ವಿಧಾನಸೌಧ(ಸೆ.21): 20 ವರ್ಷಗಳ ಬಳಿಕ ಮಣ್ಣಿನ ಮಗ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿಗಾಗಿ ಇವತ್ತು ಸರ್ವಪಕ್ಷ ಸಭೆಗೆ ಹಾಜರಾಗಿದ್ದಾರೆ. ಸಿಎಂ ಆಹ್ವಾನದ ಹಿನ್ನೆಲೆಯಲ್ಲಿ ಸಭೆಗೆ ಬಂದ ಗೌಡರು, ತಕ್ಷಣ ಅಧಿವೇಶನ ಕರೆದು ತೀರ್ಮಾನ ಕೈಗೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.

ಇದೇವೇಳೆ, ಸರ್ವಪಕ್ಷ ಸಭೆಗೆ ಬಿಜೆಪಿ ನಾಯಕರ ಗೈರು ಕುರಿತಂತೆ ತೀವ್ರ ವಾಗ್ದಾಳಿ ನಡೆಸಿದ ದೇವೇಗೌಡರು, ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಅನ್ನೋದು ಸರಿಯಲ್ಲ. ಅದು ಬೇಜವಬ್ದಾರಿತನವಾಗುತ್ತದೆ, ಇಂತಹ ಸಂದರ್ಭದಲ್ಲಿ ಐಕ್ಯತೆಯಿಂದಿರಬೇಕು ಎಂದು ತಿಳಿ ಹೇಳಿದರು. ಪ್ರಧಾನಿ ಮಧ್ಯಸ್ಥಿಕೆಗೆ ಸಚಿವರ ಮನೆ ಬಾಗಿಲಿಗೆ ಹೋಗಲೂ ಸಿದ್ಧ ಎಂದು ಗೌಡರು ತಿಳಿಸಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಅರ್ಧ ಗಂಟೆ ಕಾಲ ಮಾತನಾಡಿದ ದೇವೇಗೌಡರು, ನಾರಿಮನ್ ಅವರು ಒಳ್ಳೆಯ ರೀತಿಯಲ್ಲೇ ವಾದ ಮಾಡಿದ್ದಾರೆ. ನಾರಿಮನ್​ ವಾದದ ಬಗ್ಗೆ ಯಾರಿಗೂ ಅನುಮಾನ ಬೇಕಿಲ್ಲ , ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದಿದ್ದಾರೆ.