ಮೈಸೂರು[ಡಿ.01]: ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ ಭಾರಿ ಗಾತ್ರದ ಮಾಂಸದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ನಗರದ ಶ್ರೀದೇವಿ ನರ್ಸಿಂಗ್‌ ಹೋಮ್‌ ವೈದ್ಯರು ಯಶಸ್ವಿಯಾಗಿದ್ದಾರೆ. ಶಾಂತಿನಗರ ನಿವಾಸಿ ಸಲ್ಮಾ (47) ಅವರ ಹೊಟ್ಟೆಯಲ್ಲಿ ಬೆಳೆದಿದ್ದ 12 ಕೆ.ಜಿ. ತೂಕದ ದುರ್ಮಾಂಸವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.

ಮನೆಗೆಲಸ ಮಾಡುವ ಸಲ್ಮಾ ಅವರಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಇತ್ತೀಚೆಗೆ ಹೊಟ್ಟೆದಪ್ಪದಾಗಿತ್ತು. ಆಸ್ಪತ್ರೆಯೊಂದರಲ್ಲಿ ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಖಚಿತವಾಗಿತ್ತು. ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುವುದಾಗಿ ವೈದ್ಯರು ತಿಳಿಸಿದ್ದರು. ಹೆಚ್ಚಿನ ಹಣ ಹೊಂದಿಸಲು ಸಾಧ್ಯವಾಗದೆ ಸಲ್ಮಾ, ತಮ್ಮ ಸಂಬಂಧಿಕರ ಸಲಹೆಯಂತೆ ಎರಡು ದಿನಗಳ ಹಿಂದೆ ಶ್ರೀದೇವಿ ನರ್ಸಿಂಗ್‌ ಹೋಮ್‌ಗೆ ಬಂದು ದಾಖಲಾದರು. ವೈದ್ಯ ಡಾ. ಬಿ.ಡಿ. ದೇವರಾಜ್‌ ರೋಗಿಯ ಪರೀಕ್ಷೆ ನಡೆಸಿ ಶುಕ್ರವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಗೆಡ್ಡೆ (ದುರ್ಮಾಂಸ)ಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಸಲ್ಮಾ ಇದೀಗ ಆರೋಗ್ಯದಿಂದಿದ್ದಾರೆ.