Asianet Suvarna News Asianet Suvarna News

ಹಲ್ಲಿನ ಡಾಕ್ಟರ ಹುಲ್ಲಿನ ಕ್ರಾಂತಿ! ಅಪರೂಪದ ಕೃಷಿಕ ಇವರು

ಗದಗ ತಾಲೂಕಿನ ಹುಯಿಲಗೋಳ ಗ್ರಾಮ ವ್ಯಾಪ್ತಿಯಲ್ಲಿರುವ ಪ್ರದೀಪ್ ಅವರಿಗೆ 10.34 ಎಕರೆ ಭೂಮಿ ಇದೆ. ಜಮೀನಿನ ಇಳಿಜಾರು ಪ್ರದೇಶದಲ್ಲಿ ಅಡ್ಡವಾಗಿ ದೊಡ್ಡ ಪ್ರಮಾಣದ ಕಂದಕ ಅರ್ಥಾತ್ ಟ್ರೆಂಚ್‌ಗಳನ್ನು ನಿರ್ಮಿಸಿದ್ದಾರೆ. ಟ್ರೆಂಚ್‌ಗಳ ಮಧ್ಯೆ  ಬಹು ವಾರ್ಷಿಕ ಬೆಳೆಗಳಾದ ಮಾವು, ತೆಂಗು, ಹುಣಸೆ, ಡಬಗಳ್ಳಿ(ಕ್ಯಾಕ್ಟಸ್) ನುಗ್ಗೆ, ಹೆಬ್ಬೇವು, ಸೂಬಾಬುಲ್, ಸಿಲ್ವರ್ ಓಕ್, ಚೋಗಚಿ, ನೇರಳೆ ಹೀಗೆ ವಿವಿಧ ಬಗೆಯ, ಹಣ್ಣಗಳು ಹಾಗೂ ಔಷಧಿ ಸಸ್ಯಗಳು ಸೇರಿದಂತೆ 318 ಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡಿದ್ದಾರೆ.

Dentist make a revolution in agriculture

ಇವರು ದಂತ ವೈದ್ಯರು. ಆದರೆ ವೃತ್ತಿ ಜೊತೆಗೆ ಕೃಷಿಯ ಬಗ್ಗೆ ಅದಮ್ಯ ಆಸಕ್ತಿ. ಈ ತುಡಿತಕ್ಕೆ ಮನೆಯವರೆಲ್ಲಾ ಸೈ ಎನ್ನುತ್ತಿದ್ದಂತೆ ಗದಗದ ಡಾ. ಪ್ರದೀಪ ಉಗಲಾಟ ನೇರವಾಗಿ ಇಳಿದಿದ್ದು ನೈಸರ್ಗಿಕ ಕೃಷಿಯತ್ತ. ಉಳುಮೆ ಮಾಡದೇ ಅಲ್ಲಿ ದೀರ್ಘಕಾಲ ಉತ್ಪತ್ತಿ ನೀಡುವ ಮರಗಳನ್ನು ಬೆಳೆಸಲು ಮುಂದಾದರು.

ಅವುಗಳ ಬುಡದಲ್ಲಿ ನೈಸರ್ಗಿಕವಾಗಿಯೇ ಬೆಳೆಯುವ ಕಸ  ಕಡ್ಡಿಗಳ ಮೂಲಕ ನೀರು ಇಂಗಿಸುವ ವ್ಯವಸ್ಥೆ ಮಾಡಿದರು. ನೆಟ್ಟ ಗಿಡಗಳ ಪಕ್ಕದಲ್ಲೇ ವಿಶೇಷ ಕಂದಕಗಳ ನಿರ್ಮಾಣವಾಯ್ತು. ಇವು ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಮತ್ತು ನೆಲದಲ್ಲಿ ತೇವಾಂಶ ಕಾಪಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮೂಲಕ ಸತತ ಮಳೆ ಕೊರತೆ ಎದುರಿಸುತ್ತಿರುವ ಉತ್ತರ ಕರ್ನಾಟಕದಲ್ಲಿ ಹೊಸ ಕೃಷಿ ಪಯತ್ನ ಮಾಡಿ ಯಶಸ್ಸಿನ ಹಾದಿಯಲ್ಲಿದ್ದಾರೆ.

ಟ್ರೆಂಚ್‌ಗಳ ಹೊಸ ಪ್ರಯೋಗ 

ಗದಗ ತಾಲೂಕಿನ ಹುಯಿಲಗೋಳ  ಗ್ರಾಮ ವ್ಯಾಪ್ತಿಯಲ್ಲಿರುವ ಪ್ರದೀಪ್ ಅವರಿಗೆ 10.34 ಎಕರೆ ಭೂಮಿ ಇದೆ. ಜಮೀನಿನ ಇಳಿಜಾರು ಪ್ರದೇಶದಲ್ಲಿ ಅಡ್ಡವಾಗಿ ದೊಡ್ಡ ಪ್ರಮಾಣದ  ಕಂದಕ ಅರ್ಥಾತ್ ಟ್ರೆಂಚ್‌ಗಳನ್ನು ನಿರ್ಮಿಸಿದ್ದಾರೆ. ಟ್ರೆಂಚ್‌ಗಳ ಮಧ್ಯೆ ಬಹು ವಾರ್ಷಿಕ ಬೆಳೆಗಳಾದ ಮಾವು, ತೆಂಗು, ಹುಣಸೆ, ಡಬಗಳ್ಳಿ(ಕ್ಯಾಕ್ಟಸ್) ನುಗ್ಗೆ, ಹೆಬ್ಬೇವು, ಸೂಬಾಬುಲ್, ಸಿಲ್ವರ್ ಓಕ್, ಚೋಗಚಿ, ನೇರಳೆ ಹೀಗೆ ವಿವಿಧ ಬಗೆಯ, ಹಣ್ಣಗಳು ಹಾಗೂ ಔಷಧಿ ಸಸ್ಯಗಳು ಸೇರಿದಂತೆ 318 ಕ್ಕೂ ಹೆಚ್ಚಿನ ಗಿಡಗಳನ್ನು ನಾಟಿ ಮಾಡಿದ್ದಾರೆ.

ಹೀಗೆ ನಾಟಿ ಮಾಡಿದ ಹೊಲದ ಸುತ್ತಲೂ ಬೃಹತ್ ಆಕಾರದ ಒಡ್ಡುಗಳನ್ನು ನಿರ್ಮಿಸಿದ್ದು, ಅಕ್ಕಪಕ್ಕದ ರೈತರ ಜಮೀನುಗಳಿಂದ ರಾಸಾಯನಿಕ ಗೊಬ್ಬರ ಹಾಕಿದ ಒಂದು ಹನಿ ನೀರು ಕೂಡಾ ಇವರ ಜಮೀನಿನಲ್ಲಿ ಪ್ರವೇಶವಾಗುವುದಿಲ್ಲ. ಜಮೀನಿನಲ್ಲಿ ಬಿದ್ದ ಮಳೆ ನೀರು ಭೂಮಿಯಲ್ಲೇ ಇಂಗುವ ವ್ಯವಸ್ಥೆ ಇದೆ. ಇಲ್ಲಿ ಬೆಳೆಯುವ ಎಲ್ಲ ಬೆಳೆಗಳೂ ರಾಸಾಯನಿಕ  ಮುಕ್ತವಾಗಲಿವೆ. ಜಮೀನಿನಲ್ಲಿ ಮಳೆ ನೀರು ಹರಿದು ಹೋಗುವುದನ್ನು ಗಮನಿಸಿ, ಇಳುಕಲಿಗೆ ಅಡ್ಡವಾಗಿ ಬದು ಮಾದರಿಯ ಒಡ್ಡುಗಳನ್ನು ನಿರ್ಮಿಸಿದ್ದಾರೆ.

ಒಡ್ಡುಗಳ ಮಧ್ಯದಲ್ಲಿ ತೆಂಗಿನ ಮರದ ಬೊಡ್ಡೆಗಳನ್ನು ಸಣ್ಣ ಸಣ್ಣ ತುಂಡಗಳಾಗಿ ಕತ್ತರಿಸಿ, ಟ್ರೆಂಚ್‌ಗಳ ಮಧ್ಯದಲ್ಲಿ ಅಳವಡಿಸಿದ್ದಾರೆ. ಇದು ಹರಿದು ಹೋಗುವ ನೀರನ್ನು ಹಿಡಿದು ನಿಲ್ಲಿಸುತ್ತದೆ. ಪ್ರತಿಬಾರಿ ಮಳೆಯಾದಾಗ ನೀರು ನಿಲ್ಲುವುದರಿಂದ ತೆಂಗಿನ ಬೊಡ್ಡೆಗಳು ಮಣ್ಣಿನಲ್ಲಿ ಕೊಳೆತು ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಮರದ ಪುಡಿ ಮಣ್ಣಿನಲ್ಲಿ ಕೂಡಿ ಮಣ್ಣಿನಲ್ಲಿನ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ.

ಉಳುಮೆಯೇ ಇಲ್ಲ 

ಡಾ. ಪ್ರದೀಪ್ ಈ ಪ್ರಯೋಗವನ್ನು ೨೦೧೬ರಲ್ಲಿ ಪ್ರಾರಂಭಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಭೂಮಿಯನ್ನು ಉಳುಮೆ ಮಾಡಿಲ್ಲ. ಕೃಷಿ ಕಾರ್ಮಿಕರ ಸಹಾಯವನ್ನೂ ಪಡೆದಿಲ್ಲ. ಮಳೆಯಾಗುತ್ತಿದ್ದಂತೆ, ಹೊಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಳೆ ಬೆಳೆಯುತ್ತದೆ, ಅದನ್ನು ಕೂಡಾ ಇವರು ಸ್ವಚ್ಚಗೊಳಿಸುವುದಿಲ್ಲ, ಅದು ಎತ್ತರವಾಗಿ ಬೆಳೆದು ನಂತರ ಒಣಗಿ ಹೋಗುವುದರಿಂದಾಗಿ ಅಲ್ಲಿಯೇ ನೈಸರ್ಗಿಕ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಮತ್ತೆ ಮಳೆಯಾಗುತ್ತಿದ್ದಂತೆ ನೀರು ಹರಿದು ಮುಂದೆ ಹೋಗುವುದನ್ನು ಈ ಕಸದ ಗಿಡಗಳು ತಡೆಯುತ್ತವೆ. ಒಣಗಿ ನೆಲಕ್ಕೆ ಬಿದ್ದರಂತೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಿಸಲು ಸಹಕಾರಿ ಎನ್ನುತ್ತಾರೆ ಡಾ. ಪ್ರದೀಪ.

ಹೆಚ್ಚು ಲಾಭವಿಲ್ಲ, ಖರ್ಚೂ ಕಡಿಮೆ, ತೃಪ್ತಿ ಹೆಚ್ಚು:

ಈ ರೀತಿಯ ಕೃಷಿ ಮಾಡುವುದರಿಂದ ಹೇಗೆ ಲಾಭ ಪಡೆಯಬಹುದು ಎಂಬುದು ಹಲವರ ಕುತೂಹಲಭರಿತ ಪ್ರಶ್ನೆ. ‘ಹೌದು, ಇದು ತಕ್ಷಣವೇ ಲಾಭ ನೀಡುವುದಲ್ಲ. ಆದರೆ ಅನ್ಯ ಉದ್ಯೋಗಸ್ಥರು ಕೃಷಿಯನ್ನು ಉಪಕಸಬಾಗಿಯೂ ಮಾಡಬಹುದು ಎನ್ನುವುದನ್ನು ನಾನು ಮಾಡಿ ತೋರಿಸಿದ್ದೇನೆ’ ಎಂದು ಉತ್ತರಿಸುತ್ತಾರೆ.

ಈ ಬಗೆಯ ಕೃಷಿಯಲ್ಲಿ ನಾಟಿ ಮಾಡಿದ 6  ವರ್ಷಗಳ ಕಾಲ ಯಾವುದೇ ಲಾಭವಿಲ್ಲದೇ ಕಾಯಬೇಕು. ಈ ತಾಳ್ಮೆ ಇದ್ದಾಗ ಮಾತ್ರ ನೈಸರ್ಗಿಕ ಕೃಷಿ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಜಮೀನನಲ್ಲಿ ಅಳವಡಿಸಿರುವ  ಎಲ್ಲಾ ಗಿಡಗಳನ್ನು ಉತ್ತಮವಾಗಿ ಬೆಳೆದಲ್ಲಿ, ಜೀವನಪರ್ಯಂತ ಆದಾಯವನ್ನು ಹಣ್ಣಿಗಳ ಗಿಡಗಳು ತಂದು ಕೊಟ್ಟರೆ, ಔಷಧಿ ಸಸ್ಯಗಳ ಉತ್ಪನ್ನಗಳ ಮಾರಾಟದಿಂದಲೂ ಹಣ ಗಳಿಸಬಹುದಾಗಿದೆ. ಜಮೀನಿನಲ್ಲಿ ವಿಶೇಷ ಗುಡಿಸಲು ಮಾದರಿಗಳನ್ನು ನಿರ್ಮಿಸಿ ಮುಂದೆ ನಿಸರ್ಗ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸುವ ಇರಾದೆಯೂ ಇವರಿಗಿದೆ. ಈ ಮಾದರಿಯ ನೈಸರ್ಗಿಕ ಕೃಷಿಗೆ ಖರ್ಚಿರುವುದಿಲ್ಲ.

ಹೊಲದ ಮಣ್ಣಿನ ಸಂರಕ್ಷಣೆಯಾಗುತ್ತದೆ. ನೀರು ಇಂಗಿಸುವಿಕೆಯಿಂದಾಗಿ ಅಂತರ್ಜಲ ಹೆಚ್ಚಳವಾಗುತ್ತದೆ. ನೈಸರ್ಗಿಕವಾಗಿ ಗಿಡಗಂಟೆಗಳು ಬೆಳೆಯುವುದರಿಂದಾಗಿ ಹೊಲದಲ್ಲಿ ತಂಪು ಮಿಶ್ರಿತ ಕುರುಚಲು ಅರಣ್ಯ ಸೃಷ್ಟಿಯಾಗುತ್ತದೆ. ಅನೇಕ ಪ್ರಾಣಿ ಪಕ್ಷಿಗಳಿಗೆ ಆಶ್ರಯವೂ ಸಿಗುತ್ತದೆ.  

Follow Us:
Download App:
  • android
  • ios