ನವದೆಹಲಿ (ನ.16): ಇಂದು ಆರಂಭವಾದ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ನೋಟುಗಳ ಅಪಮೌಲ್ಯೀಕರಣವನ್ನು ಸಮರ್ಥಿಸಿಕೊಂಡಿದೆ.

ರಾಜ್ಯಸಭೆಯಲ್ಲಿ ನೋಟುಗಳ ಅಪಮೌಲ್ಯೀಕರಣ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸರ್ಕಾರದ ಕ್ರಮದಿಂದ ಉಂಟಾಗಿರುವ  ಸಮಸ್ಯೆಯು ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಅದರ ಪ್ರಯೋಜನ ಸಿಗಲಿದೆ ಎಂದು ಹೇಳಿದ್ದಾರೆ.

‘ಅಪಮೌಲ್ಯೀಕರಣವು ಪ್ರಸವವೇದನೆಯಿದ್ದಂತೆ. ಈ ತಾತ್ಕಾಲಿಕ ನೋವು, ಮುಂಬರುವ ದಿನಗಳಲ್ಲಿ ಪ್ರಯೋಜನಕಾರಿಯಾಗಲಿದೆ. ನೋಟು ನಿಷೇಧ ಕ್ರಮವು, ನಕಲಿ ನೋಟು ಮತ್ತು ಭಯೋತ್ಪಾದನೆಗೆ ಹಣಕಾಸು ನೆರವುಗಳಂಥ ಹಾವಳಿಗಳಿಗೆ ತಡೆಯೊಡ್ಡಲಿದೆ, ಎಂದು ನಾಯ್ಡು ಹೇಳಿದ್ದಾರೆ.

ಜನಾದೇಶಕ್ಕೆ ವಿರುದ್ಧವಾಗಿರುವ ಹೊಸ ರೀತಿಯ ಅಸಹಿಷ್ಣತೆಯೊಂದು ಹುಟ್ಟಿಕೊಂಡಿದೆ. ರಾಷ್ಟ್ರ-ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಸರ್ಕಾರದ ಈ ಕ್ರಮದಿಂದ ತಳಮಳವುಂಟಾಗಿದೆ ಎಂದು ನಾಯ್ಡು ಹೇಳಿದ್ದಾರೆ.

ಕಪ್ಪುಹಣ, ದುರಾಸೆ ಹಾಗೂ ಸ್ವಜನ ಪಕ್ಷಪಾತಮಾಡಿ ಬೆಳೆದವರು ಈಗ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಸರ್ಕಾರದ ಕ್ರಮವು ಕಪ್ಪುಹಣದ ವಿರುದ್ಧ ಸಾರಲಾಗಿರುವ ಸಮರವಾಗಿದೆ; ಪ್ರತಿಪಕ್ಷಗಳು ಈ ಪೈಕಿ ಒಂದನ್ನು ಬೆಂಬಲಿಸಬೇಕು, ಎಂದು ನಾಯ್ಡು ಪ್ರತಿ ವಾಗ್ದಾಳಿ ನಡೆಸಿದ್ದಾರೆ.

ಚಳಿಗಾಲ ಅಧಿವೇಶನದ ಮೊದಲನೇ ದಿನವಾದ ಇಂದು, ಪ್ರತಿಪಕ್ಷಗಳು ಸರ್ಕಾರದ ನೋಟು ಅಪಮೌಲ್ಯೀಕರಣ ಕ್ರಮದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.