ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಅವರು ಗಿರಿಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 1 ಕೋಟಿ ರೂ.ಚೆಕ್​ ವಿತರಿಸಿದ್ದಾರೆ.

ಕೊಡಗು(ಡಿ.23): ಜಿಲ್ಲೆಯ ದಿಡ್ಡಳ್ಳಿ ಆದಿವಾಸಿಗಳ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ. ಸರ್ಕಾರ ಮೂಲಭೂತ ಸೌಕರ್ಯ ನೀಡಲು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಕಾರರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಅವರು ಗಿರಿಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 1 ಕೋಟಿ ರೂ.ಚೆಕ್​ ವಿತರಿಸಿದ್ದಾರೆ. ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್​ಗೆ ಚೆಕ್ ಹಸ್ತಾಂತರಿಸಿದರು. ಸಚಿವ ಆಂಜನೇಯ ನೇತೃತ್ವದ ಸಂಧಾನ ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿರುವ ನಟ ಚೇತನ್​ ಮಾತನಾಡಿ, ದಿಡ್ಡಳ್ಳಿ ಬಿಟ್ಟು ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗುವ ಕಾರಣದಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಗಿರಿಜನರು ಕೈಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲೆ ದಿಡ್ಡಳ್ಳಿಯಲ್ಲಿ ಗಿರಿಜನರನ್ನು ಒಕ್ಕಲೆಬ್ಬಿಸಿದ ಕಾರಣ ಕಳೆದ ಒಂದು ವಾರದಿಂದ ಗಿರಿಜನರು ಪ್ರತಿಭಟನೆ ನಡೆಸುತ್ತಿದ್ದರು.