ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೇಲೆ ಹಲ್ಲೆ ಮಾಡಿ, ಥಳಿಸಲಾಗಿದೆ ಎಂದನಿಸುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆ ಫೋಟೋದೊಂದಿಗೆ ‘ರಾಹುಲ್‌ ಗಾಂದಿಯವರು ಸ್ಪರ್ಧಿಸಿರುವ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಥಳಿಸಲಾಗಿದೆ’ ಎಂದು ಹೇಳಲಾಗುತ್ತಿದೆ.

ಐ ಸಪೋರ್ಟ್‌ ಯೋಗಿ ಎಂಬ ಫೇಸ್‌ಬುಕ್‌ ಪೇಜ್‌ ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಅಮೇಠಿ ಕ್ಷೇತ್ರದ ಜನತೆ ರಾಹುಲ್‌ ಗಾಂಧಿ ಅವರನ್ನು ಅಭೂತಪೂರ್ವ ಸ್ವಾಗತ ಕೋರಿ ಬರಮಾಡಿಕೊಂಡರು. ರಾಹುಲ್‌ ಮೇಲೆ ದಾಳಿ ಮಾಡಲಾಯಿತು’ ಎಂದು ಒಕ್ಕಣೆ ಬರೆಯಲಾಗಿದೆ. ಫೋಟೋದಲ್ಲಿ ರಾಹುಲ್‌ ಗಾಂಧಿ ಕಣ್ಣಿಗೆ ಏಟು ಬಿದ್ದಿರುವಂತೆ ಕಾಣುತ್ತದೆ. ಇದೀಗ ಟ್ವೀಟರ್‌ ಸೇರಿದಂತೆ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಆದರೆ ನಿಜಕ್ಕೂ ರಾಹುಲ್‌ ಗಾಂಧಿಗೆ ಅಮೇಠಿ ಕ್ಷೇತ್ರದಲ್ಲಿ ಥಳಿಸಲಾಗಿತ್ತೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳುಸುದ್ದಿ ಎಂದು ಸಾಬೀತಾಗಿದೆ. ರಿವರ್ಸ್‌ ಇಮೇಜ್‌ನಲ್ಲಿ ಆಲ್ಟ್‌ ನ್ಯೂಸ್‌ ಪರಿಶೀಲಿಸಿದಾಗ, ವೈರಲ್‌ ಆಗಿರುವ ಫೋಟೋಕ್ಕೆ ಸಾಮ್ಯತೆ ಇರುವ ಫೋಟೋವನ್ನು ಪೋಸ್ಟ್‌ ಕಾರ್ಡ್‌ ನ್ಯೂಸ್‌ ಪ್ರಕಟಿಸಿದ್ದ ಲೋಖನವೊಂದು ಲಭ್ಯವಾಗಿದೆ.

ಇದಲ್ಲದೆ ಹಲವಾರು ಮಾಧ್ಯಮಗಳೂ ಮೂಲ ಚಿತ್ರಕ್ಕೆ ಬೇರೆ ಬೇರೆ ಬ್ಯಾಕ್‌ಗ್ರೌಂಡ್‌ ಚಿತ್ರವನ್ನು ಸೂಪರ್‌ ಇಂಪೋಸ್‌ ಮಾಡಿ ಪ್ರಕಟಿಸಿವೆ. ಸದ್ಯ ಇದೇ ಚಿತ್ರವನ್ನು ಬಳಸಿಕೊಂಡು, ಕಣ್ಣು ಗುಡ್ಡೆ ದಪ್ಪದಾಗಿರುವಂತೆ ಪೇಯಿಂಟ್‌ ಮಾಡಲಾಗಿದೆ. ಹಿನ್ನೆಲೆಯಲ್ಲಿ ಪರ್ವತದ ಚಿತ್ರವನ್ನು ಸೂಪರ್‌ ಇಂಪೋಜ್‌ ಮಾಡಲಾಗಿದೆ. ಅಲ್ಲಿಗೆ ಕಾಂಗ್ರೆಸ್‌ ಭದ್ರಕೋಟೆ ಅಮೇಠಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಥಳಸಲಾಗಿದೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.

- ವೈರಲ್ ಚೆಕ್