ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ವಿಳಂಬ ಮಾಡಿದರೆ ಗ್ಯಾಸ್ ಏಜೆನ್ಸಿಗಳಿಗೆ ಬೀಳಲಿದೆ ದಂಡ..! ಹೌದು. ಅಡುಗೆ ಅನಿಲ ಸಿಲಿಂಡರ್ ವಿತರಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಕುಟುಂಬ ವೊಂದನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದ ಇಂಡೇನ್ ಗ್ಯಾಸ್ ವಿತರಣಾ ಏಜೆನ್ಸಿಯೊಂದಕ್ಕೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ದಿನಗಳ ಸಂಖ್ಯೆಯ ಆಧಾರದಲ್ಲಿ ದಂಡ ವಿಧಿಸಿದೆ.
ರಮೇಶ್ ಬನ್ನಿಕುಪ್ಪೆ
ಬೆಂಗಳೂರು : ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ವಿಳಂಬ ಮಾಡಿದರೆ ಗ್ಯಾಸ್ ಏಜೆನ್ಸಿಗಳಿಗೆ ಬೀಳಲಿದೆ ದಂಡ..! ಹೌದು. ಅಡುಗೆ ಅನಿಲ ಸಿಲಿಂಡರ್ ವಿತರಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಕುಟುಂಬ ವೊಂದನ್ನು ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದ ಇಂಡೇನ್ ಗ್ಯಾಸ್ ವಿತರಣಾ ಏಜೆನ್ಸಿಯೊಂದಕ್ಕೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ದಿನಗಳ ಸಂಖ್ಯೆಯ ಆಧಾರದಲ್ಲಿ ದಂಡ ವಿಧಿಸಿದೆ.
ಸಿಲಿಂಡರ್ ವಿತರಣೆ ಮಾಡುವ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಪಡೆಯಬಾರದು. ಅಲ್ಲದೆ, ಬುಕ್ ಮಾಡಿದ ಏಳು ದಿನಗಳ ಒಳಗಾಗಿ ವಿತರಣೆ ಮಾಡಬೇಕು ಎಂಬ ನಿಯಮ ವಿದೆ. ಆದರೆ, ಸಿಲಿಂಡರ್ ವಿತರಣೆ ಮಾಡುವ ಯುವಕ ನಿಯಮಬಾಹಿರವಾಗಿ ಹೆಚ್ಚುವರಿ 100 ರು. ಹಣ ಕೇಳಿದ್ದಾರೆ. ಆದರೂ ಏಜೆನ್ಸಿ ಪಡೆದಿರುವ ಸಂಸ್ಥೆಯು ತನ್ನಲ್ಲಿ ಕಾರ್ಯನಿರ್ವಹಿಸುವ ವಿತರಣೆ ಮಾಡುವ ನೌಕರನನ್ನು ನಿಯಂತ್ರಿಸುವಲ್ಲಿ ವಿಫಲರಾಗಿದೆ.
ಹಾಗಾಗಿ ಒಂದು ದಿನಕ್ಕೆ 100 ರು.ಗಳಂತೆ ವಿಳಂಬವಾದ 25 ದಿನಗಳಿಗೆ ಒಟ್ಟು 2500 ರು. ಗಳನ್ನು ಗ್ರಾಹಕನಿಗೆ ನೀಡಬೇಕು. ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದ್ದಕ್ಕೆ 2000ರು. ಹಾಗೂ ಕಾನೂನು ಹೋರಾಟ ನಡೆಸಿದ್ದಕ್ಕಾಗಿ 1000 ರು.ಗಳನ್ನು ಪಾವತಿಸಬೇಕು ಎಂದು ಸೂಚನೆ ನೀಡಿದೆ. ಅಲ್ಲದೆ, ಆದೇಶದ ಪ್ರತಿ ಸಿಕ್ಕ 30 ದಿನಗಳ ಒಳಗಾಗಿ ಆದೇಶವನ್ನು ಪಾಲಿಸಬೇಕು ಎಂದು ಏಜೆನ್ಸಿ ಮಾಲೀಕರಿಗೆ
ಸೂಚನೆ ನೀಡಿದೆ.
100 ರು. ಕೇಳಿದ್ದ ಡೆಲಿವರಿ ಬಾಯ್: ಯಲಹಂಕದ ಚಿಕ್ಕಬೆಟ್ಟಹಳ್ಳಿ ನಿವಾಸಿ ಕಿಶೋರ್ ರಾವ್ ಎಂಬುವರು ಇಂಡೇನ್ ಗ್ಯಾಸ್ ಏಜೆನ್ಸಿ ನಟರಾಜ ಎಂಟರ್‌ಪ್ರೈಸಸ್‌ನಲ್ಲಿ ಅಡುಗೆ ಅನಿಲ ಪಡೆಯಲು ನೋಂದಣಿ ಮಾಡಿಕೊಂಡಿದ್ದು, ಸಿಲಿಂಡರ್ ಖಾಲಿಯಾದ ತಕ್ಷಣ ಐವಿಆರ್‌ಎಸ್ (ಫೋನ್ ಕಾಲ್ ಮೂಲಕ) ನಲ್ಲಿ ಸಿಲಿಂಡರ್ ಬುಕ್ ಮಾಡಿದ್ದಾರೆ. ಆದರೆ, ಸಿಲಿಂಡರ್ ವಿತರಿಸಲು ಬಂದ ಯುವಕ ಹೆಚ್ಚುವರಿಯಾಗಿ 100 ರು. ಕೇಳಿದ್ದ. ಇದಕ್ಕೊಪ್ಪದಿದ್ದಾಗ ಸಿಲಿಂಡರ್ ನೀಡದೆ ಹಿಂದಿರುಗಿದ್ದ. ಅಲ್ಲದೆ, ಮುಂದಿನ ತಿಂಗಳಿನಿಂದ ಸಿಲಿಂಡರ್ ವಿತರಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ.
ಇದಾದ ಬಳಿಕ ಮತ್ತೊಮ್ಮೆ ಬುಕ್ ಮಾಡಿದ್ದರೂ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಿರಲಿಲ್ಲ. ಈ ನಡುವೆ ಕಿಶೋರ್ ಮನೆಯಲ್ಲಿದ್ದ ಮತ್ತೊಂದು ಸಿಲಿಂಡರ್ ಕೂಡ ಖಾಲಿಯಾಗಿತ್ತು. ಇದರಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪರಿಣಾಮ 4500 ರು.ಗಳನ್ನು ನೀಡಿ ವಿದ್ಯುತ್ ಸ್ಟೌವ್ ಖರೀದಿಸಿದ್ದರು. ಈ ನಡುವೆ ಇಂಡೇನ್ ಗ್ಯಾಸ್‌ನ ಮುಖ್ಯ ಕಚೇರಿಗೆ ವೆಬ್ ಸೈಟ್ ಮೂಲಕ ದೂರು ದಾಖಲಿಸಿದ್ದರು. ಜೊತೆಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿ, ವಿದ್ಯುತ್ ಸ್ಟೌವ್ ಖರೀದಿಸಿದ್ದಕ್ಕಾಗಿ 4500 ರು., ಮಾನಸಿಕ ಹಿಂಸೆ ನೀಡಿದ್ದಕ್ಕೆ 15 ಸಾವಿರ ರು. ಹಾಗೂ ಕಾನೂನು ಹೋರಾಟಕ್ಕಾಗಿ 15 ಸಾವಿರ ರು.ಗಳನ್ನು ನೀಡಬೇಕು ಎಂದು ಕೋರಿದ್ದರು.
ಡೆಲಿವರಿ ಬಾಯ್ ಕೆಲಸದಿಂದ ವಜಾ: ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ ನಟರಾಜ ಎಂಟರ್‌ಪ್ರೈಸಸ್‌ನ ಮಾಲೀಕರು, ಪ್ರಕರಣದಲ್ಲಿ ತಮ್ಮಿಂದ ಯಾವುದೇ ವಿಳಂಬ ಆಗಿಲ್ಲ. ಆದರೆ, ಸಿಲಿಂಡರ್ ವಿತರಣೆ ಮಾಡುತ್ತಿದ್ದ ಯುವಕ ಅರ್ಜಿದಾರರ ಮನೆ ಬಾಗಿಲು ಮುಚ್ಚಿತ್ತು ಎಂದು ತಿಳಿಸಿದ್ದ. ಹಾಗಾಗಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಅಲ್ಲದೆ, ಸಿಲಿಂಡರ್ ವಿತರಣೆಯಲ್ಲಿ ವಿಳಂಬವಾಗಿದ್ದಕ್ಕಾಗಿ ಗ್ರಾಹಕರ ಕ್ಷಮೆ ಕೇಳಲಾಗುವುದು. ಜೊತೆಗೆ ಹೆಚ್ಚುವರಿ 100 ರು. ಕೇಳಿದ ಮಾಹಿತಿ ತಿಳಿದ ತಕ್ಷಣ ಡೆಲಿವರಿ ಹುಡುಗನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ವಿವರಿಸಿದ್ದರು.
