ನವದೆಹಲಿ, (ಜೂ.22): ತಾಂಜೇನಿಯಾ ಮೂಲದ ವ್ಯಕ್ತಿಯ ಹೊಟ್ಟೆಯಿಂದ 2 ಫುಟ್‌ಬಾಲ್‌ಗಳ ಗಾತ್ರದ 24 ಕೆ.ಜಿ ಗಡ್ಡೆಯನ್ನು ದೆಹಲಿ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ತಾಂಜೇನಿಯಾದ 32 ವರ್ಷದ ಅಲೋಯಿಸ್ ಜಾನ್ ಜಾವೆ ಅವರು ಡಿಸೆಂಬರ್, 2017 ರಿಂದ ಹೊಟ್ಟೆಯಲ್ಲಿ ನೋವಿನಿಂದ ಬಳಲುತ್ತಿದ್ದರು. ನೋವು ಹೆಚ್ಚಾಗಿದ್ದರಿಂದ ಕಳೆದ ವರ್ಷ ತಮ್ಮ ದೇಶದಲ್ಲಿಯೇ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದ್ರೆ ಆ ಶಸ್ತ್ರಚಿಕಿತ್ಸೆ ಫೇಲ್ ಆಗಿತ್ತು.

ಬಳಿಕ ಕಳೆದ 31 ಮೇ 2019ಕ್ಕೆ ಜಾವೆ,  24 ಕೆಜಿ ತೂಕದ ಗಡ್ಡೆಯೊಂದಿಗೆ ನವದೆಹಲಿಯ ಫೋರ್ಟಿಸ್  ಆಸ್ಪತ್ರೆಗೆ ಬಂದಿದ್ದರು. ಎರಡು ಕೂಸು ಇರುವಷ್ಟು ದಪ್ಪ ಹೊಟ್ಟೆಯನ್ನು ಕಂಡು ವೈದ್ಯರು ಆಶ್ಚರ್ಯಗೊಂಡಿದ್ದಾರೆ.

ಮಹಿಳೆಯ ಹೊಟ್ಟೆಯಲ್ಲಿ 12 ಕೆಜಿ ಗಡ್ಡೆ!

ಹಂತ-ಹಂತವಾಗಿ ಜಾವೆ ಅವರನ್ನು ಚಿಕಿತ್ಸೆಗೊಳಪಡಿಸಿದ ವೈದ್ಯರು, ಸತತ 6 ಗಂಟಗಳ ಕಾಲ ಶಸ್ತ್ರಚಿಕಿತ್ಸೆಯ ಮೂಲಕ 24 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ ಎಂದು ಫೋರ್ಟಿಸ್ ಆಸ್ಪತ್ರೆ ನಿರ್ದೇಶಕ ಡಾ. ಪ್ರದೀಪ್ ಜೈನ್ ಸಂತಸ ವ್ಯಕ್ತಪಡಿಸಿದರು.

ಗಡ್ಡೆ ಸೋಂಟದ ಭಾಗದಲ್ಲಿದ್ದಿದ್ದರಿಂದ ಶಸ್ತ್ರ ಚಿಕೆತ್ಸೆ ವೇಳೆ ತೀವ್ರ ರಕ್ತಸ್ರಾವವಾಗಲು ಶುರುವಾಯಿತು. ಆದರೆ, ಅದನ್ನು ತಡೆಯಲು ಎರಡು ಸ್ಪಂಜುಗಳೊಂದಿಗೆ ಗಡ್ಡೆ ಭಾಗವನ್ನು ಕವರ್ ಮಾಡಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೂ ಏನಿಲ್ಲ ಅಂದ್ರೂ ಸುಮಾರು ನಾಲ್ಕು ಲೀಟರ್‌ನಷ್ಟು ರಕ್ತಸ್ರಾವಯಿತು ಎಂದರು.

ಶಸ್ತ್ರಚಿಕಿತ್ಸೆಯ ನಂತರದ ನಾಲ್ಕು ದಿನಗಳವೆರೆಗೆ ವೆಂಟಿಲೇಟರ್‌ನಲ್ಲಿದ್ದರು. ಇದೀಗ ಜಾವೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಡಾ. ಜೈನ್ ಹೇಳಿದರು.

ಒಟ್ಟಿನಲ್ಲಿ 24 ಕೆ.ಜಿ. ತೂಕದ ಗಡ್ಡೆಯನ್ನು ಹೊತ್ತುಕೊಂಡು ಜೀವನ್ಮರಣೆ ಹೋರಾಟ ನಡೆಸುತ್ತಿದ್ದ ತಾಂಜೇನಿಯಾ ವ್ಯಕ್ತಿಗೆ ನಮ್ಮ ದೇಶದ ವೈದ್ಯರು ಪುನರ್ಜನ್ಮ ನೀಡಿದ್ದಾರೆ.