ಧಾರವಾಡ (ಜ.07): ಮೂರೂವರೆ ಗಂಟೆ ತಡವಾಗಿ ಶುರುವಾಯಿತು, ಸುಮಂಗಲಿಯರ ಕುಂಭಮೇಳ ಬೇಡವಿತ್ತು, ಮೂರು ಮಂದಿ ಬಹಿಷ್ಕರಿಸಿದರು, ಇಬ್ಬರು ಕಪ್ಪು ಬಟ್ಟೆಕಟ್ಟಿಕೊಂಡು ಭಾಗಿಯಾದರು, ಧಾರವಾಡದ ಸಾಹಿತಿಗಳಿಗೇ ಜಾಗ ಸಿಗಲಿಲ್ಲ, ಹೋಟೆಲಿಗೆ ಬಂದವರಿಗೆ ಸಮ್ಮೇಳನದ ಅಂಗಳಕ್ಕೆ ಬರಲಾಗಲಿಲ್ಲ, ಊರಿನಿಂದ ದೂರ ಇಡಬಾರದಿತ್ತು, ಊಟ ಸರಿಯಾಗಲಿಲ್ಲ, ಪುಸ್ತಕದ ಅಂಗಡಿಗೆ ಸೌಲಭ್ಯ ಸಾಲದು, ಧೂಳು ಜಾಸ್ತಿ, ಅಸಹಿಷ್ಣುತೆ ಧೂಳೀಪಟ ಆಯಿತು, ಸಭೆಗಳು ತುಂಬಿದ್ದವು.

ಜನ ಭಾಷಣಕ್ಕೆ ಕಿವಿಯಾಗಿದ್ದರು, ಕವಿಗಳು ಎಂದಿನಂತೆ ಸಂತೋಷದಿಂದ ಇದ್ದರು, ಕೊನೆಯ ದಿನ ಜನರ ಮಹಾಪೂರ ಹರಿದು ಬಂತು, ಸಮ್ಮೇಳನಾಧ್ಯಕ್ಷರ ಜೊತೆಗೇ ಪರಿಷತ್‌ ಅಧ್ಯಕ್ಷರೂ ಕೂತು ಸಮಾನತೆ ಮೆರೆದರು, ಕಂಬಾರರಿಗೆ ಸನ್ಮಾನ ಮಾಡುವ ಹೊತ್ತಿಗೆ ಮುಖ್ಯಮಂತ್ರಿ ಮೊಬೈಲು ನೋಡುತ್ತಾ ಕೂತಿದ್ದರು, ಕುಠಾರ ಸ್ವಾಮಿ ಎಂದು ಕರೆದ ಚಂದ್ರಶೇಖರ ಪಾಟೀಲರಿಗೆ ಮುಖ್ಯಮಂತ್ರಿ ಪಾಟೀಸವಾಲು ಹಾಕಿದರು. ಪಾಟೀಲರು ಕೇಸು ಗೆದ್ದರು...

ಎಂಬಲ್ಲಿಗೆ ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು. ಈ ಸಮ್ಮೇಳನ ಕೂಡ ಜಾರಿಯಾಗುವ ಒಂದು ನಿರ್ಣಯವನ್ನು ಕೈಗೊಂಡಿತು; ಮುಂದಿನ ಸಮ್ಮೇಳನ ಕಲ್ಬುರ್ಗಿಯಲ್ಲಿ ಎಂಬ ಅಘೋಷಿತ ನಿರ್ಣಯ ಖಂಡಿತಾ ಜಾರಿಗೆ ಬರಲಿದೆ.

ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರು ಕೇವಲ 22 ನಿಮಿಷಗಳ ಭಾಷಣದ ಮೂಲಕ ಕೇಳುಗರನ್ನು ರೋಮಾಂಚನಗೊಳಿಸಿದರು. ಕಳೆದ ಎರಡು ದಶಕದಲ್ಲಿ ಅತ್ಯಂತ ಪುಟ್ಟಅಧ್ಯಕ್ಷ ಭಾಷಣ ಮಾಡಿದ ದಾಖಲೆಗೂ ಪಾತ್ರರಾದರು. ಅವರ ಭಾಷಣ ಕನ್ನಡ ಶಾಲೆಗಳ, ಕನ್ನಡ ಮಾಧ್ಯಮದ ಕುರಿತಷ್ಟೇ ಆಗಿದ್ದರಿಂದ ಸಾಕಷ್ಟುಚರ್ಚೆಗೂ ಒಳಗಾಯಿತು. ಸಮ್ಮೇಳನದ ಉದ್ದಕ್ಕೂ ಅದು ವಿವಿಧ ವೇದಿಕೆಗಳಲ್ಲಿ ಅನುರಣಿಸಿತು.

ಸಮ್ಮೇಳನದ ನಿರ್ಣಯ ಕೂಡ ಸಮ್ಮೇಳನಾಧ್ಯಕ್ಷರ ಭಾಷಣದ ಆಶಯವನ್ನೇ ಎತ್ತಿಹಿಡಿಯಿತು. ಇಂಗ್ಲಿಷ್‌ ಶಾಲೆಗಳನ್ನು ಆರಂಭಿಸುವ ಯೋಜನೆಯನ್ನು ಕೈ ಬಿಡಬೇಕು, ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂಬ ಮಹತ್ವದ ನಿರ್ಣಯಗಳು ಕೂಡ ಮಂಡಿತವಾದವು.

ಧಾರವಾಡದ ಸಮ್ಮೇಳನವನ್ನು ಕವಿಗಳ ನಾಡು, ಅಕ್ಷರಪ್ರಿಯರ ಬೀಡು ಯಶಸ್ವಿಗೊಳಿಸದೇ ಇರಲಿಲ್ಲ. ಭಾಗವಹಿಸಿದ ಜನರ ಸಂಖ್ಯೆಯೇ ಮಾನದಂಡ ಎನ್ನುವುದಾದರೆ ಧಾರವಾಡ ಸಾಹಿತ್ಯ ಸಮ್ಮೇಳನದ್ದು ಅಭೂತಪೂರ್ವ ಯಶಸ್ಸು. ಜನಸಮೂಹದ ಜೊತೆಯಲ್ಲೇ ಸಾಹಿತ್ಯಾಸಕ್ತ ಮಂದಿಯೂ ಇದ್ದರು ಅನ್ನುವುದಕ್ಕೆ ಸಾಕ್ಷಿಯಾಗಿ ಮಕ್ಕಳ ಗೋಷ್ಠಿಯೊಂದನ್ನು ಬಿಟ್ಟರೆ ಮಿಕ್ಕೆಲ್ಲ ಸಾಹಿತ್ಯ ಗೋಷ್ಠಿಗಳೂ ತುಂಬಿ ತುಳುಕುತ್ತಿದ್ದವು. ಅರ್ಥಪೂರ್ಣ ಮಾತು, ಭಾವಪೂರ್ಣ ಸಾಲು, ಹೃದಯದ ಮಾತು, ಕನ್ನಡದ ಅನನ್ಯತೆ ಕಿವಿಗೆ ಬಿದ್ದಾಗೆಲ್ಲ ಮಂದಿ ಚಪ್ಪಾಳೆ ತಟ್ಟಿಮೆಚ್ಚುಗೆ, ಸಹಮತ ಸೂಚಿಸುತ್ತಿದ್ದರು.

ಧಾರವಾಡ ಸಮ್ಮೇಳನದಲ್ಲಿ ಸರ್ವರೂ ಸುಖವಾಗಿದ್ದರು. ಪೊಲೀಸರು ಲಾಠಿ ಬೀಸಲಿಲ್ಲ, ಪುಸ್ತಕ ಮಾರಾಟಗಾರರು ನಷ್ಟಅನುಭವಿಸಲಿಲ್ಲ, ಕನ್ನಡ ಅನ್ನದ ಭಾಷೆ ಅಲ್ಲ ಅನ್ನುವುದು ಮಾತ್ರ ಮತ್ತೊಮ್ಮೆ ಸಾಬೀತಾಯಿತು. ಊಟದ ಮನೆಗೆ ಹೋಗುವ ದಾರಿಯಲ್ಲಿ ನೂರೆಂಟು ಅಡೆತಡೆಗಳಿದ್ದವು. ಜನ ಜಂಗುಳಿಯಲ್ಲಿ ಬೆರೆತು, ತಾವು ಕನ್ನಡಿಗರೆಂಬ ಹೆಮ್ಮೆಯಲ್ಲಿ ಎದೆಯುಬ್ಬಿಸಿ ನಡೆದರು.

ಹೆಚ್ಚಿನ ಸ್ವಯಂಸೇವಕರು ಮಾತ್ರ ಹಿಂದಿ ಭಾಷಿಕರಾಗಿದ್ದರು. ಊಟದ ಮನೆಯಲ್ಲಿ, ಕಾವಲು ವ್ಯವಸ್ಥೆಯಲ್ಲಿ, ನೆರವು ನೀಡುವಲ್ಲಿ ಅವರು ಹಿಂದಿಯಲ್ಲಿಯೇ ಮಾತಾಡುತ್ತಾ ಬೇಕು ಬೇಕಾದವರಿಗೆ ನೆರವಾಗುತ್ತಿದ್ದರು. ಧಾರವಾಡದಲ್ಲಿ ಹಿಂದಿ ಕೂಡ ಕನ್ನಡದಷ್ಟೇ ಆಪ್ಯಾಯಮಾನವಾಗಿ ಕೇಳಿಸುತ್ತಿತ್ತಾಗಿ, ಯಾರೂ ಅದಕ್ಕೆ ಬೇಸರಪಟ್ಟುಕೊಳ್ಳಲಿಲ್ಲ.

ಇವತ್ತಿನಿಂದ ಸರಿಯಾಗಿ ಹನ್ನೆರಡು ದಿನಕ್ಕೆ ಧಾರವಾಡಕ್ಕೆ ಸಾಹಿತ್ಯ ಸಂಭ್ರಮದ ಪುಳಕ. ಸುಮಾರು ಐದು ಲಕ್ಷ ಮಂದಿಯನ್ನು ನೋಡಿದ ಸಾಹಿತ್ಯ ಸಮ್ಮೇಳನದ ನಂತರ ಮೂರು ದಿನಗಳಲ್ಲಿ ಐದು ಸಾವಿರ ದಾಟದ ಸಾಹಿತ್ಯ ಸಂಭ್ರಮ. ಸಮ್ಮೇಳನ ಕಲೆಯುವುದಕ್ಕೆ ಸಂಭ್ರಮ ಕಲಿಯುವುದಕ್ಕೆ ಎಂಬುದು ಘೋಷವಾಕ್ಯ. ಸಮ್ಮೇಳನಕ್ಕೆ ಬಂದ ಬಹುತೇಕ ಸಾಹಿತಿಗಳು ಮತ್ತೆ ಸಂಭ್ರಮಕ್ಕೆ ಬರುವವರಿದ್ದಾರೆ ಎಂಬ ಕಾರಣಕ್ಕೇ ಧಾರವಾಡಕ್ಕೆ ಈ ಸಲ ಮತ್ತೊಮ್ಮೆ ಪುಲಕ. ಆ ಮಟ್ಟಿಗೆ ಊರು ಇಮ್ಮಡಿ ಪುಲಕೇಶಿ!

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮಯ ಸಿಗಲಿಲ್ಲ ಅಂತ ಸಂಗೀತ, ನೃತ್ಯ, ಹರಿಕತೆಗಳೆಲ್ಲ ಮುನಿಸಿಕೊಂಡರೂ ಜನ ಬೇಸರ ಮಾಡಿಕೊಳ್ಳಲಿಲ್ಲ. ಹಾಡು, ಹಸೆ, ನಾಟಕ ಇದ್ದದ್ದೇ ಬಿಡ್ರೀ, ಮಾತು ಕೇಳೋಣ ಅಂತ ಎಲ್ಲರೂ ಗೋಷ್ಠಿಯ ಪಾಲಾದರು. ಮೂರೇ ದಿನಕ್ಕೆ ಓಓಡಿ ಸ್ಲಿಪ್‌ ಕೊಟ್ಟಿದ್ದಾರೆ. ಇನ್ನೊಂದು ದಿನ ವಿಶ್ರಾಂತಿಗೆಂದು ಕೊಡಬೇಕಾಗಿತ್ತು ಅಂತ ಅನೇಕ ಸರ್ಕಾರಿ ನೌಕರರು ಪೆಚ್ಚು ಮೋರೆ ಹಾಕಿಕೊಂಡಿದ್ದರು. ಪುಸ್ತಕದ ಅಂಗಡಿಯ ಮುಂದೆ ಅಂಗಿ, ಬನೀನು, ಕಳ್ಳೇಪುರಿ, ಕಷಾಯ ಮಾರುತ್ತಾರೆಂದು ಪುಸ್ತಕದ ಅಂಗಡಿಯವರು ಮೊದಲ ದಿನ ಬೇಜಾರು ಮಾಡಿಕೊಂಡರೂ ಮೂರನೇ ದಿನದ ಕೊನೆಯ ಹೊತ್ತಿಗೆ ಅವರ ಜೇಬು ಉಬ್ಬಿತ್ತು.

ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಪಡೆದ, ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತರ ಹುಟ್ಟೂರಾದ ಧಾರವಾಡವೇ ಧನ್ಯ. ಸಣ್ಣಪುಟ್ಟನಿಟ್ಟುಸಿರು ಮತ್ತು ತಕರಾರಿನೊಂದಿಗೆ ಧಾರವಾಡ ಸಮ್ಮೇಳನ ಯಶಸ್ವಿಯಾಗಿಯೇ ಸಂಪನ್ನ.

ಹೋಂ ಪಿಚ್‌ನಲ್ಲಿ ಚಂಪಾ ಸಿಕ್ಸರ್‌!

ಚಂದ್ರಶೇಖರ ಕಂಬಾರ ಮತ್ತು ಪಾಟೀಲರ ಪೈಕಿ ಹೆಚ್ಚು ಮಿನುಗಿದವರು ಪಾಟೀಲರು. ಅವರ ಖಡಕ್‌ ಮಾತು, ಮುಖ್ಯಮಂತ್ರಿಗಳನ್ನೇ ತರಾಟೆಗೆ ತೆಗೆದುಕೊಂಡ ರೀತಿ, ಮಕ್ಕಳನ್ನು ನಿಜಕ್ಕೂ ಕನ್ನಡ ಮಾಧ್ಯಮದಲ್ಲೇ ಓದಿಸಿದವರು ಎಂಬ ಸತ್ಯ ಅವರ ಮೇಲಿನ ಅಕ್ಕರೆಯನ್ನು ಮತ್ತಷ್ಟುಹೆಚ್ಚಿಸಿದ್ದು ಸುಳ್ಳಲ್ಲ. ಅಷ್ಟಕ್ಕೂ ಪಾಟೀಲರ ಪಾಲಿಗೆ ಧಾರವಾಡ ಹೋಮ್‌ ಪಿಚ್‌. ಅವರು ಚೆನ್ನಾಗಿಯೇ ಆಟ ಆಡಿದರು. ಒಂದೆರಡು ಸಿಕ್ಸರ್‌ ಕೂಡ ಬಾರಿಸಿದರು.

-ಜೋಗಿ