ನವದೆಹಲಿ : ಇದುವರೆಗೂ ಬ್ಯಾಂಕ್‌ ಖಾತೆ ಹೊಂದಿಲ್ಲದ ಜನರಿಗೆ ಉಚಿತವಾಗಿ ಖಾತೆ ಮಾಡಿಕೊಟ್ಟು ಅವರನ್ನು ಬ್ಯಾಂಕಿಂಗ್‌ ಜಾಲಕ್ಕೆ ಕರೆತರುವ ಪ್ರಧಾನಮಂತ್ರಿ ಜನ-ಧನ ಯೋಜನೆಗೆ ಮತ್ತಷ್ಟುಯಶಸ್ಸು ಸಿಕ್ಕಿದೆ. ಜನ-ಧನ ಖಾತೆಯಲ್ಲಿ ಸಂಗ್ರಹಗೊಂಡಿರುವ ಮೊತ್ತ ಇದೀಗ 80 ಸಾವಿರ ಕೋಟಿ ರು. ಗಡಿ ದಾಟಿದ್ದರೆ, ಈ ಯೋಜನೆಯ ಫಲಾನುಭವಿಗಳ ಸಂಖ್ಯೆ 31 ಕೋಟಿಗೆ ಜಿಗಿತ ಕಂಡಿದೆ.

ಅಪನಗದೀಕರಣ ಸಮಯದಲ್ಲಿ ಜನ-ಧನ ಖಾತೆಗಳಿಗೆ ಸಂದಾಯವಾಗುವ ಹಣದ ಮೊತ್ತ ಅಧಿಕಗೊಂಡು, 74 ಸಾವಿರ ಕೋಟಿ ರು.ಗೆ ತಲುಪಿತ್ತಾದರೂ ನಂತರದ ದಿನಗಳಲ್ಲಿ ಇಳಿಮುಖವಾಗಿತ್ತು. ಆದರೆ 2017ರ ಮಾಚ್‌ರ್‍ನಿಂದ ಖಾತೆಗೆ ಜಮೆಯಾಗುವ ಹಣದ ಪ್ರಮಾಣ ಏರಿಕೆಯಾಗುತ್ತಾ ಬಂತು.

2017ರ ಡಿಸೆಂಬರ್‌ನಲ್ಲಿ 73,878 ಕೋಟಿ ರು. ಇದ್ದದ್ದು, 2018ರ ಫೆಬ್ರವರಿಯಲ್ಲಿ 75,572 ಕೋಟಿ ರು.ಗೆ ಏರಿತ್ತು. 2018ರ ಏ.11ರಂದು ಇದು 80,545.70 ಕೋಟಿ ರು.ಗೆ ತಲುಪಿದೆ.ಜನ-ಧನ ಖಾತೆದಾರರ ಸಂಖ್ಯೆ ನೋಟು ರದ್ದತಿ ಸಂದರ್ಭದಲ್ಲಿ 25.51 ಕೋಟಿಯಷ್ಟಿತ್ತು. ಈಗ ಅದು 31.45 ಕೋಟಿಗೆ ಏರಿಕೆಯಾಗಿದೆ.