ಬೆಂಗಳೂರು (ಜೂ. 20): ಇತ್ತೀಚಿಗೆ ಆರೋಗ್ಯ ವಿಚಾರವಾಗಿ ಪ್ರಧಾನ ಮಂತ್ರಿಗಳು ನೀಡಿದ ಫಿಟ್ನೆಸ್ ಸವಾಲು ಸ್ವೀಕರಿಸಿದ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಿ.ಎಚ್.ಕಿಶೋರ್ ಚಂದ್ರ ಅವರು, ದೈಹಿಕ ಕಸರತ್ತಿನ ವಿಡಿಯೋವನ್ನು ಟ್ವಿಟರ್‌ನಲ್ಲಿ  ಹಂಚಿಕೊಂಡಿದ್ದಾರೆ.

ಕಿಶೋರ್ ಚಂದ್ರ ಅವರ ಸುಮಾರು ನಾಲ್ಕು ನಿಮಿಷಗಳ ವ್ಯಾಯಾಮದ ವಿಡಿಯೋವನ್ನು ಎಡಿಜಿಪಿ ಪ್ರತಾಪ್ ರೆಡ್ಡಿ ಅವರು, ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸವಾಲು ಸ್ವೀಕರಿಸಿದ 59 ವರ್ಷದ ಗೃಹ ಮಂಡಳಿ ಡಿಜಿಪಿ ಕಿಶೋರ್ ಚಂದ್ರ ಅವರು, ಪ್ಲಾಕ್ ಎಕ್ಸೈಸ್ (ಮೊಣಕೈಯನ್ನು ನೆಲಕ್ಕೆ ಉರಿ ದೇಹವನ್ನು ಹಲಗೆ ಮಾದರಿ ಸಮತೋಲನ ಸ್ಥಿತಿಯಲ್ಲಿಡುವುದು) ಮಾಡಿದ್ದಾರೆ. ಡಿಜಿಪಿ ಅವರಿಗೆ ಅಭಿನಂದನೆಗಳು ಎಂದು ಎಡಿಜಿಪಿ ಟ್ವಿಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಫಿಟ್ನೆಸ್ ವಿಡಿಯೋ ಹಂಚಿಕೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ೪೦ ವರ್ಷ ಮೀರಿದ ಐಪಿಎಸ್ ಅಧಿಕಾರಿಗಳಿಗೆ ಸವಾಲು ಹಾಕಿದ್ದರು. ಈ ಸವಾಲಿಗೆ ಪ್ರತಿಕ್ರಿಯಿಸಿ ಹಲವು ಐಪಿಎಸ್ ಅಧಿಕಾರಿಗಳು ಫಿಟ್ನೆಸ್ ವಿಡಿಯೋ ಹಂಚಿಕೊಂಡಿದ್ದರು.