ಈ ಕ್ಷೇತ್ರದಲ್ಲಿ ಒಂದೇ ಕುಟುಂಬಕ್ಕೆ ಮೂರು ಪಕ್ಷಗಳ ಟಿಕೆಟ್

news | Monday, April 2nd, 2018
Suvarna Web Desk
Highlights

- ಮಾವ, ಭಾವ, ಅಳಿಯನೇ ಎದುರಾಳಿ!

- ಕೌಟುಂಬಿಕ ಕಾಳಗಕ್ಕೆ ಹೆಸರಾದ ದೇವದುರ್ಗದಲ್ಲಿ ಈ ಬಾರಿ ಒಂದೇ ಕುಟುಂಬಕ್ಕೆ ಮೂರೂ ಪಕ್ಷಗಳ ಟಿಕೆಟ್‌

- ತಾತ- ಮೊಮ್ಮಗ, ಮಾವ- ಅಳಿಯನ ಕದನಕ್ಕೆ ಸಾಕ್ಷಿಯಾಗಿದ್ದ ಕ್ಷೇತ್ರದಲ್ಲಿ ಈ ಬಾರಿ ರೋಚಕ ಫೈಟ್‌ ನಿರೀಕ್ಷೆ

- ರಾಮಕೃಷ್ಣ ದಾಸರಿ

ರಾಯಚೂರು: ತಾತ- ಮೊಮ್ಮಗ, ಮಾವ- ಅಳಿಯನ ಕದನಕ್ಕೆ ಸಾಕ್ಷಿಯಾಗಿದ್ದ ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರ ಈ ಬಾರಿ ಮಾವ, ಭಾವ ಹಾಗೂ ಅಳಿಯನ ನಡುವಣ ರೋಚಕ ಹಣಾಹಣಿಗೆ ಸಜ್ಜಾಗುತ್ತಿದೆ.

ಈ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಒಂದೇ ಕುಟುಂಬದವರ ನಡುವಣ ಕಾಳಗದ ಅಖಾಡವಾಗಿ ಪರಿವರ್ತನೆಯಾಗಿದೆ. ಈವರೆಗೆ ಒಂದೇ ಕುಟುಂಬದ ಇಬ್ಬರು ಅಭ್ಯರ್ಥಿಗಳು ಮಾತ್ರವೇ ಕಣದಲ್ಲಿ ಮುಖಾಮುಖಿಯಾಗುತ್ತಿದ್ದರು. ಆದರೆ ಈ ಬಾರಿ ಮೂರೂ ಪ್ರಮುಖ ಪಕ್ಷಗಳೂ ಒಂದೇ ಕುಟುಂಬದವರಿಗೆ ಟಿಕೆಟ್‌ ನೀಡುವುದು ಬಹುತೇಕ ಪಕ್ಕಾ ಆಗಿದೆ. ಇದರಿಂದಾಗಿ ಕ್ಷೇತ್ರದ ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಬಿಜೆಪಿಯಿಂದ ಹಾಲಿ ಶಾಸಕ, ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತ. ಶಿವನಗೌಡ ಅವರ ಸ್ವಂತ ಅಕ್ಕನ ಗಂಡ ವೆಂಕಟೇಶ ಪೂಜಾರಿ ಅವರು ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ಸಿನಿಂದ ಶಿವನಗೌಡ ಅವರ ಮಾವ, ಹಾಲಿ ಸಂಸದ ಬಿ.ವಿ. ನಾಯಕ ಅಥವಾ ಅವರ ಸೋದರ ರಾಜಶೇಖರ ನಾಯಕ ಅವರು ಕಣಕ್ಕಿಳಿಯುವ ಸಂಭವವಿದೆ. ಈ ಮೂವರೂ ಮಾಜಿ ಸಂಸದ, ಮಾಜಿ ಶಾಸಕ ದಿವಂಗತ ಎ. ವೆಂಕಟೇಶ ನಾಯಕ ಕುಟುಂಬದವರು.

ನಾಲ್ಕು ಬಾರಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಎ. ವೆಂಕಟೇಶ ನಾಯಕ ಅವರ ಹಿರಿಯ ಸೋದರಿಯ ಮೊಮ್ಮಗನೇ ಶಿವನಗೌಡ ನಾಯಕ. 2008ರಲ್ಲಿ ತಾತನ ವಿರುದ್ಧವೇ ತೊಡೆ ತಟ್ಟಿಜೆಡಿಎಸ್‌ನಿಂದ ಶಾಸನಸಭೆಗೆ ಮೊದಲ ಬಾರಿ ಆಯ್ಕೆಯಾಗಿದ್ದರು. ನಂತರ ‘ಆಪರೇಷನ್‌ ಕಮಲ’ಕ್ಕೆ ತುತ್ತಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಚಿವರಾಗಿದ್ದರು. ಉಪಚುನಾವಣೆಯಲ್ಲಿ ಆರಿಸಿಬಂದಿದ್ದರು. 2013ರಲ್ಲಿ 3700 ಮತಗಳಿಂದ ಶಿವನಗೌಡ ಅವರನ್ನು ಮಣಿಸುವ ಮೂಲಕ ವೆಂಕಟೇಶ ನಾಯಕ ಅವರು ಸೋಲು ತೀರಿಸಿಕೊಂಡರು.

ಈ ನಡುವೆ 2014ರ ಲೋಕಸಭೆ ಚುನಾವಣೆಗೆ ಶಿವನಗೌಡ ಕಣಕ್ಕಿಳಿದರು. ಆಗ ಅವರ ಮಾವ ಬಿ.ವಿ. ನಾಯಕ ಎದುರು 1500 ಮತಗಳ ಅಂತರದಿಂದ ಪರಾಭವಗೊಂಡರು. 2015ರಲ್ಲಿ ವೆಂಕಟೇಶ ನಾಯಕ ಅವರು ರೈಲು ಅಪಘಾತದಲ್ಲಿ ನಿಧನರಾದ ಬಳಿಕ 2016ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತೊಬ್ಬ ಮಾವ ರಾಜಶೇಖರ ನಾಯಕ ಎದುರು ಸ್ಪರ್ಧಿಸಿ ಜಯಭೇರಿ ಬಾರಿಸಿದರು. ಈಗ ಮಾವ- ಅಳಿಯನ ಕದನಕ್ಕೆ ಶಿವನಗೌಡ ಅವರ ಭಾವ, ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದ ವೆಂಕಟೇಶ ಪೂಜಾರಿ ಕೂಡ ಸೇರಿಕೊಂಡಿದ್ದಾರೆ.

ಕಾಂಗ್ರೆಸ್ಸಿನಿಂದ ಬಿ.ವಿ. ನಾಯಕ, ರಾಜಶೇಖರ ನಾಯಕ ಅವರ ಪೈಕಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಅಂತಿಮಗೊಂಡಿಲ್ಲ. ಟಿಕೆಟ್‌ ಹಂಚಿಕೆ ವಿಚಾರವನ್ನು ಸಂಸದ ಬಿ.ವಿ. ನಾಯಕ ಅವರಿಗೇ ಬಿಡಲಾಗಿದೆ ಎಂದು ಹೇಳಲಾಗಿದೆ. ರಾಜಶೇಖರ ನಾಯಕ ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿವೆ. ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದ ಕೆ. ಕರೆಮ್ಮ ಜಿ. ನಾಯಕ ಅವರು ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗುತ್ತಿದ್ದಾರೆ. ಅವರು ಮತ ಒಡೆಯುವ ಸಾಧ್ಯತೆಗಳೂ ಕಂಡುಬರುತ್ತಿವೆ.

ಲಿಂಗಾಯತರು, ದಲಿತರು ನಿರ್ಣಾಯಕ

ಒಟ್ಟು 2,23,462 ಮತದಾರರು ಇದ್ದಾರೆ. ಲಿಂಗಾಯತರು 35,600, ಎಸ್ಸಿ 45,231, ಎಸ್ಟಿ55,127, ಕುರುಬರು 31,546, ಲಂಬಾಣಿಗಳು 20,802, ಅಲ್ಪಸಂಖ್ಯಾತರು 15,135 ಮತ್ತು ಇತರ ಸಮುದಾಯಗಳ 20,021 ಮತದಾರರಿದ್ದಾರೆ. ಲಿಂಗಾಯತರು, ದಲಿತರು ನಿರ್ಣಾಯಕರಾಗಿದ್ದಾರೆ.

2013ರ ಫಲಿತಾಂಶ

ಅಭ್ಯರ್ಥಿ ಪಕ್ಷ ಮತ

ಎ. ವೆಂಕಟೇಶ ನಾಯಕ ಕಾಂಗ್ರೆಸ್‌ 62,070

ಕೆ. ಶಿವನಗೌಡ ನಾಯಕ ಬಿಜೆಪಿ 58,370

ಶಾಂತಗೌಡ ಕೆಜೆಪಿ 2747

 

2016ರ ಉಪಚುನಾವಣೆ ಫಲಿತಾಂಶ

ಅಭ್ಯರ್ಥಿ ಪಕ್ಷ ಮತ

ಕೆ. ಶಿವನಗೌಡ ನಾಯಕ ಬಿಜೆಪಿ 72,647

ಎ. ರಾಜಶೇಖರ್‌ ನಾಯಕ ಕಾಂಗ್ರೆಸ್‌ 55,776

ಕೆ. ಕರೆಮ್ಮ ಜಿ.ನಾಯಕ ಜೆಡಿಎಸ್‌ 9156

ಪ್ಲಸ್‌/ಮೈನಸ್‌

1. ಉಪಚುನಾವಣೆಯಲ್ಲಿ ಗೆದ್ದು ಕ್ಷೇತ್ರದಲ್ಲಿ ಗಟ್ಟಿಹಿಡಿತ ಸಾಧಿಸಿರುವ ಕೆ. ಶಿವನಗೌಡ ನಾಯಕ, ಅಭಿವೃದ್ಧಿಗೆ ಸಾಕಷ್ಟುಅನುದಾನ ತಂದರೂ ಅನುಷ್ಠಾನಗೊಂಡಿಲ್ಲ. ಅವರನ್ನು ಬಿಟ್ಟರೆ ಬಿಜೆಪಿಗೆ ಪರ್ಯಾಯ ಅಭ್ಯರ್ಥಿ ಇಲ್ಲ.

2. ದಿ. ಎ. ವೆಂಕಟೇಶ ನಾಯಕ ಅವರ ಎರಡನೇ ಮಗ ಎ. ರಾಜಶೇಖರ ನಾಯಕ ತಮ್ಮ ತಂದೆ ಹಾಗೂ ಅಣ್ಣ ಬಿ.ವಿ.ನಾಯಕ ಅವರ ಹೆಸರಿನಲ್ಲಿಯೇ ಕ್ಷೇತ್ರದಲ್ಲಿ ಮತ ಗಿಟ್ಟಿಸಿಕೊಳ್ಳಬೇಕೆ ಹೊರತು ಸ್ವಂತ ವರ್ಚಸ್ಸು ಇಲ್ಲ.

3. ಬಿಜೆಪಿಯ ಜಿ.ಪಂ. ಸದಸ್ಯರಾಗಿದ್ದ ವೆಂಕಟೇಶ ಪೂಜಾರಿ ಪಕ್ಷ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವುದರಿಂದ. ಕೆ.ಶಿವನಗೌಡ ನಾಯಕ ಅವರ ಕಾಯಂ ವೋಟುಗಳು ವಿಭಜನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

4. ಜೆಡಿಎಸ್‌ ಬಂಡಾಯ ಅಭ್ಯರ್ಥಿ ಕೆ.ಕರೆಮ್ಮ ಜಿ.ನಾಯಕ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಜೆಡಿಎಸ್‌ ಮತ್ತು ಬಿಜೆಪಿ ಮತ ವಿಭಜನೆಯಾಗಿ ಕಾಂಗ್ರೆಸ್ಸಿಗೆ ಲಾಭವಾಗಬಹುದು ಎನ್ನಲಾಗುತ್ತಿದೆ.

5. ಕೆ. ಶಿವನಗೌಡ ನಾಯಕ ಅಧಿಕಾರಿ, ಸಿಬ್ಬಂದಿ ವರ್ಗದೊಂದಿಗೆ ವರ್ತಿಸುವ ಕಠಿಣತೆ, ಒರಟು ಸ್ವಭಾವವು ಅವರಿಗೆ ಹಿನ್ನಡೆ ತರಬಹುದು ಎಂದೂ ಹೇಳಲಾಗುತ್ತಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk