ಸಂತೋಷ್‌ಗೆ ಜವಾಬ್ದಾರಿ ನೀಡಿ ಯಡಿಯೂರಪ್ಪಗೆ ಮಾಹಿತಿ ನೀಡದ ವರಿಷ್ಠರು

ಬಿಜೆಪಿ ಹೈಕಮಾಂಡ್ ಅತ್ತ ಮಗುವನ್ನೂ ಚಿವುಟಿ, ಇತ್ತ ತೊಟ್ಟಿಲನ್ನೂ ತೂಗುವ ಕೆಲಸ ಮಾಡುತ್ತಿದೆಯೇ? ಪ್ರಸಕ್ತ ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಇಂಥದೊಂದು ಅನುಮಾನ ಸಹಜವಾಗಿಯೇ ಮೂಡುತ್ತಿದೆ.

ಒಂದು ಕಡೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲರನ್ನೂ ಸರಿದೂಗಿಸಿಕೊಂಡು ಮುನ್ನಡೆಯುವಂತೆ ಸೂಚಿಸುವ ಬಿಜೆಪಿ ವರಿಷ್ಠರು ಮತ್ತೊಂದೆಡೆ ಪಕ್ಷದಲ್ಲಿನ ವಿವಿಧ ಸಮಿತಿಗಳ ಸಭೆ ನಡೆಸಿ ಪ್ರಗತಿ ವರದಿ ಸಲ್ಲಿಸಿ ಎಂದು ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ನಿರ್ದೇಶನ ನೀಡುತ್ತಿದ್ದಾರೆ.

ವರಿಷ್ಠರ ಸೂಚನೆ ಎಂಬ ಕಾರಣಕ್ಕಾಗಿ ಸಂತೋಷ್ ಅವರು ತಮ್ಮ ಜವಾಬ್ದಾರಿ ನಿಭಾಯಿಸಲು ಮುಂದಾಗುತ್ತಾರೆ. ನನಗೆ ಗೊತ್ತಿಲ್ಲದೆ ಸಂತೋಷ್ ಅವರು ಪಕ್ಷದ ಸಂಘಟನೆಯಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಬೇಸರಗೊಳ್ಳುತ್ತಾರೆ. ಯಡಿಯೂರಪ್ಪ ಮತ್ತು ಸಂತೋಷ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಸ್ಫೋಟಗೊಳ್ಳಲು ಇದೇ ಮೂಲ ಕಾರಣ.

ವರಿಷ್ಠರಿಗೆ ಉಭಯನಾಯಕರೂ ಬೇಕು. ಒಬ್ಬರನ್ನು ಹಿಂದೆ ಸರಿಸಲು ತಯಾರಿಲ್ಲ. ಆದರೆ, ಇಬ್ಬರನ್ನೂ ಮುಖಾಮುಖಿಯಾಗಿಸಿ ಅಮಿತ್ ಶಾ ಅವರು ಮಾತುಕತೆ ನಡೆಸಿ ಗೊಂದಲಗಳನ್ನು ಬಗೆಹರಿಸಿದಲ್ಲಿ, ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿದಲ್ಲಿ ಬಿಕ್ಕಟ್ಟು ನಿವಾರಣೆಯಾಗುತ್ತದೆಯೇ ಹೊರತು ಕೇವಲ ಬಹಿರಂಗವಾಗಿ ನೀಡುವ ಹೇಳಿಕೆಗಳಿಂದ ಸಾಧ್ಯವಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿ ವರಿಷ್ಠರು ಕೂಡ ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ ಎಂಬ ನಿಲುವನ್ನು ಒಮ್ಮೆ ಅಪ್ಪಿಕೊಂಡರೆ, ಮತ್ತೊಮ್ಮೆ ಅಧಿಕಾರಕ್ಕೆ ಬರದಿದ್ದರೂ ಪಕ್ಷದ ಸಂಘಟನೆ ಗಟ್ಟಿಯಾಗಿ ಉಳಿಯುವುದು ಮುಖ್ಯ ಎಂಬ ನಿಲುವಿಗೆ ಅಂಟಿಕೊಳ್ಳಲು ಮುಂದಾಗುತ್ತದೆ.

ಹೀಗೆ ಅಧಿಕಾರಕ್ಕೆ ಬರುವುದು ಮುಖ್ಯವೋ ಅಥವಾ ಪಕ್ಷ ಕೈಬಿಟ್ಟು ಹೋಗುತ್ತದೆಯೋ ಎಂಬ ಗೊಂದಲದಲ್ಲೇ ಮುಂದುವರೆದಿರುವುದರಿಂದ ಮತ್ತೆ ಮತ್ತೆ ಸಮಸ್ಯೆ ಉದ್ಭವಿಸುತ್ತಿದೆ. ಒಟ್ಟಿನಲ್ಲಿ ವರಿಷ್ಠರೇ ಯಡಿಯೂರಪ್ಪ ಮತ್ತು ಸಂತೋಷ್ ಎಂಬ ಎರಡು ದೋಣಿಗಳಲ್ಲಿ ಕಾಲಿಟ್ಟುಕೊಂಡು ಮುಂಬರುವ ಚುನಾವಣೆ ಎದುರಿಸಲು ಹೊರಟಿದ್ದಾರೆಯೇ ಹೊರತು ಇಬ್ಬರನ್ನೂ ಒಂದುಗೂಡಿಸಿ ಮುಂದೆ ಸಾಗಿದರೆ ಮಾತ್ರ ಪ್ರಯಾಣ ಸುಲಭ ಎಂಬ ನಿಲುವಿಗೆ ಬರಲು ಸಾಧ್ಯವಾಗುತ್ತಿಲ್ಲ. ಸಂತೋಷ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಿಂದ (ಆರ್‌ಎಸ್‌ಎಸ್) ನೇಮಕಗೊಂಡವರಾಗಿದ್ದರಿಂದ ಅವರನ್ನು ಅಷ್ಟು ಸುಲಭವಾಗಿ ದೂರ ಇಡುವುದು ಸಾಧ್ಯವಿಲ್ಲದ ಮಾತು. ಯಡಿಯೂರಪ್ಪ ಅಥವಾ ಬೇರಾವುದೇ ರಾಜ್ಯ ನಾಯಕರು ಸಂತೋಷ್ ಅವರನ್ನು ದೂರ ಇಡಲು ಬಯಸಿದರೂ ವರಿಷ್ಠರು ಮಾತ್ರ ಸಂತೋಷ್ ಅವರು ಪ್ರಮುಖ ಪಾತ್ರ ವಹಿಸಬೇಕು ಎಂಬ ಉದ್ದೇಶವನ್ನೇ ಹೊಂದಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಂತೋಷ್ ಅವರ ಸಾಮರ್ಥ್ಯವೂ ಅಷ್ಟರ ಮಟ್ಟಿಗೆ ಇದೆ. ಆದರೆ, ಸಂತೋಷ್ ಅವರನ್ನು ರಾಜ್ಯ ರಾಜಕಾರಣದಲ್ಲಿ ಸಕ್ರಿಯಗೊಳಿಸುತ್ತಿರುವಂತೆಯೇ ಯಡಿಯೂರಪ್ಪ ಅವರ ಪಾಳೆಯ ಅಂತಕಕ್ಕೀಡಾಗುತ್ತದೆ. ದೇಶದ ಇತರ ಕೆಲವು ರಾಜ್ಯಗಳಲ್ಲಿ ಪ್ರಯೋಗ ಮಾಡಿದಂತೆ ಇಲ್ಲಿಯೂ ಚುನಾವಣೆಯಲ್ಲಿ ಗೆದ್ದ ನಂತರ ಸಂತೋಷ್ ಎಂಬ ‘ಡಾರ್ಕ್ ಹಾರ್ಸ್’ನ್ನು ಮುಂದೆ ಬಿಡಲಾಗುತ್ತದೆಯೇ ಎಂಬ ಅನುಮಾನ ಕಳೆದ ಒಂದು ವರ್ಷದಿಂದಲೂ ಇದೆ.

ಪಕ್ಷದ ವರಿಷ್ಠರು ಬಹಿರಂಗವಾಗಿ ಯಡಿಯೂರಪ್ಪ ಅವರೇ ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತಿದ್ದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಂಬುವ ಸ್ಥಿತಿಯಲ್ಲಿ ಯಡಿಯೂರಪ್ಪ ಪಾಳೆಯ ಇಲ್ಲ.