Asianet Suvarna News Asianet Suvarna News

ಎಟಿಎಂ ರಕ್ಕಸ ಬೆಂಗಳೂರಿಗೆ ಸದ್ಯಕ್ಕಿಲ್ಲ

ನಮ್ಮ ತನಿಖೆ ಮೊದಲು, ನಂತರ ಬೆಂಗಳೂರು: ಚಿತ್ತೂರು ಎಸ್ಪಿ

Delay in Handing Over ATM Attacker to Bengaluru Police

ಬೆಂಗಳೂರು (ಫೆ.06): ಎಟಿಎಂ ಹಲ್ಲೆಕೋರ ಮಧುಕರರೆಡ್ಡಿ ಮೂರು ವರ್ಷಗಳ ನಂತರ ಸಿಕ್ಕಿಬಿದ್ದಿದ್ದರೂ ತನಿಖೆಗಾಗಿ ಆತನನ್ನು ರಾಜ್ಯಕ್ಕೆ ಕರೆತರಲು ಇನ್ನಷ್ಟುದಿನಗಳ ಕಾಲ ಕಾಯಬೇಕಾಗಿ ಬರಬಹುದು.
ಕಾರಣ- ತಾಂತ್ರಿಕ ಸಮಸ್ಯೆ. ಪರಿಣಾಮ ಆಂಧ್ರಪ್ರದೇಶದ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಮಧುಕರರೆಡ್ಡಿ ವಿರುದ್ಧದ ಬೆಂಗಳೂರು ಪೊಲೀಸರ ತನಿಖೆ ವಿಳಂಬವಾಗಲಿದೆ. ಇಂತಿಷ್ಟೇ ದಿನಗಳು ವಿಳಂಬವಾಗಬಹುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎನ್ನಲಾಗಿದೆ.

ಒಂದೆಡೆ ಪ್ರಕರಣದ ತನಿಖೆ ಪ್ರಾರಂಭಕ್ಕೆ ಬೆಂಗ​ಳೂರು ಪೊಲೀಸರು ನ್ಯಾಯಾಲಯದ ಅನುಮತಿ ಪಡೆಯಬೇಕಿದ್ದರೆ, ಮತ್ತೊಂದೆಡೆ ಆಂಧ್ರ​ಪ್ರದೇಶದಲ್ಲಿ ಮಧುಕರರೆಡ್ಡಿ ಕೊಲೆ ಪ್ರಕರಣದ ಶಿಕ್ಷಾರ್ಹ ಕೈದಿಯಾಗಿದ್ದು, ಆತನ ಮೇಲೆ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳ ತನಿಖೆ ಬಾಕಿ ಇದೆ. ತಮ್ಮ ಪ್ರಕರಣಗಳ ತನಿಖೆಗೆ ಪೂರ್ಣಗೊಂಡ ಬಳಿಕವಷ್ಟೆಬೆಂಗಳೂರು ಪೊಲೀಸರ ವಶಕ್ಕೆ ನೀಡುವ ಬಗ್ಗೆ ಅಲ್ಲಿನ ಪೊಲೀಸರು ನಿರ್ಧರಿಸಿದ್ದಾರೆ.

ಈ ಎರಡು ಪ್ರಮುಖ ಕಾರಣಗಳಿಂದ ಬೆಂಗ​ಳೂರು ಪೊಲೀಸರ ತನಿಖೆಗೆ ‘ತಾತ್ಕಾಲಿಕ' ಬ್ರೇಕ್‌ ಬಿದ್ದಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಚಿತ್ತೂರು ಪೊಲೀಸರಿಂದ ಆರೋಪಿ ಬಂಧನ ಕುರಿತು ವರದಿ ಪಡೆದಿರುವ ಪೊಲೀಸರು, ನಗರದ 6ನೇ ಎಸಿಎಂಎಂ ನ್ಯಾಯಾಲಯಕ್ಕೆ ತನಿಖೆಗೆ ಅವಕಾಶ ಕೋರಿ ಸೋಮವಾರ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಎಟಿಎಂ ಹಲ್ಲೆ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ‘ಸಿ' ರಿಪೋರ್ಟ್‌ ಸಲ್ಲಿಕೆಯಾಗಿದೆ. ಹೀಗಾಗಿ ಈ ಕೃತ್ಯದ ಮರು ತನಿಖೆಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಸೋಮವಾರ ತನಿಖಾಧಿಕಾರಿ ಹಲಸೂರು ಉಪವಿಭಾಗ ಎಸಿಪಿ ಅರ್ಜಿ ಸಲ್ಲಿಸಲಿದ್ದಾರೆ. ಅಷ್ಟರಲ್ಲಿ ಮಧುಕರ ರೆಡ್ಡಿಯನ್ನು ತಮ್ಮ ಪ್ರಕರಣ ತನಿಖೆಗೆ ಸ್ಥಳೀಯ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ನಗರಕ್ಕೆ ಕರೆತರಲು ಎರಡು ವಾರಗಳ ಸಮಯ ತೆಗೆದುಕೊಳ್ಳಬಹುದು.
ಪ್ರವೀಣ್‌ ಸೂದ್‌ ನಗರ ಪೊಲೀಸ್‌ ಆಯುಕ್ತ

ಪ್ರಕರಣದ ಮರು ತನಿಖೆ: 2013ರ ನವೆಂಬರ್‌ 19ರಂದು ಬಿಬಿಎಂಪಿ ಕೇಂದ್ರ ಕಚೇರಿ ಸಮೀಪದ ಎಲ್‌ಐಸಿ ಕಟ್ಟಡದಲ್ಲಿರುವ ಕಾರ್ಪೊರೇಷನ್‌ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಹಣ ಪಡೆಯಲು ತೆರಳಿದ್ದ ಆ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಉದಯ್‌ ಮೇಲೆ ಮಧುಕರರೆಡ್ಡಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಕೃತ್ಯದ ಸಿಸಿಟೀವಿ ದೃಶ್ಯಾವಳಿಗಳು ಬಹಿರಂಗಗೊಳ್ಳುವ ಮೂಲಕ ಹಲ್ಲೆ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆ​ಗ್ರಾಸವಾಗಿತ್ತು. ಈ ಹಲ್ಲೆಕೋರನ ಪತ್ತೆಗೆ ತಿಂಗಳುಗಟ್ಟಲೇ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ 600ಕ್ಕೂ ಅಧಿಕ ಮಂದಿಯ ಬೃಹತ್‌ ಪೊಲೀಸರ ಪಡೆಯು ಕಾರ್ಯಾಚರಣೆ ನಡೆಸಿ ಆರೋಪಿ ಸಣ್ಣದೊಂದು ಸುಳಿವು ಪತ್ತೆ ಹಚ್ಚದೆ ವಿಫಲವಾಗಿತ್ತು.

ಈ ಹಿನ್ನೆಲೆಯಲ್ಲಿ ಎಸ್‌.ಜೆ. ಪಾರ್ಕ್ ಠಾಣೆ ಪೊಲೀಸರು ಈ ಕೃತ್ಯ ಸಂಬಂಧ 2016ರ ಜನವರಿಯಲ್ಲಿ ನಗರದ 6ನೇ ಎಸಿಎಂಎಂ ನ್ಯಾಯಾ​ಲಯಕ್ಕೆ ‘ಪತ್ತೆಯಾಗದ ಪ್ರಕರಣ' (ಸಿ ರಿಪೋರ್ಟ್‌) ಎಂದು ವರದಿ ಸಲ್ಲಿಸಿದ್ದರು. ಇದರೊಂದಿಗೆ ತನಿಖೆಯು ಅಧಿಕೃತವಾಗಿ ಸ್ಥಗಿತವಾ​ಗಿತ್ತು. ಈಗ ಮದ​ನಪಲ್ಲಿ ಸಮೀಪ ಹಲ್ಲೆಕೋರನ ಸ್ಥಳೀಯ ಪೊಲೀಸರ ಬಲೆಗೆ ಬೀಳುವ ಮೂಲಕ ಎಟಿಎಂ ಕೇಂದ್ರದ ಹಲ್ಲೆ ಕೃತ್ಯದ ತನಿಖೆಗೆ ಮರು ಜೀವ ಬಂದಂತಾಗಿದೆ.

ಎಟಿಎಂ ಹಲ್ಲೆ ಪ್ರಕರಣ ಕುರಿತು ಈಗಾಗಲೇ ‘ಸಿ' ರಿಪೋರ್ಟ್‌ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣದ ಕುರಿತು ಮತ್ತೆ ತನಿಖೆ ಪ್ರಾರಂಭಕ್ಕೆ ನ್ಯಾಯಾಲಯದ ಅನುಮತಿ ಪಡೆಯಬೇಕಿದೆ. ಇದಕ್ಕು ಮುನ್ನ ಆರೋಪಿ ಬಂಧನ ಕುರಿತು ಖಚಿತಪಡಿಸಿ ಅಧಿಕೃ​ತವಾಗಿ ಚಿತ್ತೂರು ಪೊಲೀಸರಿಂದ ವರದಿ ಪಡೆಯ​ಬೇಕು. ಆನಂತರ ಈ ವರದಿಯನ್ನು 6ನೇ ಎಸಿಎಂಎಂ ನ್ಯಾಯಾಲಕ್ಕೆ ಸಲ್ಲಿಸಿ, ಮರು ತನಿಖೆ ಅವಕಾಶಕ್ಕೆ ಕೋರಿಕೆ ಸಲ್ಲಿಸಬೇಕಿದೆ ಎಂದು ಹಿರಿಯ ಅಧಿಕಾರಿ​ಯೊಬ್ಬರು ‘ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.

ಈ ಕಾನೂನು ಪ್ರಕ್ರಿಯೆ ಅತುರವಾಗಿ ನಡೆಸಲು ಸಾಧ್ಯವಿಲ್ಲ. ಅಲ್ಲದೆ ನ್ಯಾಯಾಲಯದ ಅನುಮತಿ ಪಡೆಯದೆ ನಾವು, ಆರೋಪಿಯನ್ನು ಪ್ರಶ್ನಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಈಗಾಗಲೇ ನಾವು ಬಂಧಿಸಿದ ಆರೋಪಿ, ಬೆಂಗಳೂರಿನಲ್ಲಿ ನಡೆದಿರುವ ಅಪರಾಧ ಪ್ರಕರಣದಲ್ಲಿ ಸಹ ಪಾಲ್ಗೊಂಡಿರುವ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾನೆ. ಹಾಗಾಗಿ ಈ ಕುರಿತು ತನಿಖೆಗೆ ಆತನನ್ನು ವಶಕ್ಕೆ ಪಡೆಯಬಹುದು ಎಂದು ಹೇಳಿ ಚಿತ್ತೂರು ಪೊಲೀಸರಿಂದ ಮೆಮೋ ಪಡೆದು, ಇದನ್ನು ಎಸಿಎಂಎ ನ್ಯಾಯಾಲಯಕ್ಕೆ ಸಲ್ಲಿಸಿ ಬಳಿಕ ತನಿಖೆ ಅನುಮತಿ ಪಡೆಯಬೇಕಿದೆ. ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಚಿತ್ತೂರು ಪೊಲೀಸರ ಜತೆ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಸೋಮವಾರ ಅವರಿಂದ ವರದಿ ಪಡೆದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ತಮ್ಮ ಪ್ರಕರಣದ ತನಿಖೆ ಪೂರ್ಣಗೊಳಿಸಿದ ನಂತರವಷ್ಟೆಆರೋಪಿಯನ್ನು ಬೆಂಗಳೂರು ಪೊಲೀಸರಿಗೊಪ್ಪಿಸಲು ಚಿತ್ತೂರು ಜಿಲ್ಲಾ ಪೊಲೀಸರು ನಿರ್ಧರಿಸಿದ್ದಾರೆ. ಈ ಸಂಬಂಧ ಭಾನುವಾರ ಸಂಜೆ ದೂರವಾಣಿ ಮೂಲಕ ‘ಕನ್ನಡಪ್ರಭ'ಕ್ಕೆ ಮಾತನಾಡಿದ ಚಿತ್ತೂರು ಜಿಲ್ಲಾ ಪೊಲೀಸ್‌ ಶ್ರೀನಿವಾಸ್‌ ಘಟಮೇನಿ ಅವರು, ಮಧುಕರರೆಡ್ಡಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ಆತ ಸೆಂಟ್ರಲ್‌ ಜೈಲ್‌ನಿಂದ ತಪ್ಪಿಸಿಕೊಂಡಿದ್ದ ಕೊಲೆ ಪ್ರಕರಣದ ಶಿಕ್ಷಾಹÜರ್‍ ಕೈದಿ ಆಗಿದ್ದು, ಹೀಗಾಗಿ ಆತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. 2004ರ ಆನಂದ ರೆಡ್ಡಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಗುರಿಯಾಗಿದ್ದ ರೆಡ್ಡಿ , 2011ರಲ್ಲಿ ಕಡಪ ಸೆಂಟ್ರಲ್‌ ಜೈಲ್‌ನಿಂದ ತಪ್ಪಿಸಿಕೊಂಡಿದ್ದ. ಆನಂತರ ಆತನ ವಿರುದ್ಧ ಧರ್ಮಾವ​Üರಂನಲ್ಲಿ ಪ್ರಮೀಳಾ ಕೊಲೆ ಪ್ರಕರಣ ಹಾಗೂ ಪಿಲೇರಿಯಲ್ಲಿ ನಾರಾಯಣ ಎಂಬು​ವರ ಕೊಲೆ ಯತ್ನ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ನಮ್ಮ ಪ್ರಕ​ರಣಗಳು ತನಿಖೆ ಪೂರ್ಣಗೊಳಿಸಿದ ನಂತರ ಎಟಿಎಂ ಕೇಂದ್ರ ಮಹಿಳೆ ಮೇಲಿನ ಹಲ್ಲೆ ಪ್ರಕರಣ ಕುರಿತು ತನಿಖೆಗೆ ಆರೋಪಿಯನ್ನು ಒಪ್ಪಿಸಲಾಗುತ್ತದೆ ಎಂದು ಚಿತ್ತೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಶನಿವಾರ ಮದನಪಲ್ಲಿ ಪೊಲೀಸರಿಗೆ ಸೆರೆಯಾಗಿದ್ದ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮಧುಕರ ರೆಡ್ಡಿಗೆ ಹದಿನೈದು ದಿನಗಳು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಸ್ಥಳೀಯ ನ್ಯಾಯಾಲಯವು ಭಾನುವಾರ ಆದೇಶ ಹೊರಡಿಸಿದೆ. ಆಂಧ್ರದ ಮದನಪಲ್ಲಿಯ ಬಾಬು ಕಾಲೋನಿ ಸಮೀಪ ಮಧುಕರ ರೆಡ್ಡಿಯನ್ನು ಬಂಧಿಸಿದ್ದ ಪೊಲೀಸರು, ಭಾನುವಾರ ಬೆಳಗ್ಗೆ ಪಿಳೇರಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆರೋಪಿಗೆ 15 ದಿನಗಳು ನ್ಯಾಯಾಂಗ ಬಂಧನ್ಕಕೊಪ್ಪಿಸಿ ನ್ಯಾಯಾಲಯವು ಆದೇಶ ನೀಡಿದೆ ಎಂದು ಚಿತ್ತೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ ಮಾಹಿತಿ ನೀಡಿದ್ದಾರೆ.

 

Latest Videos
Follow Us:
Download App:
  • android
  • ios