ ಖಾತೆ ತ್ಯಜಿಸಲು ಸಿದ್ಧ ಎಂದು ಪುನರುಚ್ಚರಿಸಿದರೂ, ಇದಕ್ಕಾಗಿ ಕಾಲಾವಕಾಶ ಬೇಕು ಎಂಬ ಕ್ಯಾತೆ ತೆಗೆದರು ಎನ್ನಲಾಗಿದೆ. ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ತೊಡಗಿಕೊಂಡಿದ್ದರಿಂದ ಖಾತೆಗೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ನಿರ್ಧಾರಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ.

ಅರೆಬರೆಯಾಗಿರುವ ಈ ಕಾರ್ಯವನ್ನು ಪೂರ್ಣಗೊಳಿಸಲು ಜೂನ್‌ ಮಾಸಾಂತ್ಯದವರೆಗಾದರೂ ಕಾಲಾವಕಾಶ ಬೇಕು. ಇದನ್ನು ನೀಡಿದರೆ, ಅನಂತರ ಪಕ್ಷ ಹಾಗೂ ನಾಯಕರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾವು ಬದ್ಧ ಎಂದು ಬಹುತೇಕ ಶಾಸಕರು ಸಭೆಯಲ್ಲಿ ತಿಳಿಸಿದರು ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಹ ಪುನಾರಚನೆ ವಿರುದ್ಧ ತಮ್ಮ ಪಟ್ಟು ಮುಂದುವರೆಸಿದ್ದು, ವಿಸ್ತರಣೆ ಅಥವಾ ಪುನಾರಚನೆಗೆ ಈ ಹಂತದಲ್ಲಿ ಕೈ ಹಾಕಿದರೆ ಅದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯೇ ಹೆಚ್ಚು. ಇಲ್ಲದ ಗೊಂದಲಕ್ಕೆ ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಲ್ಲದೆ, ಬಿಜೆಪಿಯೂ ಪಕ್ಷದ ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿಲ್ಲ.

ಅಲ್ಲದೆ, ಬಿಜೆಪಿಯು ವಿಸರ್ಜನೆ ಬಯಸುತ್ತಿದೆ ಎಂಬ ಸಂದೇಶ ಇರುವುದರಿಂದ ಯಾವ ಶಾಸಕರೂ ಬಿಜೆಪಿಯ ಆಮಿಷಗಳಿಗೆ ಬಲಿಯಾಗಲು ಸಿದ್ಧರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇರುವಾಗ ವಿಸ್ತರಣೆ ಅಥವಾ ಪುನಾರಚನೆ ನಡೆಸಿದರೆ ಅದು ಹೊಸ ಅತೃಪ್ತಿ ಹಾಗೂ ಗೊಂದಲಕ್ಕೆ ಕಾರಣವಾಗುತ್ತದೆ. ನಾವೇ ಸರ್ಕಾರವನ್ನು ಅಸ್ಥಿರಗೊಳಿಸಿದಂತಾಗುತ್ತದೆ.

ಹೀಗಾಗಿ, ಸದ್ಯಕ್ಕೆ ಈ ಯಾವ ಪ್ರಯತ್ನವೂ ಬೇಡ. ಕಾದು ನೋಡೋಣ. ಬಿಜೆಪಿಯೇನಾದರೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಆರಂಭಿಸಿದರೆ ಆಗ ಇಂತಹ ಪ್ರತಿತಂತ್ರ ಬಳಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಕಾಂಗ್ರೆಸ್‌ ನಾಯಕರು, ಪಕ್ಷ ನಿಷ್ಠ ಸಚಿವರ ರಾಜೀನಾಮೆ ಪಡೆದು, ಅವರನ್ನು ಪಕ್ಷದ ಪ್ರಮುಖ ಹುದ್ದೆಗಳಿಗೆ ನಿಯೋಜಿಸಬೇಕು ಹಾಗೂ ಸಂಪುಟ ಪುನಾರಚನೆ ಮಾಡಿ ಬಿಜೆಪಿಯತ್ತ ಧಾವಿಸುವ ಸಾಧ್ಯತೆಯಿರುವ ಅತೃಪ್ತರಿಗೆ ಸಚಿವ ಸ್ಥಾನ ನೀಡಬೇಕು.

ಹೊಸ ಅತೃಪ್ತಿ ಹುಟ್ಟಿಕೊಂಡರೂ ಅದು ಒಂದು ಸ್ವರೂಪ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ಇಷ್ಟುಮಾಡಿದರೆ ಸರ್ಕಾರ ಕನಿಷ್ಠ ಒಂದು ವರ್ಷ ಅಬಾಧಿತವಾಗಿ ನಡೆಯುತ್ತದೆ ಎಂದು ವಾದಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗೆ ಕಾಂಗ್ರೆಸ್‌ನಲ್ಲಿ ಭಿನ್ನರಾಗ ಮೂಡಿರುವುದರಿಂದ ಗೊಂದಲಕ್ಕೆ ಒಳಗಾಗಿರುವ ವೇಣುಗೋಪಾಲ್‌ ಶುಕ್ರವಾರ ಜೆಡಿಎಸ್‌ ನಾಯಕರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ಅನಂತರ ಹೈಕಮಾಂಡ್‌ಗೆ ಬೆಳವಣಿಗೆ ವಿವರಿಸುವರು ಎಂದು ಮೂಲಗಳು ಹೇಳಿವೆ.