ಭಾರತದಲ್ಲೇ ಉತ್ಪಾದಿಸಿ ಭಾರತಕ್ಕೇ ಮಾರಿ: ನಿರ್ಮಲಾ ಸೀತಾರಾಮನ್ ಆಹ್ವಾನ
ರಕ್ಷಣಾ ಸಚಿವರಿಂದ ‘ಏರೋ ಇಂಡಿಯಾ-2019’ಕ್ಕೆ ವಿಧ್ಯುಕ್ತ ಚಾಲನೆ | ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಮುಕ್ತ ಆಹ್ವಾನ | ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲಿ ರಕ್ಷಣಾ ಸಾಮಗ್ರಿ ಉತ್ಪಾದನೆಗೆ ವಿದೇಶಿ ಕಂಪನಿಗಳಿಗೆ ಕರೆ
ಬೆಂಗಳೂರು (ಫೆ. 21): ಭಾರತದ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರಗಳಲ್ಲಿ ಇರುವ ವಿಪುಲ ಅವಕಾಶ ಬಳಸಿಕೊಳ್ಳಲು ದೊಡ್ಡ ಮಟ್ಟದ ಹೂಡಿಕೆ ಮಾಡುವಂತೆ ವಿದೇಶಿ ಕಂಪನಿಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮುಕ್ತ ಆಹ್ವಾನ ನೀಡಿದ್ದಾರೆ.
‘ಮೇಕ್ ಇನ್ ಇಂಡಿಯಾ’ಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಮೇಕ್ ಇನ್ ಇಂಡಿಯಾದಲ್ಲಿ ಉತ್ಪಾದಿಸಿದ ಸಾಮಗ್ರಿಗಳ ಖರೀದಿಗೆ ರಕ್ಷಣಾ ಇಲಾಖೆ ಮೊದಲ ಆದ್ಯತೆ ನೀಡುತ್ತದೆ. ಜತೆಗೆ ರಕ್ಷಣಾ ವಲಯದಲ್ಲಿ ಶೇ.100ರಷ್ಟುವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ ಹೂಡಿಕೆಗಿರುವ ವಿಪುಲ ಅವಕಾಶಗಳನ್ನು ಬಳಸಿಕೊಂಡು ಭಾರತದಲ್ಲಿ ಹೂಡಿಕೆ ಮಾಡಿ, ಇಲ್ಲೇ ಉತ್ಪಾದನೆ ಮಾಡಿ ಎಂದು ಕರೆ ನೀಡಿದರು.
ಬೆಂಗಳೂರಿನ ಯಲಹಂಕ ಐಎಎಫ್ ವಾಯುನೆಲೆಯಲ್ಲಿ ಬುಧವಾರದಿಂದ ಆರಂಭವಾದ ‘ಏರೋ ಇಂಡಿಯಾ-2019’ ವೈಮಾನಿಕ ಪ್ರದರ್ಶನಕ್ಕೆ ವಿಧ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಏರೋ ಇಂಡಿಯಾ ದೇಶದ ಹೆಮ್ಮೆಯ ಪ್ರತೀಕ. ಪ್ರತಿ ಬಾರಿ ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರಗಳಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಿದ್ದ ಏರೋ ಇಂಡಿಯಾದೊಂದಿಗೆ ಈ ಬಾರಿ ನಾಗರಿಕ ವಿಮಾನಯಾನವೂ ಕೈ ಜೋಡಿಸಿದೆ. ರಕ್ಷಣೆ, ನಾಗರಿಕ, ಸರಕು ಸಾಗಾಣಿಕೆ ವೈಮಾನಿಕ ಕ್ಷೇತ್ರದ ಉತ್ಪಾದನಾ ವಲಯದಲ್ಲಿ ಭಾರತದಲ್ಲಿ ವಿಪುಲ ಅವಕಾಶಗಳಿವೆ. 12ನೇ ಏರೋ ಇಂಡಿಯಾ ಆವೃತ್ತಿ ಮೂಲಕ ಭಾರತವು ‘ರನ್ ವೇ ಟು ಬಿಲಿಯನ್ ಆಪರ್ಚುನಿಟೀಸ್’ ಎಂಬ ಮಾತಿನಂತೆ ಕೋಟ್ಯಂತರ ಅವಕಾಶಗಳನ್ನು ತೆರೆದಿಟ್ಟಿದೆ. ದೇಶದಲ್ಲಿ ಉತ್ಪಾದನಾ ಕ್ಷೇತ್ರದಿಂದ ಜಿಡಿಪಿಗೆ ಕೊಡುಗೆ ಬರಬೇಕು ಎಂಬ ನಿಟ್ಟಿನಲ್ಲಿ ‘ಮೇಕ್ ಇನ್ ಇಂಡಿಯಾ’ಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು.
ಉತ್ಪಾದನಾ ಕ್ಷೇತ್ರದ ಹೂಡಿಕೆಗೆ ಆದ್ಯತೆ:
ದೇಶಕ್ಕೆ ಜಿಡಿಪಿ ತಂದುಕೊಡುವ ಪ್ರಮುಖ ಕ್ಷೇತ್ರಗಳು ಕೃಷಿ, ಉತ್ಪಾದನೆ, ಸೇವಾ ವಲಯ. ಈ ಮೂರೂ ಕ್ಷೇತ್ರಗಳಲ್ಲೂ ಬೆಂಗಳೂರು ತನ್ನದೇ ಹೆಗ್ಗುರುತು ಮೂಡಿಸಿದೆ. ಇದೇ ದಾರಿಯಲ್ಲಿ ‘ಮೇಕ್ ಇನ್ ಇಂಡಿಯಾ’ ಮೂಲಕ ದೇಶದಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಪ್ರೋತ್ಸಾಹ ನೀಡಲಾಗುವುದು. ರಕ್ಷಣಾ ಇಲಾಖೆಯು ಕಳೆದ ನಾಲ್ಕು ವರ್ಷದಲ್ಲಿ 150 ಒಪ್ಪಂದ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಭಾರತೀಯ ವ್ಯಾಪಾರಿಗಳಿಂದ 127,500 ಕೋಟಿ ರು. ಉತ್ಪನ್ನಗಳನ್ನು ಖರೀದಿ ಮಾಡಿದೆ.
ಅಲ್ಲದೆ, ಹಿಂದಿನ ಆರ್ಥಿಕ ವರ್ಷದ ಅಕ್ಟೋಬರ್ 2018ರವರೆಗೆ 2,79,950 ಕೋಟಿ ರು. ಮೊತ್ತದ ಉತ್ಪನ್ನಗಳ ಖರೀದಿಗೆ ಮುಂದಾಗಿದ್ದೇವೆ. ಇದರಲ್ಲಿ ಮೇಕ್ ಇನ್ ಇಂಡಿಯಾಗೆ ಪ್ರಮುಖ ಆದ್ಯತೆ ನೀಡಲಾಗುವುದು. ಖಾಸಗಿ ಕಂಪನಿಗಳಿಗೂ ಶೇ.40ರಷ್ಟುಅವಕಾಶ ಕಲ್ಪಿಸಲಾಗುವುದು. ಜತೆಗೆ ವಿದೇಶಿ ಬಂಡವಾಳ ಹೂಡಿಕೆಗೆ ನಿಯಮ ಸಡಿಲಿಕೆ ಮಾಡಿ ಶೇ.100ರಷ್ಟುವಿದೇಶಿ ಬಂಡವಾಳ ನೇರ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ದೇಶದಲ್ಲಿ ಬಂಡವಾಳ ಹೂಡಿ, ಇಲ್ಲೇ ಉತ್ಪಾದನೆ ಮಾಡಿ, ನೀವೂ ಬೆಳೆಯಿರಿ ನಮ್ಮ ರಕ್ಷಣಾ ಕ್ಷೇತ್ರವನ್ನೂ ಗಟ್ಟಿಗೊಳಿಸಿ ಎಂದು ಕರೆ ನೀಡಿದರು.
ವಿಶ್ವದ ದಿಗ್ಗಜರೊಂದಿಗೆ ಸರಿಸಮ:
‘ಏರೋ ಇಂಡಿಯಾ’ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ವಿಶ್ವದ ದಿಗ್ಗಜ ರಾಷ್ಟ್ರಗಳೊಂದಿಗೆ ಸರಿಸಮನಾಗಿ ನಿಲ್ಲಲು ಸಹಕಾರಿಯಾಗಿದೆ. ಭಾರತದಲ್ಲಿ ಈವರೆಗೆ ನಾಲ್ಕು ಸಾವಿರ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದಿಸಿದ್ದೇವೆ. ಇಲ್ಲಿನ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು ವಿದೇಶಗಳಿಗೂ ರಫ್ತಾಗಿವೆ. ರಕ್ಷಣಾ ವಲಯದಿಂದಾಗಿ 10 ಸಾವಿರ ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಏರೋ ಇಂಡಿಯಾದಲ್ಲಿ 600 ಸ್ವದೇಶಿ ಮತ್ತು 400 ವಿದೇಶಿ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಹೀಗಾಗಿ ರಕ್ಷಣಾ ಸಾಮಗ್ರಿಗಳ ಖರೀದಿ ಒಪ್ಪಂದ, ತಂತ್ರಜ್ಞಾನಗಳ ವಿನಿಮಯ ಸೇರಿ ಹಲವು ವ್ಯವಹಾರ ನಡೆಯಲಿದೆ. ಇದು ರಕ್ಷಣಾ ವಲಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಎರಡು ಕಾರಿಡಾರ್‌ಗಳ ನಿರ್ಮಾಣ:
ಹೊಸೂರು ರಸ್ತೆಯಿಂದ ಬೆಂಗಳೂರು-ತುಮಕೂರುವರೆಗೆ ಹಾಗೂ ಉತ್ತರಪ್ರದೇಶದಲ್ಲಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಆ ಕಾರಿಡಾರ್‌ಗಳ ನಡುವೆ ತಲಾ ಆರು ರಕ್ಷಣಾ ಸಾಮಗ್ರಿ ಉತ್ಪಾದನಾ ಮತ್ತು ಆವಿಷ್ಕಾರ ಕೇಂದ್ರ ನಿರ್ಮಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲೂ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ರಕ್ಷಣಾ ಇಲಾಖೆ ರಾಜ್ಯ ಸಚಿವ ಡಾ.ಸುಭಾಷ್ ರಾಮ್‌ರಾವ್ ಭಮ್ರೆ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿರೇಂದರ್ ಸಿಂಗ್ ದನೋಯ್, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಸೇರಿದಂತೆ ಹಲವರು ಹಾಜರಿದ್ದರು.