* ಮುಳುವಾಡ ಏತ ನೀರಾವರಿ ಯೋಜನೆಗೆ 54.43 ಟಿ.ಎಂ.ಸಿ.* ಚಿಮ್ಮಲಗಿ ಯೋಜನೆಗೆ 20.78 ಟಿ.ಎಂ.ಸಿ.* ಇಂಡಿ ಏತ ನೀರಾವರಿಗೆ 4.94 ಟಿ.ಎಂ.ಸಿ.* ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆಗೆ 18.98 ಟಿ.ಎಂ.ಸಿ.* ರಾಂಪುರ ಏತ ನೀರಾವರಿಗೆ 3.32 ಟಿ.ಎಂ.ಸಿ.* ಮಲ್ಲಾಬಾದ್ ಏತ ನೀರಾವರಿಗೆ 8.05 ಟಿ.ಎಂ.ಸಿ.* ಕೊಪ್ಪಳ ಏತ ನೀರಾವರಿಗೆ 11.56 ಟಿ.ಎಂ.ಸಿ.* ಹೆರಕಲ್ ಏತ ನೀರಾವರಿಗೆ 3.66 ಟಿ.ಎಂ.ಸಿ.* ಭೀಮಾ ಫ್ಲಾಂಕ್ಸ್ ಯೋಜನೆಗೆ 5.15 ಟಿ.ಎಂ.ಸಿ.
ಬೆಂಗಳೂರು(ಮಾ. 21): ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ನ್ಯಾಯಾಧೀಕರಣ 2ರ ತೀರ್ಪಿನನ್ವಯ ಹಂಚಿಕೆಯಾಗಿದ್ದ 130 ಟಿ.ಎಂ.ಸಿ. ಹೆಚ್ಚುವರಿ ನೀರನ್ನು ಬಳಸಿಕೊಳ್ಳುವಲ್ಲಿ ಕೃಷ್ಣಾ ಜಲಭಾಗ್ಯ ನಿಗಮ ವಿಫಲವಾಗಿರುವುದು ಬೆಳಕಿಗೆ ಬಂದಿದೆ. ಹೆಚ್ಚುವರಿಯಾಗಿ ಹಂಚಿಕೆಯಾಗಿರುವ ನೀರು ಆಧರಿಸಿ ಕೈಗೆತ್ತಿಕೊಂಡಿದ್ದ 9 ಏತ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಕ್ಕೆ ತರದ ಪರಿಣಾಮ ಅಂದಾಜು ವೆಚ್ಚದಲ್ಲಿ ಗಣನೀಯವಾಗಿ ಏರಿಕೆ ಆಗಿರುವುದು ಬಹಿರಂಗವಾಗಿದೆ. 17,207 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಮಂಜೂರು ದೊರೆತಿತ್ತು. ಆದರೆ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಯೋಜನೆ ವೆಚ್ಚ 30,000 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಒಟ್ಟು 50,824 ಕೋಟಿ ರೂ.ಮೊತ್ತಕ್ಕೆ ಪರಿಷ್ಕೃತವಾಗಿದೆ.
5,30,475 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸುವ 9 ಏತ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ತರುವಲ್ಲಿ ಹಿನ್ನಡೆ ಸಾಧಿಸಿರುವ ಅಧಿಕಾರಿಗಳು, ಅಂದಾಜು ವೆಚ್ಚ ಏರಿಕೆ ಮಾಡುವಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಮೊದಲು 48,436 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಸರ್ಕಾರ ಉದ್ದೇಶಿಸಿತ್ತು. ಈ ಬಗ್ಗೆ ತೀರ್ಮಾನ ಕೈಗೊಂಡಿದ್ದ ಸರ್ಕಾರ, 1.12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಮುಂದಾಗಿತ್ತು. ಒಟ್ಟು 17,207 ಕೋಟಿ ರೂ.ಮೊತ್ತದಲ್ಲಿ ಕಾಮಗಾರಿಗೆಂದು 12 ಸಾವಿರ ಕೋಟಿ, ಭೂ ಸ್ವಾಧೀನ ಸೇರಿ ಇತರೆ ಉದ್ದೇಶಗಳಿಗೆ 5 ಸಾವಿರ ಕೋಟಿ ರೂ. ಹಂಚಿಕೆಯಾಗಿತ್ತು. ಅಲ್ಲದೆ, ಆಡಳಿತಾತ್ಮಕ ವೆಚ್ಚ ಭರಿಸಲು 840 ಕೋಟಿ ರೂ.ನಿಗದಿಯಾಗಿತ್ತು.
2014-15ರಲ್ಲಿ ಅಂದಾಜು ವೆಚ್ಚ ಪರಿಷ್ಕೃತಗೊಂಡಿದ್ದು, ಇದರ ಪ್ರಕಾರ ಸಿವಿಲ್ ಕಾಮಗಾರಿಗಳಿಗೆ 18,028.44 ಕೋಟಿ ರೂ., ಭೂ ಸ್ವಾಧೀನ ಮತ್ತು ಇತರೆ ಉದ್ದೇಶಗಳಿಗೆ 29,815.17 ಕೋಟಿ ರೂ., ಇನ್ನಿತರೆ ಕೆಲಸಗಳಿಗೆ 2,977.33 ಕೋಟಿ ರೂ.ಸೇರಿ ಒಟ್ಟು 50,820.94 ಕೋಟಿ ರೂ.ಗೇರಿತ್ತು. ಭೂ ಸ್ವಾಧೀನಕ್ಕೆಂದು ಅಂದಾಜಿಸಿದ್ದ ವೆಚ್ಚ ಏರಿಕೆಯಾಗಲು 2013ರಲ್ಲಿ ಜಾರಿಗೆ ಬಂದಿರುವ ಭೂ ಸ್ವಾಧೀನ ನೀತಿಯೂ ಕಾರಣ ಎನ್ನಲಾಗಿದೆ. ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಿದ್ದ ವರ್ಷದಲ್ಲಿ ಭೂ ಮಾರ್ಗಸೂಚಿ ಬೆಲೆ 1.70ರಷ್ಟಿತ್ತು. 2013ರಲ್ಲಿ ಜಾರಿಗೆ ಬಂದ ಹೊಸ ಕಾಯಿದೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 4 ಪಟ್ಟು ಮತ್ತು ನಗರ ಪ್ರದೇಶದಲ್ಲಿ 2 ಪಟ್ಟು, ವಲಯವಾರು 3 ಪಟ್ಟು ಹೆಚ್ಚಳವಾಗಿತ್ತು.
ಈ 9 ಯೋಜನೆಗಳಿಗೆ ಇಲ್ಲಿಯವರೆಗೆ 4,989 ಕೋಟಿ ರೂ.ಖರ್ಚಾಗಿದೆ. ಅದರಲ್ಲಿ ಭೂ ಸ್ವಾಧೀನಕ್ಕೆಂದು 751 ಕೋಟಿ, ಸಿವಿಲ್ ಕಾಮಗಾರಿಗಳಿಗೆ 4,238 ಕೋಟಿ ರೂ.ಖರ್ಚಾಗಿದೆ. ಇನ್ನು 3,262 ಕೋಟಿ ರೂ.ಮೊತ್ತದಲ್ಲಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಮುಂದಿನ ಒಂದು ವರ್ಷದಲ್ಲಿ ಸುಮಾರು 3,700 ಕೋಟಿ ರೂ.ಮೊತ್ತದಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಕೃಷ್ಣ ಜಲಭಾಗ್ಯ ನಿಗಮದ ಮೂಲಗಳು ತಿಳಿಸಿವೆ.
- ಜಿ. ಮಹಾಂತೇಶ್, ಸುವರ್ಣನ್ಯೂಸ್
