ಸಮರ್ಥ ಆಡಳಿತ ನೀಡಿ, ಇಲ್ವೇ ರಾಷ್ಟ್ರಪತಿ ಆಡಳಿತ ಬರಲಿ: ಪೇಜಾವರ ಶ್ರೀ

Deliver Good Governance Pejawar Shri Tells Coalition Government
Highlights

  • ಉತ್ತರ ಕರ್ನಾಟಕದವರಿಗೆ ಅನ್ಯಾಯವಾದ್ರೆ ಅವರಿಗೆ ನಮ್ಮ ಬೆಂಬಲ
  • ಸಾಲ ಮನ್ನಾ ಮಾಡುವಾಗ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಬೇಕಿತ್ತು
  • ಏಕಕಾಲಕ್ಕೆ ಚುನಾವಣೆ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ

ವಿಜಯಪುರ: ಸಮ್ಮಿಶ್ರ ಸರ್ಕಾರ ಸಮರ್ಥವಾಗಿ ಆಡಳಿತ ನಡೆಸಬೇಕು. ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರಲಿ ಎಂದು ಪರೋಕ್ಷವಾಗಿ ಬಿಜೆಪಿ ಪರವಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಬ್ಯಾಟ್ ಬೀಸಿದ್ದಾರೆ. 

ವಿಜಯಪುರದ ಕೃಷ್ಣಮಠದಲ್ಲಿ ಮಾತನಾಡಿದ ಶ್ರೀಗಳು, ಸಮ್ಮಿಶ್ರ ಸರ್ಕಾರ ಇದ್ರೆ ರೆಸಾರ್ಟ್ ರಾಜಕಾರಣ ಹಾಗೂ ಕುದುರೆ ವ್ಯಾಪಾರ ನಡೆಸಲು ಅವಕಾಶವಿರುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಯಾರ ಕಾಲು ಯಾರು ಎಳೆಯುತ್ತಾರೆ ಎಂದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದರು. 

ಅಲ್ಲದೇ, ಬೇರೆ ಬೇರೆ ದೇಶಗಳಲ್ಲಿ ಯುದ್ಧ ಸಮಯದಲ್ಲಿ ಸರ್ವಪಕ್ಷೀಯ ಆಡಳಿತಗಳೇ ಹೆಚ್ಚಾಗಿ ಇವೆ. ‌ಹಾಗಾಗಿ ಸಮ್ಮಿಶ್ರ ಸರ್ಕಾರ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲಿ ಎಂದು ಸಲಹೆ ನೀಡಿದರು.  

ಇನ್ನು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಪರಸ್ಪರ ಜಗಳ ಆಡುತ್ತಿದ್ದರು. ಸದ್ಯ ಒಟ್ಟಾಗಿದ್ದು ಚೆನ್ನಾಗಿ ಸರ್ಕಾರ ನಡೆಸಿಕೊಂಡು ಹೋಗಲಿ ಎಂದು ಪೇಜಾವರ ಶ್ರೀ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನವರೆ ಹೇಳುತ್ತಿದ್ದಾರೆ. ಆದ್ರೆ, ಯಾವ ಭಾಗಕ್ಕೂ ಅನ್ಯಾಯವಾಗಬಾರದು. ಇನ್ನು ಉತ್ತರ ಕರ್ನಾಟಕದವರಿಗೆ ಅನ್ಯಾಯವಾದ್ರೆ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ರೈತರಿಗೆ ಸರ್ಕಾರ ಸಹಾಯ ಮಾಡಬೇಕು. ಸಾಲ ಮನ್ನಾ ಮಾಡುವಾಗ ಸರ್ಕಾರ ಆರ್ಥಿಕ ತಜ್ಞರ ಜೊತೆಗೆ ಸಮಾಲೋಚನೆ ನಡೆಸಬೇಕಿತ್ತೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದೆ. ಈ ವಿಚಾರ ರಾಜಕಾರಣಿಗಳಿಗೆ ಬಿಟ್ಟಿ ದ್ದು, ಒಟ್ಟಿನಲ್ಲಿ ಪ್ರಜಾಪ್ರಭುತ್ವ ದೇಶದಲ್ಲಿ ಉಳಿಯಬೇಕು ಎಂದು ಅವರು ಹೇಳಿದ್ದಾರೆ.

loader