ಧಾರವಾಡ :  ಇಲ್ಲಿನ ಕುಮಾರೇಶ್ವರ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ  ಮುಂದುವರಿದಿದ್ದು, ಮತ್ತೆ 7 ಶವಗಳನ್ನು ಹೊರತೆಗೆಯಲಾಗಿದೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದಂತಾಗಿದೆ. ಇನ್ನೂ 13 ವಿದ್ಯಾರ್ಥಿಗಳು ಸೇರಿ 15 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರಬಹುದು ಎಂದು ಜಿಲ್ಲಾಡಳಿತದ ಮೂಲಗಳು ಹೇಳಿದ್ದು, ದುರಂತ ಸಂಭವಿಸಿ 50 ಗಂಟೆ ಕಳೆದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿ ತೆರವು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. 

ಮಾಜಿ ಸಚಿವರ ಮಾವ ವಶಕ್ಕೆ

ತಲೆಮರೆಸಿಕೊಂಡಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಮಾವ ಗಂಗಪ್ಪ ಶಿಂತ್ರಿ ಸೇರಿ ಐವರು ಪಾಲುದಾರರನ್ನು ವಶಕ್ಕೆ ಪಡೆಯಲಾ ಗಿದೆ ಎನ್ನಲಾಗಿದೆ. ಆದರೆ, ಯಾರೂ ಇದನ್ನು ಖಚಿತಪಡಿಸುತ್ತಿಲ್ಲ. ಈ ಮಧ್ಯೆ, ಕಟ್ಟಡದ ಎಂಜಿನಿಯರ್ ವಿವೇಕ್ ಪವಾರ್‌ನನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಂಧಿಸಲಾಗಿದೆ.