ಮಂಗಳೂರು :  ರಾಜ್ಯದ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗಿರುವ ಇಂಗ್ಲಿಷ್‌ ಮಾಧ್ಯಮ ತರಗತಿಗಳಿಗೆ ಪೋಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಮಕ್ಕಳ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಬೆಳವಣಿಗೆ ಭವಿಷ್ಯದಲ್ಲಿ ಮಾತೃ ಭಾಷೆ ಕನ್ನಡದ ಶಾಲೆಗಳಿಗೆ ಕುತ್ತು ತರುವ ಆತಂಕ ವ್ಯಕ್ತವಾಗಿದ್ದು, ಇಂಗ್ಲಿಷ್‌ ಮಾಧ್ಯಮ ಕಲಿಕೆ ಆರಂಭಿಸಿರುವ ಸರ್ಕಾರದ ನಿಲುವಿಗೆ ನಾಡಿನ ಶಿಕ್ಷಣ ತಜ್ಞರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.

ಶೈಕ್ಷಣಿಕವಾಗಿ ಮುಂದಿರುವ ದಕ್ಷಿಣ ಕನ್ನಡ ಜಿಲ್ಲೆಯೊಂದನ್ನೇ ಗಣನೆಗೆ ತೆಗೆದುಕೊಂಡರೆ, ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಪ್ರಸ್ತುತ ಗುರುತಿಸಲಾಗಿರುವ 43 ಶಾಲೆಗಳಲ್ಲಿ 22 ಕಡೆ ಕನ್ನಡ ಮಾಧ್ಯಮಕ್ಕೆ ಪ್ರವೇಶಾತಿಯೇ(ಶೂನ್ಯ ಪ್ರವೇಶಾತಿ) ಆಗಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಎಲ್ಲರೂ ಇಂಗ್ಲಿಷ್‌ ಮಾಧ್ಯಮಕ್ಕೆ ಶಿಫ್ಟ್‌ ಆಗಿಬಿಟ್ಟಿದ್ದಾರೆ! ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಗಮನಿಸಿದರೆ, ಕನ್ನಡ ಮಾಧ್ಯಮಕ್ಕಿಂತ ಸುಮಾರು ಹತ್ತು ಪಟ್ಟು ಅಧಿಕ ವಿದ್ಯಾರ್ಥಿಗಳು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿದ್ದಾರೆ. 43 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಕೇವಲ 176 ಮಕ್ಕಳಿದ್ದರೆ, ಅದೇ ಶಾಲೆಗಳಲ್ಲಿ ಇಂಗ್ಲಿಷ್‌ ಮೀಡಿಯಮ್‌ಗೆ ಬರೋಬ್ಬರಿ 1,474 ಮಕ್ಕಳು ದಾಖಲಾಗಿದ್ದಾರೆ!

ಪ್ರತಿಯೊಂದು ಶಾಲೆಯಲ್ಲೂ ಇಂಗ್ಲಿಷ್‌ ಮಾಧ್ಯಮದ ಮಕ್ಕಳ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಆದರೆ ಆಯ್ಕೆಯಾದ ಶಾಲೆಗಳಲ್ಲಿ ಬಹುತೇಕ ಕಡೆ ತಲಾ 30ಕ್ಕೂ ಅಧಿಕ ಮಕ್ಕಳು ಸೇರಿದ್ದಾರೆ. ಕೆಲವು ಶಾಲೆಗಳಲ್ಲಂತೂ ಈ ಸಂಖ್ಯೆ ನೂರನ್ನೂ ದಾಟಿದೆ. ಕನ್ನಡ ಮಾಧ್ಯಮಕ್ಕೆ ಒಬ್ಬಿಬ್ಬರಿದ್ದರೆ ಅದೇ ಹೆಚ್ಚು!

ಇದೇವೇಳೆ ಮೈಸೂರು ಜಿಲ್ಲೆಯ ಪರಿಸ್ಥಿತಿಯೂ ದಕ್ಷಿಣ ಕನ್ನಡಕ್ಕಿಂತ ಭಿನ್ನವಾಗೇನೂ ಇಲ್ಲ. ಇಲ್ಲಿನ 46 ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 818 ಮಂದಿ ಆಂಗ್ಲ ಮಾಧ್ಯಮಕ್ಕೆ ದಾಖಲಾಗಿದ್ದರೆ, 118 ಮಂದಿಯಷ್ಟೇ ಕನ್ನಡ ಮಾಧ್ಯಮಕ್ಕೆ ದಾಖಲಾಗಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 28 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದ್ದು ಪ್ರತಿ ಶಾಲೆಗೂ 70ರಿಂದ 100ರವರೆಗೂ ಅರ್ಜಿಗಳು ಬಂದಿವೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 34 ಶಾಲೆಗಳಲ್ಲೂ ಸೀಟುಗಳು ಭರ್ತಿಯಾಗಿವೆ. ಉತ್ತರ ಕನ್ನಡ ದ 24 ಶಾಲೆಗಳಲ್ಲಿ ಕೆಲ ಶಾಲೆಗಳಲ್ಲಷ್ಟೇ ಮಕ್ಕಳ ಕೊರತೆ ಇದ್ದು ಜೂನ್‌ 30ರವರೆಗೆ ಅವಕಾಶ ಇರುವುದರಿಂದ ಸೀಟುಗಳು ಭರ್ತಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಈಗ 30ರ ಗಡಿ ರೇಖೆ ಗೊಂದಲ!

ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಭರಪೂರ ಮಕ್ಕಳ ದಾಖಲಾತಿ ಆಗಿರುವುದನ್ನು ಗಮನಿಸಿದ ಸರ್ಕಾರ ಇದೀಗ ಇಂಗ್ಲಿಷ್‌ ಕಲಿಕೆಯ ಮಕ್ಕಳ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 43ರಲ್ಲಿ 17 ಶಾಲೆಗಳಲ್ಲಿ 30ಕ್ಕೂ ಅಧಿಕ ಮಕ್ಕಳು ಇಂಗ್ಲಿಷ್‌ ಮಾಧ್ಯಮಕ್ಕೆ ಈಗಾಗಲೇ ದಾಖಲಾಗಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ, ಈ ತೀರ್ಮಾನ ಸರಿಯಲ್ಲ. ದಾಖಲಾದ ಎಲ್ಲ ಮಕ್ಕಳಿಗೂ ಅದೇ ಮಾಧ್ಯಮವನ್ನು ಮುಂದುವರಿಸಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯನವರ ಊರಿನ ಶಾಲೆಯಲ್ಲೇ ನೂರಕ್ಕೂ ಹೆಚ್ಚು ಅರ್ಜಿ!

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಪ್ಪಟ ಕನ್ನಡ ಪ್ರೇಮಿ. ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಮುಗಿಸಿ ಬಿ.ಎಸ್ಸಿ ಓದಿ, ಕಾನೂನು ಪದವಿ ಪಡೆದು ಮುಖ್ಯಮಂತ್ರಿಯಾದರು. ಸದನದಲ್ಲೂ ಕನ್ನಡ ವ್ಯಾಕರಣ ಪಾಠ ಮಾಡಿ ಸೈ ಎನಿಸಿಕೊಂಡವರು. ಆದರೆ ಅವರ ಊರಿನಲ್ಲಿ ಕಳೆದ ವರ್ಷ ಪ್ರಾರಂಭವಾಗಿರುವ ಕನ್ನಡ ಪಬ್ಲಿಕ್‌ ಶಾಲೆ ಇಂಗ್ಲಿಷ್‌ ಮಾಧ್ಯಮಕ್ಕೆ 100ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ!

ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀತಿ ಅಪಾಯಕಾರಿ ಬೆಳವಣಿಗೆ. ಇದರಿಂದ ಕನ್ನಡ ಮಾಧ್ಯಮ ಇನ್ನೆರಡೇ ವರ್ಷಗಳಲ್ಲಿ ನಾಮಾವಶೇಷ ಆಗಲಿದೆ. ಹೀಗೆ ಮಾಡುವುದು ಬಿಟ್ಟು, 10ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದರ ಜತೆಗೆ ಮಕ್ಕಳಿಗೆ ಇಂಗ್ಲಿಷ್‌ನ್ನೂ ಚೆನ್ನಾಗಿ ಕಲಿಸಬೇಕು. ಅದಕ್ಕಾಗಿ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ.

- ಡಾ.ಮಹಾಬಲೇಶ್ವರ ರಾವ್‌, ಶಿಕ್ಷಣ ತಜ್ಞರು

ವರದಿ : ಸಂದೀಪ್‌ ವಾಗ್ಲೆ