ತಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವುದಾಗಿ ಯಡಿಯೂರಪ್ಪ ಹೇಳುತ್ತಾರೆ. ಆ ರೀತಿ ಮಾಡಲು ಇವರೇನು ನ್ಯಾಯಾಧೀಶರಾ? ಅಥವಾ ತಮ್ಮನ್ನು ತಾವು ಉಗಾಂಡ ಸರ್ವಾಕಾಧಿರಿ ಈದಿ ಅಮಿನ್ ಅಂದುಕೊಂಡಿದ್ದಾರಾ

ಬೆಂಗಳೂರು(ಫೆ.21): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಜೈಲಿಗಟ್ಟುವ ಹೇಳಿಕೆ ನೀಡಿದ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ತಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವುದಾಗಿ ಯಡಿಯೂರಪ್ಪ ಹೇಳುತ್ತಾರೆ. ಆ ರೀತಿ ಮಾಡಲು ಇವರೇನು ನ್ಯಾಯಾಧೀಶರಾ? ಅಥವಾ ತಮ್ಮನ್ನು ತಾವು ಉಗಾಂಡ ಸರ್ವಾಕಾಧಿರಿ ಈದಿ ಅಮಿನ್ ಅಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ಪದೇ ಪದೇ ಇಂತಹ ಹುಚ್ಚು ಹೇಳಿಕೆ ನೀಡುವ ಬದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದ ಶಿಖರ ಏರಿ ಜೈಲಿಗೆ ಹೋಗಿ ಬಂದವರು. ಈಗ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದಾರೆ. ಸಿಎಂ ತಪ್ಪು ಮಾಡಿದ್ದರೆ ಈಗಲೂ ಕೇಂದ್ರ ಸರ್ಕಾರವನ್ನು ಬಳಿಸಿಕೊಂಡು ಅವರನ್ನು ಜೈಲಿಗೆ ಹಾಕಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ ಅವರು, ಭಾನುವಾರ ಬಿಜೆಪಿಯವರು ಯಾವ ವಿಚಾರಕ್ಕೆ ಪ್ರತಿಭಟನೆ ಮಾಡಿದ್ದಾರೆಂಬುದೂ ಗೊತ್ತಾಗುತ್ತಿಲ್ಲ. ಬಾಯಿಗೆ ಬಂದ ಹಾಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಂತು ಜನ ಸಾಮಾನ್ಯರು ಮಾತನಾಡುವಂತೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ ಎಂದರು.

ಸತ್ಯಮೇವಜಯತೆರಾಲಿ:

ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿವೆ. ಐಟಿ ದಾಳಿ ಹಾಗೂ ಡೈರಿಯ ಬಗ್ಗೆ ಸಿಬಿಐ ತನಿಖೆ ನಡೆಸಿ ಸತ್ಯ ಹೊರಗೆ ತರಲಿ. ನಮ್ಮ ವಿರುದ್ಧ ಸಾಕ್ಷ್ಯಾಧಾರ ಲಭಿಸಿದರೆ ಆ ದಿನವೇ ಜೈಲಿಗೆ ಹಾಕಿ. ಅದು ಬಿಟ್ಟು ಹುಚ್ಚುಹುಚ್ಚಾಗಿ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ಮಾಡುತ್ತಿರುವ ಸುಳ್ಳು ಆರೋಪವನ್ನು ಖಂಡಿಸಿ ಕಾಂಗ್ರೆಸ್ ‘ಸತ್ಯಮೇವ ಜಯತೆ’ ಹೆಸರಿನಲ್ಲಿ ಫೆ.23ರಂದು ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಬೃಹತ್ ಪ್ರತಿಭಟನಾ ರಾಲಿ ನಡೆಸಲಿದೆ ಎಂದು ಹೇಳಿದರು.