ತಮಿಳುನಾಡಿನ ರಾಜಕೀಯದಲ್ಲಿ ಇನ್ಮುಂದೆ ಚಿನ್ನಮ್ಮನ ದರ್ಬಾರ್ ನಡೆಯುವುದು ಅನುಮಾನ. ಯಾಕಂದರೆ, ಚಿನ್ನಮ್ಮ ಜೈಲಿಗೆ ಹೋದ ಬಳಿಕ ಎಐಡಿಎಡಿಎಂಕೆ ಪಕ್ಷದಲ್ಲಿ ತನ್ನದೇ ಪಾರುಪತ್ಯ ಎಂದು ಮೆರೆಯುತ್ತಿದ್ದ ಶಶಿಕಲಾ ಸಂಬಂಧಿ ದಿನಕರನ್ ನಿನ್ನೆ ರಾತ್ರಿ ಜೈಲು ಸೇರಿದ್ದಾನೆ.

ಚೆನ್ನೈ(ಎ.26): ತಮಿಳುನಾಡಿನ ರಾಜಕೀಯದಲ್ಲಿ ಇನ್ಮುಂದೆ ಚಿನ್ನಮ್ಮನ ದರ್ಬಾರ್ ನಡೆಯುವುದು ಅನುಮಾನ. ಯಾಕಂದರೆ, ಚಿನ್ನಮ್ಮ ಜೈಲಿಗೆ ಹೋದ ಬಳಿಕ ಎಐಡಿಎಡಿಎಂಕೆ ಪಕ್ಷದಲ್ಲಿ ತನ್ನದೇ ಪಾರುಪತ್ಯ ಎಂದು ಮೆರೆಯುತ್ತಿದ್ದ ಶಶಿಕಲಾ ಸಂಬಂಧಿ ದಿನಕರನ್ ನಿನ್ನೆ ರಾತ್ರಿ ಜೈಲು ಸೇರಿದ್ದಾನೆ.

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನರಾದ ಮೇಲೆ ತಮಿಳುನಾಡಿನಲ್ಲಿ ನಡೆಯುತ್ತಿರುವುದೆಲ್ಲಾ ಹೈಡ್ರಾಮ ಹಾಗೂ ಅಧಿಕಾರಕ್ಕಾಗಿ ಸರ್ಕಸ್. ಜಯಾ ಸಾವಿನಿಂದ ತೆರವಾಗಿದ್ದ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಹಣದ ಹೊಳೆಯೇ ಹರಿದು ಚುನಾವಣೆಯೇ ರದ್ದಾಯಿತು.

ಚಿನ್ನಮ್ಮ ಶಶಿಕಲಾಳ ಸಂಬಂಧಿ ಟಿಟಿವಿ ದಿನಕರನ್ ನನ್ನ ನಿನ್ನೆ ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಆರ್.ಕೆ.ನಗರ ಉಪಚುನಾವಣೆ ವೇಳೆಯಲ್ಲಿ ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚದ ಆಮಿಷ ಒಡ್ಡಿದ್ದ. ಚುನಾವಣಾ ಆಯೋಗದ ಅಧಿಕಾರಿಗಳಿಗೆ 60 ಕೋಟಿ ರೂಪಾಯಿಯ ಡೀಲ್ ಕುದುರಿಸಿ ಹೇಗಾದ್ರೂ ಮಾಡಿ, ಪಕ್ಷದ ಚಿಹ್ನೆಯನ್ನ ತಾನು ಪಡೆಯೇಕೆಂದು ಸ್ಕೆಚ್ ಹಾಕಿದ್ದ ದಿನಕರನ್. ಅಷ್ಟರಲ್ಲಾಗಲೇ ಇದು ದೆಹಲಿ ಪೊಲೀಸರಿಗೆ ತಿಳಿದು ಆತನನ್ನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ದೆಹಲಿ ಪೊಲೀಸರ ಸೂಚನೆಯಂತೆ ತನಿಖೆಗೆ ಹಾಜರಾದ ದಿನಕರನ್ ನನ್ನ ಕಳೆದ 4 ದಿನಗಳಿಂದ ದಿನಕರನ್ ನನ್ನ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಡ್ರಿಲ್ ಮಾಡಿದ್ದರು. ಇದಕ್ಕೂ ಮೊದಲು ಕೆಲ ದಿನಗಳ ಹಿಂದಷ್ಟೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಖೇಶ್ ಎಂಬಾತನ ಬಂಧನವಾಗಿತ್ತು. ಆದರೆ, ತನಗೂ ಸುಖೇಶ್ ಗೂ ಯಾವುದೇ ಸಂಬಂಧವಿಲ್ಲ ಎಂದು ದಿನಕರನ್ ಹೇಳುತ್ತಿದ್ದ. ಆದರೆ, ಇದೀಗ ಪೊಲೀಸರ ಮುಂದೆ ದಿನಕರನ್ ತಪ್ಪೊಪ್ಪಿಕೊಡ್ಡಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ತೀವ್ರ ವಿಚಾರಣೆಯ ಬಳಿಕ ದಿನಕರನ್ ನನ್ನ ನಿನ್ನೆ ರಾತ್ರಿ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಇನ್ನು, ಈತನ ಜೊತೆ ಸಹಚರ ಮಲ್ಲಿಕಾರ್ಜುನ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಒಟ್ಟಿನಲ್ಲಿ, ಹಣದಿಂದ ಎಐಎಡಿಎಂಕೆ ಪಕ್ಷದ ಚಿಹ್ನೆಯನ್ನೇ ಖರೀದಿಸಿ ಚುನಾವಣೆ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ದಿನಕರನ್ ಪೊಲೀಸರ ಕಸ್ಟಡಿ ಸೇರಿದರೆ, ಇತ್ತ ತಮಿಳುನಾಡಿನಲ್ಲಿ ಸುಮಾರು 5 ತಿಂಗಳುಗಳ ಕಾಲ ನಡೆದ ಚಿನ್ನಮ್ಮನ ದರ್ಬಾರ್ ಗೆ ಬ್ರೇಕ್ ಬಿದ್ದು, ಹೊಸ ರಾಜಕೀಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆಗಳಿವೆ.