ಬೆಂಗಳೂರು (ಸೆ.17): ಆರ್​.ಆರ್​. ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್.​ಎಸ್ ಆಸ್ಪತ್ರೆ ಮಾಲಕ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾನೂನು ಪ್ರಕಾರವೇ ನಾವು ಭೂಮಿ ಗುತ್ತಿಗೆ ಪಡೆದು ಆಸ್ಪತ್ರೆ ಕಟ್ಟಲಾಗಿದೆ ಎಂದು ಹೇಳಿದ್ದಾರೆ.

ಬಿಡಿಎ ಕೊಟ್ಟಿರುವ ಸೈಟ್​ನಲ್ಲಿ ಆಸ್ಪತ್ರೆ ಕಟ್ಟಲಾಗಿದೆ ಎಂದಿರುವ ಶಾಮನೂರು, ಅಕ್ರಮ ನಡೆದಿದ್ದರೆ ಎಸ್​.ಎಸ್​. ಆಸ್ಪತ್ರೆ ಒಡೆದು ಹಾಕಲಿ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವೇ ನಮಗೆ 2 ಎಕರೆ ಜಮೀನು ನೀಡಿತ್ತು; ಕಾನೂನು ಪ್ರಕಾರವೇ 30 ವರ್ಷಗಳ ಅವಧಿಗೆ ಸರ್ಕಾರದಿಂದ ಭೂಮಿ ಗುತ್ತಿಗೆ ಪಡೆದಿದ್ದೇವೆ. ಈಗಾಗಲೇ 19 ವರ್ಷ ಆಗಿದ್ದು ಇನ್ನೂ 11 ವರ್ಷ ಇದೆ ಎಂದು ಶಾಮನೂರು ಹೇಳಿದ್ದಾರೆ.

ಎಸ್.​ಎಸ್​.ಆಸ್ಪತ್ರೆಯಿಂದ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಆರೋಪ ಸರಿಯಲ್ಲ, ನಾವು ಯಾವುದೇ ರೀತಿಯ ಅಕ್ರಮ ಮಾಡಿಲ್ಲ, ಈ ಬಗ್ಗೆ ನಮ್ಮ ಇಂಜಿನಿಯರ್​ಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿರುವ ಸಚಿವ ಎಸ್​.ಎಸ್​.ಮಲ್ಲಿಕಾರ್ಜುನ, ಇದು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಹೇಳಿದ್ದಾರೆ.

ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಸ್​.ಎಸ್​.ಮಲ್ಲಿಕಾರ್ಜುನ ಹೇಳಿದ್ದಾರೆ.